ಪರಿವರ್ತನೆ ಮಾಡುವ ಶಕ್ತಿ ಚಿತ್ರರಂಗಕ್ಕಿದೆ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-10-10 16:28 GMT

ಮೈಸೂರು,ಅ.10: ಪರಿವರ್ತನೆ ಮಾಡುವ ಶಕ್ತಿ ಚಿತ್ರರಂಗಕ್ಕಿದೆ. ಯುವ ನಿರ್ದೇಶಕರುಗಳು ಸಮಾಜದ ಬದಲಾವಣೆಗೆ ಉತ್ತಮ ಚಿತ್ರಗಳನ್ನು ತಯಾರು ಮಾಡಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ಕಲಾಮಂದಿರಲದಲ್ಲಿ 408ನೇ ದಸರಾ ಮಹೋತ್ಸವ ಅಂಗವಾಗಿ ಬುಧವಾರ ಏರ್ಪಡಿಸಿದ್ದ ದಸರಾ ಚಲನಚಿತ್ರೋತ್ಸವವನ್ನು ದೀಪಬೆಳಗುವ ಮೂಲಕ ಉದ್ಘಾಟಿಸಿ ನಂತರ ಅವರು ಮಾತನಾಡಿದರು. ಹೆಚ್ಚು ಜನರು ಆಕರ್ಷಣೆಯಾಗುವುದು ಸಿನಿಮಾಗಳಿಂದ. ಹೀಗಾಗಿ ಸಮಾಜ ತಪ್ಪುದಾರಿಗೆ ಹೋಗದಂತೆ ಒಳ್ಳೆಯ ಸಿನಿಮಾಗಳು ಬರಬೇಕಿದೆ. ಪ್ರಸ್ತುತ ದಿನಗಳಲ್ಲಿ ಯುವ ನಿರ್ದೇಶಕರು ಉತ್ತಮ ಚಿತ್ರಗಳನ್ನು ಜನರಿಗೆ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಯುವ ನಿರ್ದೇಶಕರು ಆದಷ್ಟು ಮಚ್ಚು ಲಾಂಗು ಚಿತ್ರದಲ್ಲಿ ವೈಭವೀಕರಿಸುವುದನ್ನು ಕಡಿಮೆ ಮಾಡಿ. ಏಕೆಂದರೆ ಇದರಿಂದ ಯುವ ಸಮೂಹ ಬೇಗ ಆಕರ್ಷಿತರಾಗುತ್ತಾರೆ. ಇಂತಹ ಚಿತ್ರಗಳಿಂದ ಬಾಂಧವ್ಯ ಮರೆಯುವ ವಾತಾವರಣ ನಿರ್ಮಾಣವಾಗಬಾರದು ಎಂದರು.

ನನ್ನಲ್ಲಿ ಏನಾದರೂ ಮಾನವೀಯ ಮೌಲ್ಯಗಳು ಮತ್ತು ತಾಯಿಯ ಅಂತಃಕರಣವೇನಾದರೂ ಇದ್ದರೆ ಅದಕ್ಕೆ ನನ್ನ ತಂದೆ, ತಾಯಿ, ಕನ್ನಡ ಚಿತ್ರರಂಗ ಹಾಗೂ ಡಾ.ರಾಜ್‍ಕುಮಾರ್ ಚಿತ್ರಗಳು ಕಾರಣ. ಪರಿವರ್ತನೆ ತರಲು ಸಿನಿಮಾ ಮೂಲಕ ಸಾಧ್ಯ. ನನ್ನ ಮನಸ್ಸಿಗೆ ಎಷ್ಟೇ ನೋವುಂಟಾದರು ಹಳೆಯ ಸಿನಿಮಾ ಹಾಡುಗಳನ್ನು ಕೇಳುವುದರ ಮೂಲಕ ಮರೆತುಬಿಡುತ್ತೇನೆ. ಸಮ್ಮಿಶ್ರ ಸರ್ಕಾರ ಆದಷ್ಟು ಬೇಗ ಅಧಿಕಾರ ಕಳೆದುಕೊಳ್ಳುತ್ತದೆ ಎಂದು ಹಲವಾರು ಮಾಧ್ಯಮಗಳು ಹೇಳುತ್ತಿದ್ದವು. ಕೊನೆಗೆ ದೀಪಾವಳಿವರೆಗೆ ಗಡುವನ್ನು ನೀಡಿದ್ದಾರೆ. ಇದ್ಯಾವುದರ ಚಿಂತೆಯೂ ಕಾಡದಂತೆ ಹಳೆಯ ಚಿತ್ರಗೀಗೆಳು ನನಗೆ ಸಹಕಾರಿಯಾಗಿದೆ ಎಂದು ಹೇಳಿದರು.

