ವಿವಾದಾತ್ಮಕವಾಗಿ ಮಾತನಾಡುವವರಿಗೆ ಉತ್ತರ ಕೊಡುವ ಅಗತ್ಯವಿಲ್ಲ: ಪ್ರತಾಪ್ ಸಿಂಹಗೆ ಸಿಎಂ ತಿರುಗೇಟು

Update: 2018-10-10 15:52 GMT

ಮೈಸೂರು,ಅ.10: ವಿವಾದಾತ್ಮಕ ಹೇಳಿಕೆ ನೀಡುವವರ ಮಾತಿಗೆ ಉತ್ತರಿಸುವ ಅಗತ್ಯವಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.

ನಗರದ ಕಲಾಮಂದಿರದಲ್ಲಿ ಬುಧವಾರ ದಸರಾ ಚಲನಚಿತ್ರೋತ್ಸವ ಉದ್ಘಾಟಿಸಿ ಹೊರಬಂದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಟಿಪ್ಪು ಜಯಂತಿ ಮತ್ತು ಮಹಿಷಾ ದಸರಾ ಆಚರಣೆ ತಡೆಯಿರಿ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಆಕ್ರೋಶಿತರಾದ ಆದ ಸಿಎಂ, ಸಮಾಜದ ಶಾಂತಿ ಕೆಡಿಸುವ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ. ವಿವಾದಾತ್ಮಕವಾಗಿ ಮಾತನಾಡುವವರಿಗೆ ಉತ್ತರ ಕೊಡುವ ಅಗತ್ಯವಿಲ್ಲ. ಈ ಸಂದರ್ಭದಲ್ಲಿ ಈ ಹೇಳಿಕೆ ಅಪ್ರಸ್ತುತ. ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುವ ಅಗತ್ಯವಿಲ್ಲ ಎಂದು ಹೇಳಿದರು.

ನಾಡಿನ ಶಾಂತಿ ಸುವ್ಯವಸ್ಥೆ ಕಾಪಾಡುವುದು ನನ್ನ ಜವಾಬ್ದಾರಿ. ಯಾರಿಂದಲೂ ಹೇಳಿಸಿಕೊಂಡು ನಾನು ಅಧಿಕಾರ ನಡೆಸಬೇಕಿಲ್ಲ. ಯಾವ ಸಂದರ್ಭದಲ್ಲಿ ಎಂತಹ ತೀರ್ಮಾನ ಮಾಡಬೇಕು ಎಂಬುದು ನನಗೆ ಗೊತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.

ನಾಡಹಬ್ಬ ದಸರಾ ಉದ್ಘಾಟನೆ ಮಾಡಿ ಒಂದು ಕಡೆ ಸಂತೋಷವಾದರೆ ಮತ್ತೊಂದು ಕಡೆ ಬೇಸರವಾಗಿದೆ. ಕಾರಣ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಹಲವೆಡೆ ಅತಿವೃಷ್ಠಿಯೂ ಸಂಭವಿಸಿದೆ. ಜೊತೆಗೆ ಕೆಲವು ಪ್ರದೇಶಗಳಿಗೆ ಮಳೆಯೇ ಆಗಿಲ್ಲ. ರಾಜ್ಯದ ಜನರು ಸುಭಿಕ್ಷೆಯಿಂದ ಇರಲಿ ಎಂದು ತಾಯಿ ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.

ಜಿಲ್ಲೆಯ ಕಾಂಗ್ರೆಸ್ ಸಂಸದರು, ಶಾಸಕರ ಗೈರು ಹಾಜರಿ ಕುರಿತು ಮಾತನಾಡಿದ ಅವರು, ಎಲ್ಲರೂ ದಸರಾ ಮಹೋತ್ಸವಕ್ಕೆ ಸಹಕರಿಸುತ್ತಿದ್ದಾರೆ. ಲೋಕಸಭಾ ಚುನಾವಣೆಗಳು ಘೋಷಣೆಯಾದ ಹಿನ್ನಲೆಯಲ್ಲಿ ಅವರದೇ ಆದ ಕೆಲಸಗಳು ಇರುವುದರಿಂದ ಬಂದಿಲ್ಲ. ಸಚಿವರಾದ ಜಯಮಾಲ, ರಾಜಶೇಖರ ಬಸವರಾಜ ಪಾಟೀಲ್ ಆಗಮಿಸಿದ್ದಾರೆ. ಮುಂದೆ ಎಲ್ಲರೂ ಬರುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಕುಮಾರಸ್ವಾಮಿ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News