ಸಚಿವ ಎಂ.ಜೆ.ಅಕ್ಬರ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಪ್ರಶ್ನೆಯಿಂದ ತಪ್ಪಿಸಿಕೊಂಡ ಸುಶ್ಮಾ, ಸೀತಾರಾಮನ್

Update: 2018-10-10 16:07 GMT

ಹೊಸದಿಲ್ಲಿ,ಅ.10: ತಮ್ಮ ಸಹೋದ್ಯೋಗಿ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಆರೋಪದ ಕುರಿತು ಕೇಳಲಾದ ಪ್ರಶ್ನೆಗೆ ಸಚಿವೆಯರಾದ ಸುಶ್ಮಾ ಸ್ವರಾಜ್ ಮತ್ತು ನಿರ್ಮಲಾ ಸೀತಾರಾಮನ್ ಉತ್ತರಿಸದೆ ತಪ್ಪಿಸಿಕೊಂಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.

ಅಕ್ಬರ್ ವಿರುದ್ಧ ತನಿಖೆಗೆ ಆದೇಶಿಸಲಾಗುವುದೇ ಎಂದು ಮಂಗಳವಾರ ವರದಿಗಾರರು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಬಳಿ ಕೇಳಿದಾಗ ಏನೂ ಉತ್ತರಿಸದೆ ಸ್ಥಳದಿಂದ ತೆರಳಿದ್ದರು. ಇನ್ನು ರಕ್ಷಣಾ ಸಚಿವೆಯಲ್ಲಿ ಈ ಕುರಿತು ಕೇಳಿದಾಗ ಆಕೆ ಇದಕ್ಕುತ್ತರಿಸಲು ತಾನು ಸೂಕ್ತ ವ್ಯಕ್ತಿಯಲ್ಲ ಎಂದು ತಿಳಿಸಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. ಈ ಇಬ್ಬರು ಸಚಿವೆಯರೂ ರಕ್ಷಣಾ ಸಂಪುಟ ಸಮಿತಿಯ ಭಾಗವಾಗಿದ್ದಾರೆ.

ಸದ್ಯ ದೇಶದಲ್ಲಿ ನಡೆಯುತ್ತಿರುವ ಮೀ ಟೂ ಚಳವಳಿಯ ಕುರಿತು ಮಾತನಾಡಿದ ಸೀತಾರಾಮನ್, ಈ ಸತ್ಯವನ್ನು ಹೇಳುವ ಈ ಮಹಿಳೆಯರ ಧೈರ್ಯವನ್ನು ನಾನು ಮೆಚ್ಚುತ್ತೇನೆ. ಈ ರೀತಿಯ ಘಟನೆಯನ್ನು ಎದುರಿಸಿರುವ ಮಹಿಳೆಯರ ಪಾಲಿಗೆ ಅದೊಂದು ಕಹಿ ನೆನಪಾಗಿದೆ ಎಂದು ತಿಳಿಸಿದ್ದಾರೆ.

ಆದರೆ ಇದೇ ವೇಳೆ ಎಂ.ಜೆ. ಅಕ್ಬರ್ ಕುರಿತು ಕೇಳಲಾದ ಪ್ರಶ್ನೆಗೆ, “ನಾನು ಇದಕ್ಕೆ ಉತ್ತರಿಸಲಾರೆ. ಇದಕ್ಕೆ ಉತ್ತರ ನೀಡಲು ನಾನು ಸೂಕ್ತ ವ್ಯಕ್ತಿಯಲ್ಲ ಎಂದು ಸೀತಾರಾಮನ್ ಸಮಜಾಯಿಷಿ ನೀಡಿದ್ದಾರೆ ಎಂದು ವರದಿ ತಿಳಿಸಿದೆ. ಮಾಜಿ ಪತ್ರಕರ್ತ ಮತ್ತು ಸದ್ಯ ವಿದೇಶಾಂಗ ವ್ಯವಹಾರ ರಾಜ್ಯ ಸಚಿವರಾಗಿರುವ ಎಂ.ಜೆ.ಅಕ್ಬರ್ ವಿರುದ್ಧ ಕನಿಷ್ಟ ನಾಲ್ಕು ಮಹಿಳೆಯರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News