ಮೈಸೂರು ನಗರಕ್ಕೂ ಕನ್ನಡ ಚಿತ್ರರಂಗದ ಹಿಂದಿನ ಹಾಗೂ ಇಂದಿನ ಕಲಾವಿದರಿಗೂ ಅವಿನಾಭಾವ ಸಂಬಂಧವಿದೆ. ಕಲಾವಿದರ ಮೇಲೆ ಅತ್ಯಂತ ವಿಶ್ವಾಸ ಮತ್ತು ಪ್ರೀತಿಯನ್ನಿಟ್ಟ ಜಿಲ್ಲೆ ಮೈಸೂರು. ಅದೇ ರೀತಿ ಸಾಹಸ ಸಿಂಹ ವಿಷ್ಣುವರ್ಧನ್, ಅಂಬರೀಶ್, ಇತ್ತೀಚಿನ ನಟರು, ಕಲಾವಿದರ ಪ್ರಮುಖ ಆಕರ್ಷಣೆ ಮೈಸೂರು ನಗರ. ಒಂದು ಕಾಲದಲ್ಲಿ ಚಿತ್ರ ನಿರ್ಮಾಣ ಮಾಡಬೇಕೆಂದರೆ ಶ್ರೀರಂಗಪಟ್ಟಣದ ಮಹದೇವಪುರ, ಮೇಲುಕೋಟೆ ಈ ಸ್ಥಳದಲ್ಲಿ ಚಿತ್ರೀಕರಣ ನಡೆದರೆ ಆ ಚಿತ್ರಗಳು ಸೂಪರ್ ಹಿಟ್ ಆಗುತ್ತವೆ ಎಂಬ ಭಾವನೆ ಚಿತ್ರದ ನಿರ್ಮಾಪಕರಲ್ಲಿ ಇತ್ತು. ಮೈಸೂರು ಹಾಗೂ ಮಂಡ್ಯದೊಂದಿಗೆ ಚಿತ್ರರಂಗಕ್ಕೆ ಆತ್ಮೀಯ ನಂಟಿದೆ ಎಂದು ಸ್ಮರಿಸಿದರು.

