ಮೈತ್ರಿ ಅಭ್ಯರ್ಥಿ ಸೋಲಿಸಲು ಬಿಜೆಪಿ ರಣತಂತ್ರ: ಸಿ.ಎಂ.ಲಿಂಗಪ್ಪ ಪುತ್ರ ಚಂದ್ರಶೇಖರ್ ಬಿಜೆಪಿ ಸೇರ್ಪಡೆ

Update: 2018-10-10 15:06 GMT

ಬೆಂಗಳೂರು, ಅ.10: ರಾಮನಗರ ಜಿಲ್ಲಾ ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಅವರ ಪುತ್ರ ಚಂದ್ರಶೇಖರ್ ಪಕ್ಷ ತೊರೆದು ರಾಜ್ಯಾಧ್ಯಕ್ಷ ಯಡಿಯೂರಪ್ಪ ನಿವಾಸದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಬುಧವಾರ ಡಾಲರ್ಸ್‌ ಕಾಲನಿಯಲ್ಲಿರುವ ಬಿಎಸ್‌ವೈ ನಿವಾಸದಲ್ಲಿ ಸೇರ್ಪಡೆಯಾದ ಚಂದ್ರಶೇಖರ್‌ಗೆ ಪಕ್ಷದ ಶಾಲು ಹಾಕಿ, ಧ್ವಜವನ್ನು ನೀಡಿ ಪಕ್ಷಕ್ಕೆ ಆಹ್ವಾನಿಸಿದರು. ಈ ವೇಳೆ ಮಾತನಾಡಿದ ಬಿಎಸ್‌ವೈ, ರಾಮನಗರ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಎಂದು ಅವರು ಸೇರ್ಪಡೆ ಆಗಿಲ್ಲ. ಇನ್ನೂ 2 ದಿನಗಳಲ್ಲಿ ರಾಮನಗರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಕ್ಷದ ಅಭ್ಯರ್ಥಿ ಘೋಷಣೆ ಮಾಡಲಾಗುವುದು ಎಂದರು.

ಬಿಜೆಪಿ ಬಲಪಡಿಸುವುದು ನನ್ನ ಗುರಿ: ‘ನನ್ನ ಆತ್ಮತೃಪ್ತಿಗಾಗಿ ನಾನು ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿನ ಉಸಿರುಗಟ್ಟಿಸುವ ವಾತಾವರಣವಿದೆ. ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ನನ್ನ ಗುರಿಯಾಗಿದೆ. ನನ್ನೊಂದಿಗೆ ಕ್ಷೇತ್ರ ಹಲವು ಮುಖಂಡರೂ ಬಿಜೆಪಿಗೆ ಸೇರ್ಪಡೆಯಾಗಲಿದ್ದು, ರಾಮನಗರದಲ್ಲಿ ಬಿಜೆಪಿ ಬಲಪಡಿಸುವುದು ನನ್ನ ಗುರಿ ಎಂದು ಚಂದ್ರಶೇಖರ್ ಹೇಳಿದರು.

‘ರಾಮನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಯಾವುದೇ ಕಾರಣಕ್ಕೂ ಪ್ರಚಾರ ನಡೆಸುವುದಿಲ್ಲ. ಹಾಗೆಂದು ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುವುದಿಲ್ಲ. ಬಂಡಾಯ ಅಭ್ಯರ್ಥಿ ಕಣಕ್ಕಿಳಿಸಲು ಚಿಂತನೆ ನಡೆಸಲಾಗಿದೆ’ ಎಂದು ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

‘ಬಿಜೆಪಿ ನೀತಿ-ನಿಯಮಗಳೇ ಬೇರೆ. ನಮಗೆ ಅದು ಹೊಂದಾಣಿಕೆ ಆಗುವುದಿಲ್ಲ. ಹೀಗಾಗಿ ಅವರಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ಅಷ್ಟೇ ಅಲ್ಲದೆ ಇಲ್ಲಿಯವರೆಗೂ ಬಿಜೆಪಿಯ ಯಾವುದೇ ನಾಯಕರೂ ನಮ್ಮನ್ನು ಸಂಪರ್ಕಿಸಿಲ್ಲ. ಒಂದು ವೇಳೆ ಸಂಪರ್ಕಕ್ಕೆ ಪ್ರಯತ್ನಿಸಿದರೂ ನನ್ನ ನಿರ್ಧಾರ ಬದಲಿಸುವುದಿಲ್ಲ’ ಎಂದು ಲಿಂಗಪ್ಪ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News