ಭಟ್ಕಳ: ಅ.13-17ರವರೆಗೆ ವಿದ್ಯಾರ್ಥಿಗಳಿಗಾಗಿ ಪತ್ರಿಕೋದ್ಯಮ ಕಾರ್ಯಾಗಾರ

Update: 2018-10-10 15:32 GMT
ಸಾಂದರ್ಭಿಕ ಚಿತ್ರ

ಭಟ್ಕಳ, ಅ.10: ಇಲ್ಲಿನ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯು ಮಂಗಳೂರಿನ ಮಾಧ್ಯಮ ಕೇಂದ್ರದ ಸಹಕಾರದೊಂದಿಗೆ ಅ.13 ರಿಂದ 17ರವರೆಗೆ ವಿದ್ಯಾರ್ಥಿಗಳಿಗಾಗಿ ಪತ್ರಿಕೋದ್ಯಮ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ತಂಝೀಮ್ ಮಾಧ್ಯಮ ಸಮಿತಿಯ ಸಂಚಾಲಕ, ಹಿರಿಯ ಪತ್ರಕರ್ತ ಆಫ್ತಾಬ್ ಹುಸೇನ್ ಕೋಲಾ ತಿಳಿಸಿದ್ದಾರೆ.

ಬುಧವಾರ ತಂಝೀಮ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. 5 ದಿನಗಳ ಈ ಕಾರ್ಯಾಗಾರದಲ್ಲಿ ಮಾಧ್ಯಮ ಕ್ಷೇತ್ರದ ವಿವಿಧ ಆಯಾಮಗಳ ಮೇಲೆ ನಾಡಿನ ಅನುಭವಿ ಪತ್ರಕರ್ತರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ಮಾಧ್ಯಮ ಕೇಂದ್ರದ ನಿರ್ದೇಶಕ ಅಬ್ದುಸ್ಸಲಾಂ ಪುತ್ತಿಗೆ, ಪತ್ರಿಕೋದ್ಯಮದ ಕುರಿತಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಈ ಕ್ಷೇತ್ರದಲ್ಲಿರುವ ಅಪಾರ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು 5 ದಿನಗಳ ಕಾರ್ಯಾಗಾರದಲ್ಲಿ ಶಿಬಿರಾರ್ಥಿಗಳಿಗೆ ತಿಳಿಸಿಕೊಡಲಾಗುವುದು. ಪತ್ರಿಕಾ ರಂಗವನ್ನು ವೃತ್ತಿಯನ್ನಾಗಿ ಮಾಡಿಕೊಂಡು ತಮ್ಮ ಬದುಕನ್ನು ಹೇಗೆ ರೂಪಿಸಿಕೊಳ್ಳಬಹುದೆಂಬ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವದರ ಮೂಲಕ ಪತ್ರಿಕೋದ್ಯಮದ ಎಲ್ಲ ಆಯಾಮಗಳ ಕುರಿತು ಬೆಳಕು ಚೆಲ್ಲುವುದು ಈ ಕಾರ್ಯಾಗಾರದ ಉದ್ದೇಶವಾಗಿದೆ ಎಂದರು.

ಭಟ್ಕಳದ ವಿದ್ಯಾರ್ಥಿಗಳಲ್ಲಿ ಸ್ವತಂತ್ರ ಪತ್ರಿಕೋದ್ಯಮದಲ್ಲಿ ಬಹಳಷ್ಟು ಆಸಕ್ತಿಯಿದ್ದು, ಬಹಳಷ್ಟು ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ ಆಯ್ದ ವಿದ್ಯಾರ್ಥಿಗಳನ್ನು ಮಾತ್ರ ಶಿಬಿರದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದ ಅವರು, ಹಲವು ವೃತ್ತಿನಿರತ ಪತ್ರಕರ್ತರು ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯಲ್ಲಿರುವ ಹೆಸರಾಂತ ಪತ್ರಕರ್ತರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ ಎಂದು ಎಂದು ಅಬ್ದುಸ್ಸಲಾಂ ಪುತ್ತಿಗೆ ತಿಳಿಸಿದರು.