ಮೈಸೂರಿಗೂ ನನಗೂ ದೊಡ್ಡ ನಂಟಿದೆ. ದೊಡ್ಡ ಬಂಧವೇ ಇದೆ. ನನ್ನ ವೃತ್ತಿ ಜೀವನ ಪ್ರಾರಂವಾಗಿದ್ದೇ ಇಲ್ಲಿ. ಈ ನಗರವನ್ನು ಮರೆಯಲು ಸಾಧ್ಯವಿಲ್ಲ. ಮೈಸೂರು, ಕೊಡಗು, ಹಾಸನ ಮತ್ತು ಮಂಡ್ಯ ಜಿಲ್ಲೆಗಳು ಮೈಸೂರು ಪ್ರಾಂತ್ಯಕ್ಕೆ ಬರುತ್ತಿತ್ತು. ಆ ಕಾಲದಲ್ಲಿ ಈ ಭಾಗದ ಹಂಚಿಕೆ ದಾರನಾಗಿ ನಜರಬಾದ್ ರಸ್ತೆಯಲ್ಲಿ ಮದ್ವೇಶ ಕಾಂಪ್ಲೆಕ್ಸ್ ನಲ್ಲಿ ನನ್ನ ವೃತ್ತಿ ಜೀವನ ಆರಂಭವಾಗಿದ್ದು. ನಟ ಅಂಬರೀಶ್ ಅವರ ಮೂರು ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ನನ್ನ ಚೆನ್ನಾಂಭಿಕಾ ಚಿತ್ರ ಸಂಸ್ಥೆಯಿಂದ. ಮೂರು ಚಿತ್ರಗಳು ಅತ್ಯಂತ ಯಶಸ್ವಿಯಾಗಿ ನಡೆದವು. ಹಲವಾರು ಉತ್ತಮ ಚಿತ್ರಗಳ ಹಂಚಿಕೆ ಮಾಡುವುದರ ಜೊತೆಗೆ ನಂತರದ ದಿನಗಳಲ್ಲಿ ಸೂರ್ಯವಂಶ ಚಿತ್ರ ನಿರ್ಮಾಣ ಮಾಡುವ ಮೂಲಕ ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಕಂಡೆ. ನಂತರ ನಟ ಮುರುಳಿ ಅಭಿನಯದ ಚಂದ್ರಚಕೋರಿ ಚಿತ್ರ ಕೂಡ ದೊಡ್ಡ ಯಶಸ್ಸು ಕಂಡಿತು. ಈ ಚಿತ್ರ ಬೆಳಗಾವಿ ನಗರದಲ್ಲಿ 500 ದಿನಗಳ ಪ್ರದರ್ಶನ ಕಂಡಿತು ಎಂದು ಚಿತ್ರರಂಗದೊಂದಿಗಿನ ತಮ್ಮ ನಂಟನ್ನು ನೆನಪಿಸಿಕೊಂಡರು.

ನಾನು ಕನ್ನಡ ಚಿತ್ರರಂಗದ ಡಿಕ್ಷನರಿ. ನಾನು ಚಿತ್ರರಂಗದಿಂದ ರಾಜಕೀಯಕ್ಕೆ ಬಂದಿರಬಹುದು. ಆದರೆ ಇವತ್ತಿಗೂ ಸಹ ಯಾವ ಚಿತ್ರ ಎಷ್ಟು ಹಣ ಗಳಿಸಿತ್ತು ಎಂಬುದನ್ನು ಹೇಳುತ್ತೇನೆ. ಹೀಗಾಗಿ ನಾನು ಕನ್ನಡ ಚಿತ್ರರಂಗದ ಡಿಕ್ಷನರಿ ಎಂದರು.

ಸಚಿವೆ ಜಯಮಾಲಾ ಮಾತನಾಡಿ, ಕನ್ನಡದ ಮೊದಲ ವಾಕ್ ಚಿತ್ರ 1934ಮಾರ್ಚ್ 4 ರಂದು ತೆರೆಕಂಡಿತು. ಹೀಗಾಗಿ ಅದೇ ದಿನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಆಚರಣೆ ಮಾಡಬೇಕೆಂದು ಮನವಿ ಮಾಡಿದರು. ಕಿರುಚಿತ್ರ ಪ್ರದರ್ಶನದಲ್ಲಿ ಬರೀ ನಾಯಕರನ್ನು ತೋರಿಸಲಾಗಿದೆ. ಆದರೆ ಚಿತ್ರರಂಗ ಬೆಳಗಿರುವುದು ಬರೀ ನಾಯಕರಿಂದ ಮಾತ್ರವಲ್ಲ. ನಿರ್ಮಾಪಕರು, ನಿದೇರ್ಶಕರು, ನಟಿಯರು, ತಂತ್ರಜ್ಞರು, ವಿತರಕರು ಇವರಿಂದಲೂ ಚಿತ್ರರಂಗ ಬೆಳಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಿರುಚಿತ್ರದಲ್ಲಿ ಅವರನ್ನು ಸೇರಿಸಿಕೊಳ್ಳಿ ಎಂದರು.

ಸರ್ಕಾರ ಚಿತ್ರೋದ್ಯಮಕ್ಕೆ ಉತ್ತಮ ಸಹಕಾರ ನೀಡುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ ಮಾಡುವುದಕ್ಕೆ 100 ಎಕರೆ ನೀಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು 500 ಎಕರೆ ಜಾಗವನ್ನು ರಾಮನಗರದಲ್ಲಿ ಚಿತ್ರನಗರಿ ನಿರ್ಮಾಣ ಮಾಡಲು ನೀಡಿದ್ದಾರೆ ಎಂದು ಹೇಳಿದರು.

