ಸಚಿವ ಹೆಚ್.ಡಿ.ರೇವಣ್ಣ ಕುಟುಂಬದ ಭೂ ಕಬಳಿಕೆ ಬಗ್ಗೆ ಡಿಸಿಗೆ ದೂರು:​ ಮಾಜಿ ಸಚಿವ ಎ.ಮಂಜು ಎಚ್ಚರಿಕೆ

Update: 2018-10-10 17:01 GMT

ಹಾಸನ,ಅ.10: ತಾಲೂಕಿನ ದುದ್ದ ಹೋಬಳಿ ಸೋಮನಹಳ್ಳಿ ಕಾವಲು ಗೌರಿಪುರ ಗ್ರಾಮದಲ್ಲಿ ಅಕ್ರಮವಾಗಿ 69.19 ಎಕರೆ ಭೂಮಿಯನ್ನು ಸಚಿವ ಹೆಚ್.ಡಿ. ರೇವಣ್ಣ ಕುಟುಂಬದಿಂದ ಭೂ ಕಬಳಿಕೆ ಮಾಡಲಾಗಿದ್ದು, ಇನ್ನು ಮೂರು ದಿವಸದಲ್ಲಿ ದಾಖಲೆಯನ್ನು ತನಿಖೆ ಮಾಡಿ ಬಹಿರಂಗ ಮಾಡದಿದ್ದರೆ ಕಂದಾಯ ಇಲಾಖೆ ಅಧಿಕಾರಿ ಮತ್ತು ನೌಕರರ ವಿರುದ್ಧ ಕಾನೂನು ರೀತಿಯಲ್ಲಿ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿರುವುದಾಗಿ ಜಿಲ್ಲಾ ಉಸ್ತುವಾರಿ ಮಾಜಿ ಸಚಿವ ಎ. ಮಂಜು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಹಾಸನ ತಾಲೂಕು ದುದ್ದ ಹೋಬಳಿ ಸೋಮನಹಳ್ಳಿ ಕಾವಲು ಗೌರಿಪುರ ಗ್ರಾಮದ ಸ.ನಂ 41ರಲ್ಲಿ 4.36 ಎಕರೆ, 42ರಲ್ಲಿ 4.36 ಎಕರೆ, 44ರಲ್ಲಿ 4.36 ಎಕರೆ, 45ರಲ್ಲಿ 4.00 ಎಕರೆ, 46 ರಲ್ಲಿ 4.27 ಎಕರೆ, 47ರಲ್ಲಿ 4.38, ಎಕರೆ, 48ರಲ್ಲಿ 4.38 ಎಕರೆ, 49ರಲ್ಲಿ 4.37, ಸರ್ವೆ ನಂ 50ರಲ್ಲಿ 4.37, 58ರಲ್ಲಿ 4.37, 61ರಲ್ಲಿ 5.20 ಎಕರೆ, 62ರಲ್ಲಿ 5.36, 63ರಲ್ಲಿ 5.05 ಎಕರೆ ಭೂಮಿ ಸೇರಿದಂತೆ ಒಟ್ಟು 69.19 ಎಕರೆ ಭೂಮಿಯನ್ನು 2014-15ರಲ್ಲಿ ಪ್ರಜ್ವಲ್ ರೇವಣ್ಣ ಅವರ ಹೆಸರಿಗೆ ರಿಜಿಸ್ಟರ್ ಮಾಡಲಾಗಿದೆ. ಈ ಎಲ್ಲಾ ಜಮೀನುಗಳು ಸರಕಾರಿ ಬೀಳು ಜಮೀನಾಗಿದ್ದು, ಪ್ರತಿ ಜಮೀನುಗಳ ವಿವರ ನೀಡುವ ಬಗ್ಗೆ 2018 ಸೆಪ್ಟಂಬರ್ 20 ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಕೂಡಲೇ ವಿಚಾರಣೆ ಮಾಡಿಸಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲು ಹೇಳಲಾಗಿದ್ದರೂ ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೂರಿದರು.

ಪ್ರಜ್ವಲ್ ರೇವಣ್ಣ ಅವರ ಹೆಸರಿಗೆ ಅಕ್ರಮವಾಗಿ ನೋಂದಣಿ ಮಾಡಿಸಿದ್ದು, ಬೋಗಸ್ ದಾಖಲೆಗಳನ್ನು ಸೃಷ್ಠಿಸಿ ಸರ್ಕಾರಿ ಬೀಳು ಕಬಳಿಸಲಾಗಿದೆ. ತಮ್ಮ ಬಳಿ ಇರುವ ಹಲವಾರು ದಾಖಲೆಗಳನ್ನು ಪ್ರದರ್ಶಿಸಿ ದಾಖಲೆಗಳ ಸಮೇತ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ ಈವರೆಗೆ ಜಿಲ್ಲಾಧಿಕಾರಿಗಳ ಕಚೇರಿ, ಕಂದಾಯ ಇಲಾಖೆ ಅಧಿಕಾರಿಗಳಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ದೂರಿದರು.

ಗಿರಿಯಪ್ಪ ಮಕ್ಕಳಾದ ಗಿರೀಶ್ ಹಾಗೂ ಆದರ್ಶ ಎಂಬುವವರಿಗೆ ಬೋಗಸ್ ಖಾತೆ ಬದಲಾವಣೆ ಮಾಡಿದ್ದು, ಕಂಪ್ಯೂಟರ್ ಪಹಣಿ ಬರುವಂತೆ ನೋಡಿಕೊಂಡು ಬಳಿಕ ಆ ಜಮೀನನ್ನು ಪ್ರಜ್ವಲ್ ರೇವಣ್ಣ ಹಾಗೂ ಕಾಳಮ್ಮ ಅವರ ಹೆಸರಿಗೆ ನೊಂದಣಿ ಮಾಡಿಸಲಾಗಿದೆ. ಅಲ್ಲದೆ ಕರ್ನಾಟಕ ಭೂ ಸುಧಾರಣೆ ನಿಯಮ 63, 64ರ ಅನ್ವಯ ಒಂದು ಕುಟುಂಬಕ್ಕೆ ಎಷ್ಟು ಜಮೀನು ಹೊಂದಲು ಅವಕಾಶವಿದೆ ಎಂದು ಪ್ರಶ್ನಿಸಿದ್ದಾರಲ್ಲದೆ, ಈ ಆಸ್ತಿಯನ್ನು ಚುನಾವಣೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿಯೂ ನಮೂದಿಸಿಲ್ಲ. ಅವರಿಗೆ ಎಲ್.ಆರ್.ಎಪ್ 79ಎ, ಮತ್ತು 79 ಬಿ ಅನ್ವಯವಾಗುವುದಿಲ್ಲವೆ ಎಂದು ಅವರು ಪ್ರಶ್ನಿಸಿದರು. ಆದ್ದರಿಂದ ಮುಂದಿನ ಮೂರು ದಿನಗಳಲ್ಲಿ ದುದ್ದ ಹೋಬಳಿ ಗೌರಿಪುರದ ಸೋಮನಹಳ್ಳಿ ಕಾವಲಿಗೆ ಸೇರಿದ 69.19 ಎಕರೆ ಜಮೀನಿನ ಎಲ್ಲಾ ದಾಖಲೆ ಪರಿಶೀಲಿಸಿ ಅಕ್ರಮ ಮಾಡಿರುವವರ ಹಾಗೂ ಅದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ತಾನು ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News