ತುಮಕೂರು ಪತ್ರಿಕೋದ್ಯಮ ಕಾಲೇಜಿನ ಮುಖ್ಯಸ್ಥ ಸೀಬಂತಿ ಪದ್ಮನಾಭ, ದ ಹಿಂದೂ ಪತ್ರಿಕೆ ಹಿರಿಯ ಪತ್ರಕರ್ತ ಎಂ.ರಘುರಾಂ, ಬೆಂಗಳೂರಿನ ಹಿರಿಯ ಪತ್ರಕರ್ತ ಕೆ.ಪುಟ್ಟಸ್ವಾಮಿ, ಫ್ರಂಟ್ ಲೈನ್‌ನ ಸಹಸಂಪಾದಕ ವಿಖಾರ್ ಆಹ್ಮದ್ ಸಯೀದ್, ಬೆಂಗಳೂರು ದೂರದರ್ಶನದ ಮಾಜಿ ನಿರ್ದೇಶಕ ಎ.ಎಸ್. ಚಂದ್ರಮೌಳಿ, ಸ್ಕ್ರೋಲ್ ಇನ್‌ನ ಹಿರಿಯ ಬರಹಗಾರ ಟಿ.ಎ. ಅಮೀರುದ್ದೀನ್, ಹೈದರಾಬಾದ್‌ನ ಡಿಜಿಟಲ್ ಮಾರ್ಕೇಟಿಂಗ್ ಮುಖ್ಯಸ್ಥ ಅಹ್ಮದ್. ಝೆಡ್ ದಾಮೂದಿ, ವಾರ್ತಾಭಾರತಿಯ ಪ್ರಧಾನ ಸಂಪಾದಕ ಎ.ಎಸ್. ಪುತ್ತಿಗೆ, ಬೆಂಗಳೂರಿನ ಪಿ.ಆರ್. ಕನ್ಸಲ್ಟಂಟ್ ಜೀಸಸ್ ಮಿಲ್ಟನ್ ರೂಸಿ, ಪ್ರಜಾವಾಣಿ ಸಹಸಂಪಾದಕ ಎನ್.ಎ.ಎಂ. ಇಸ್ಮಾಯಿಲ್, ಡೆಕ್ಕನ್ ಕ್ರೋನಿಕಲ್ ಉಪಸಂಪಾದಕ ಜಾವೀದ್ ಗೆಹಲೋತ್, ಮಂಗಳೂರು ಟೈಮ್ಸ್ ಆಫ್ ಇಂಡಿಯಾದ ಫೋಟೊ ಪತ್ರಕರ್ತ ರವಿ ಪೊಸ್ವಣಿಕೆ, ಹೈದರಾಬಾದ್‌ನ ಸಿಯಾಸತ್ ಉರ್ದು ದೈನಿಕ ಸಂಪಾದಕ ಝಹೀರುದ್ದೀನ್ ಖಾನ್, ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
 
ಅ.17ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದು, ಖಲೀಝ್ ಟೈಮ್ಸ್ ನ ಮಾಜಿ ಅಬುದಾಬಿ ಬ್ಯೂರೊ ಚೀಫ್ ಸೈಯದ್ ಖಮರ್ ಹಸನ್ ಅತಿಥಿಯಾಗಿ ಉಪಸ್ಥಿತರಿರುವರು ಎಂದು ತಂಝೀಮ್ ಪ್ರಧಾನ ಕಾರ್ಯದರ್ಶಿ ಮುಹಿದ್ದೀನ್ ಅಲ್ತಾಫ್ ಖರೂರಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ತಂಝೀಮ್ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಕಾರ್ಯದರ್ಶಿ ಯಾಸೀರ್ ಬರ್ಮಾವರ್ ನದ್ವಿ, ಮಾಧ್ಯಮ ಸಮಿತಿಯ ಇನಾಯತುಲ್ಲಾ ಗವಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News