ನಟ ರಿಷಬ್ ಶೆಟ್ಟಿ ಮಾತನಾಡಿ, ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಎನ್.ಮಹೇಶ್ ಅವರಿಗೆ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾ ತೋರಿಸಲು ಸಾಕಷ್ಟು ಪ್ರಯತ್ನ ಪಟ್ಟೆ ಆದರೆ ಆಗಲಿಲ್ಲ. ದಯವಿಟ್ಟು ಸಿನಿಮಾ ನೋಡಿ. ಏಕೆಂದರೆ ಇದರಲ್ಲಿ ಸರ್ಕಾರಿ ಶಾಲೆ ಮುಚ್ಚುತ್ತಿರುವುದಕ್ಕೆ ಕಾರಣವನ್ನು ಕೇಂದ್ರಿಕರಿಸಿ ಸಿನಿಮಾ ಮಾಡಲಾಗಿದೆ ಎಂದರು.

ನೂರಾರು ವರ್ಷಗಳ ಇತಿಹಾಸವಿರುವ ಕಾಸರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಾವು ಚಿತ್ರೀಕರಣ ಮಾಡುವಾಗ 42 ಮಂದಿ ಮಕ್ಕಳಿದ್ದರು. ಈಗ 27 ಮಂದಿ ಮಕ್ಕಳಿದ್ದಾರೆ. ಓರ್ವ ಶಿಕ್ಷಕರಿದ್ದಾರೆ. ಹೀಗಾಗಿ ನಾನು ಮತ್ತು ನಮ್ಮ ತಂಡ ಆ ಶಾಲೆಯನ್ನು ದತ್ತು ತೆಗೆದುಕೊಂಡಿದ್ದೇವೆ. ಎಲ್ಲರೂ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ ಮನೆಬಾಗಿಲಿಗೆ ಬಂದಿರುವ  ವಿಶ್ವದರ್ಜೆಯ ಅತ್ಯುತ್ತಮ ಚಿತ್ರಗಳನ್ನು ಮೈಸೂರಿನ ಪ್ರಜೆಗಳು ನೋಡಿ, ಚಲನಚಿತ್ರೋತ್ಸವವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು. ಇಂದಿನಿಂದ ಚಲನಚಿತ್ರೋತ್ಸವ ಆರಂಭವಾಗುತ್ತಿದೆ. ಚಲನಚಿತ್ರೋತ್ಸವದಲ್ಲಿ ಮೂರು ನೆಲೆಗಳಿವೆ. ಒಂದು ದೇಶಿಯ ಚಿತ್ರಗಳು. ದೇಶಿಯ ಚಿತ್ರಗಳಲ್ಲಿ ಸಾಮಾಜಿಕ ಪರಿಣಾಮ ಬೀರುವ ಅತ್ಯುತ್ತಮ ಚಿತ್ರಗಳ ಸರಣಿಗಳಿವೆ. ಭಾರತದ ಶ್ರೇಷ್ಠ ಚಿತ್ರಗಳು ಹಾಗೂ ವಿಶ್ವದರ್ಜೆಯ ಚಿತ್ರಗಳು. ಹೀಗೆ ಮೂರು ನೆಲೆಗಳಲ್ಲಿ ಸುಮಾರು ಚಿತ್ರಗಳನ್ನು ನೋಡುವ ಅವಕಾಶವಿದೆ. ಇದರಲ್ಲಿ ಮನರಂಜನಾತ್ಮಕ, ಕಲಾತ್ಮಕ, ಹೃದಯ ತಟ್ಟುವ, ಚಿಂತನೆ ಹಚ್ಚುವ, ಸಾಮಾಜಿಕ  ಜವಾಬ್ದಾರಿ ಕೊಡುವ ಚಿತ್ರಗಳಿವೆ ಎಂದರು.

