×
Ad

ಉತ್ತರ ಪ್ರದೇಶ: ಎಂಟು ಬಾರಿ ಅಕ್ರಮ ಮತದಾನ ಮಾಡಿದ ಬಿಜೆಪಿ ಕಾರ್ಯಕರ್ತನ ಪುತ್ರನ ಬಂಧನ

Update: 2024-05-20 11:45 IST

Screenshot of a video | PC: X \ @yadavakhilesh/X

ಲಕ್ನೋ: ಉತ್ತರ ಪ್ರದೇಶದ ಇಟಾಹ್‌ ಜಿಲ್ಲೆಯ ಫರೂಖಾಬಾದ್‌ ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಬಿಜೆಪಿ ಪರ ಎಂಟು ಬಾರಿ ಮತ ಚಲಾಯಿಸಿದ ಬಿಜೆಪಿ ಕಾರ್ಯಕರ್ತನೊಬ್ಬನ ಹದಿಹರೆಯದ ಪುತ್ರನನ್ನು ಬಂಧಿಸಲಾಗಿದೆ. ಆತನ ಈ ಅಕ್ರಮ ಕೃತ್ಯದ ವೀಡಿಯೋ ಕೂಡ ವೈರಲ್‌ ಆಗಿದೆ.

ಆರೋಪಿಯನ್ನು ಖಿರಿಯಾ ಪಮರನ್‌ ಗ್ರಾಮದ ಅನಿಲ್‌ ಸಿಂಗ್‌ ಎಂಬವರ ಪುತ್ರ ರಾಜನ್‌ ಸಿಂಗ್‌ ಎಂದು ಗುರುತಿಸಲಾಗಿದೆ ಎಂದು ಬಂಧನದ ಕುರಿತು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ನವದೀಪ್‌ ರಿನ್ವಾ ಮಾಹಿತಿ ನೀಡಿದ್ದಾರೆ.

ಐಪಿಸಿ ಹಾಗೂ ಜನಪ್ರತಿನಿಧಿತ್ವ ಕಾಯಿದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಯುವಕ ಎಂಟು ಬಾರಿ ಮತ ಚಲಾಯಿಸುತ್ತಿರುವ ವೀಡಿಯೋವನ್ನು ಎಕ್ಸ್‌ ಮೂಲಕ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹಂಚಿಕೊಂಡಿದ್ದರು.

ಫರೂಕಾಬಾದ್‌ ಕ್ಷೇತ್ರದಿದ ಬಿಜೆಪಿಯಿಂದ ಮುಕೇಶ್‌ ರಾಜಪುತ್‌ ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ನಾಲ್ಕನೇ ಹಂತದಲ್ಲಿ ಮೇ 13ರಂದು ಮತದಾನ ನಡೆದಿತ್ತು.

ಈ ನಿರ್ದಿಷ್ಟ ಮತಗಟ್ಟೆಯಲ್ಲಿದ್ದ ಎಲ್ಲಾ ಅಧಿಕಾರಿಗಳನ್ನು ವಜಾಗೊಳಿಸಲು ಹಾಗೂ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರಲ್ಲದೆ ಮರುಮತದಾನಕ್ಕೂ ಶಿಫಾರಸು ಮಾಡಲಾಗಿದೆ ಎಂದಿದ್ದಾರೆ.

ಆರೋಪಿ ಯುವಕನ ತಂದೆ ಅನಿಲ್‌ ಸಿಂಗ್‌ ಖಿರಿ ಪಮರನ್‌ ಗ್ರಾಮ ಪ್ರಧಾನರಾಗಿದ್ದು ಬಿಜೆಪಿ ಸದಸ್ಯರೂ ಆಗಿದ್ದಾರೆ.

ವಿವಾದದ ಕುರಿತು ಪ್ರತಿಕ್ರಿಯಿಸಿದ ಅನಿಲ್‌ ಸಿಂಗ್‌, “ಆತ (ರಾಜನ್‌ ಸಿಂಗ್)‌ ಮತಯಂತ್ರವನ್ನು ಪರೀಕ್ಷಿಸುತ್ತಿರುವಾಗ ಮತ ಚಲಾಯಿಸುತ್ತಿದ್ದ. ಇನ್ನು ಕೆಲ ಬಾರಿ ಗ್ರಾಮದ ಭಿನ್ನ ಸಾಮರ್ಥ್ಯದ ಜನರ ಪರವಾಗಿ ಮತಚಲಾಯಿಸಿದ್ದ. ಅದನ್ನು ತಿರುಚಲಾಗಿದೆ,” ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಬಿಜೆಪಿಗೆ ಪ್ರಜಾಪ್ರಭುತ್ವವನ್ನು ಲೂಟಿಗೈದು ಆಡಳಿತ ಯಂತ್ರದ ಮೇಲೆ ಒತ್ತಡ ಹೇರುವ ಉದ್ದೇಶವಿದೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News