ಬೆಂಗಳೂರಿನಲ್ಲಿ ನಡೆಯುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 10 ವರ್ಷ ನಡೆದಿದ್ದು, ಈಗ 11 ನೇ ಬಾರಿ ನಡೆಯುತ್ತಿದೆ. ಈ ವರ್ಷ ವಿಶ್ವ ಮಾನ್ಯತೆ ಪಡೆಯುವ ಸಲುವಾಗಿ ದಿನಾಂಕ ನಿಗದಿ ಮಾಡಿ ನಿಗದಿತ ದಿನಾಂಕದಲ್ಲಿ ಫೆಬ್ರವರಿಯಲ್ಲಿ ನಡೆಸಬೇಕೆಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ತೀರ್ಮಾನವಾಗಿದೆ. ಅದನ್ನು ಆದಷ್ಟು ಬೇಗ ನಮ್ಮ ರಿಜಿಸ್ಟ್ರಾರ್ ಎಚ್.ಪಿ.ದಿನೇಶ್ ಮತ್ತು ಅಕಾಡೆಮಿಯ ಗೆಳೆಯರು ಸದಸ್ಯರು ವಾಣಿಜ್ಯ ಮಂಡಳಿಯ ನಿರ್ಮಾಪಕ, ನಿರ್ದೇಶಕರು ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಎನ್.ಮಹೇಶ್, ಶಾಸಕರಾದ ಎಲ್.ನಾಗೇಂದ್ರ, ಅಶ್ವಿನ್ ಕುಮಾರ್, ಹರ್ಷವರ್ಧನ್, ನಟ ವಿಜಯ ರಾಘವೇಂದ್ರ, ನಟಿಯರಾದ ಹರ್ಷಿಕ ಪೂಣಚ್ಚ, ಪಾರುಲ್ ಯಾದವ್, ನಿರ್ದೇಶಕರಾದ ರಿಷಬ್ ಶೆಟ್ಟಿ, ಸತ್ಯಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತಿರಿದ್ದರು.

ಬಸ್ ಚಾರ್ಚ್ ಇಲ್ಲದೆ ಹಾಸನದಿಂದ-ಹೊಳೆನರಸೀಪುರಕ್ಕೆ ನಡೆದುಕೊಂಡು ಹೋದ ಸಿಎಂ
ಬಸ್ ಚಾರ್ಚ್‍ಗೆ ದುಡ್ಡಿಲ್ಲದೆ ಹಾಸನದಿಂದ-ಹೊಳೆನರಸೀಪುರಕ್ಕೆ ನಡೆದುಕೊಂಡ ಹೋದ ಘಟನೆಯನ್ನು ಸಿಎಂ ಕುಮಾರಸ್ವಾಮಿ ನೆನಪಿಸಿಕೊಂಡರು.

ಸಿನಿಮಾ ಎಂದರೆ ನನಗಿಷ್ಟ. ನಾನು ಅಣ್ಣಾವರ ಸಿನಿಮಾಗಳನ್ನು ಹೆಚ್ಚು ನೋಡುತ್ತಿದ್ದೆ. ಬಂಗಾರದ ಮನುಷ್ಯ ಚಿತ್ರವನ್ನು ನೂರು ಬಾರಿ ನೋಡಿದ್ದೇನೆ. ಹಾಸನದಲ್ಲಿ ಹಿಂದೆ ದೊಡ್ಡ ಜಾತ್ರೆಯಾಗುತಿತ್ತು. ಆ ಸಮಯದಲ್ಲಿ ಡಾ.ರಾಜ್‍ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರ ಬಿಡುಗಡೆಯಾಗಿತ್ತು. ಎರಡು ಶೋ ನಿರಂತರವಾಗಿ ನೋಡಿ ನಂತರ ಹೊಳೆನರಸೀಪುರಕ್ಕೆ ಹೋಗಲು ಬಸ್ ಚಾರ್ಚ್ ಇಲ್ಲದಂತಾಯಿತು. ಆಗ ವಿಧಿಯಿಲ್ಲದೇ ಹಾಸನದಿಂದ ಹೊಳೆನರಸೀಪುರಕ್ಕೆ ನಡೆದುಕೊಂಡು ಹೋದೆ ಎಂದು ಹಳೆಯ ಘಟನೆಯನ್ನು ಮೆಲುಕು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News