ಅಮೆರಿಕ ಜೊತೆಗಿನ ವ್ಯಾಪಾರ ಸಮರದ ಮಧ್ಯೆ ಭಾರತದತ್ತ ಮುಖ ಮಾಡಿದ ಚೀನಾ

Update: 2018-10-10 17:03 GMT

ಹೊಸದಿಲ್ಲಿ, ಅ.10: ವ್ಯಾಪಾರಿ ಸಂಬಂಧಿತ ವಿಷಯಗಳಲ್ಲಿ ಅಮೆರಿಕ ಏಕಪಕ್ಷೀಯ ದೃಷ್ಟಿಕೋನವನ್ನು ಅಳವಡಿಸುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರ ರಕ್ಷಣಾವಾದದ ವಿರುದ್ಧ ಹೋರಾಡಲು ಭಾರತ ಮತ್ತು ಚೀನಾ ಪರಸ್ಪರ ಸಹಕಾರವನ್ನು ಅಧಿಕಗೊಳಿಸಬೇಕು ಎಂದು ಹೊಸದಿಲ್ಲಿಯಲ್ಲಿರುವ ಚೀನಾ ರಾಯಬಾರ ಕಚೇರಿ ಬುಧವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ರಾಷ್ಟ್ರೀಯ ಭದ್ರತೆ ಮತ್ತು ನ್ಯಾಯಸಮ್ಮತ ವ್ಯಾಪಾರದ ಹೆಸರಿನಲ್ಲಿ ಏಕಪಕ್ಷೀಯ ವ್ಯಾಪಾರ ರಕ್ಷಣಾವಾದವನ್ನು ಅನುಸರಿಸುವುದರಿಂದ ಚೀನಾದ ಆರ್ಥಿಕ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲ ಭಾರತದ ವಿದೇಶ ವ್ಯವಹಾರಗಳೂ ನಿರ್ಲಕ್ಷಕ್ಕೊಳಪಡುತ್ತವೆ ಮತ್ತು ದೇಶದ ಏರುತ್ತಿರುವ ಆರ್ಥಿಕತೆಯನ್ನು ಕುಂಠಿತಗೊಳಿಸುತ್ತದೆ ಎಂದು ಈ ಹೇಳಿಕೆಯಲ್ಲಿ ಚೀನಾ ರಾಯಭಾರ ಕಚೇರಿಯ ವಕ್ತಾರ ಜಿ ರೊಂಗ್ ತಿಳಿಸಿದ್ದಾರೆ.

 ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯನ್ನು ರಕ್ಷಿಸುವ ಮತ್ತು ಮುಕ್ತ ವ್ಯಾಪಾರದ ಸಮಾನ ಹಿತಾಸಕ್ತಿಯನ್ನು ಭಾರತ ಮತ್ತು ಚೀನಾ ಹೊಂದಿದೆ ಎಂದು ತಿಳಿಸಿದ ರೊಂಗ್, ದಾವೊಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಫಾರಮ್‌ನಲ್ಲಿ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಈ ಕುರಿತು ನೀಡಿರು ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಏಕಪಕ್ಷೀಯವಾದ ಮತ್ತು ಬೆದರಿಸುವ ತಂತ್ರಗಳ ಕಾರಣದಿಂದ ಚೀನಾ ಮತ್ತು ಭಾರತ ಹೆಚ್ಚು ನ್ಯಾಯಸಮ್ಮತವಾದ ಮತ್ತು ತಾರ್ಕಿಕ ಅಂತರ್‌ರಾಷ್ಟ್ರೀಯ ವ್ಯವಸ್ಥೆಯನ್ನು ನಿರ್ಮಿಸಲು ಜೊತೆಯಾಗಿ ಪ್ರಯತ್ನಿಸುವ ಅಗತ್ಯವಿದೆ ಎಂದು ರೊಂಗ್ ತಿಳಿಸಿದ್ದಾರೆ.

ಚೀನಾವು ಕೆಲವು ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ಸಾಲದ ಬಲೆಯಲ್ಲಿ ಸಿಲುಕಿಸಿದೆ ಎನ್ನುವ ಆರೋಪ ಸುಳ್ಳಾಗಿದ್ದು ಅದು ನಮ್ಮ ಮಧ್ಯೆ ಭಿನ್ನಾಭಿಪ್ರಾಯ ಬಿತ್ತುವ ಹುನ್ನಾರವಾಗಿದೆ. ಪ್ರಾದೇಶಿಕ ಅಭಿವೃದ್ಧಿ ಮತ್ತು ಸಹಕಾರವನ್ನು ಹೆಚ್ಚಿಸಲು ನೆರವಾಗುವ ಯಾವುದೇ ಯೋಜನೆಯಲ್ಲಿ ಪಾಲ್ಗೊಳ್ಳಲು ಚೀನಾ ಮುಕ್ತವಾಗಿದೆ. ಆದರೆ ಚೀನಾವನ್ನು ನಿಗ್ರಹಿಸಲು ಇಂಡೊ-ಪೆಸಿಫಿಕ್ ತಂತ್ರವನ್ನು ದಾಳವಾಗಿ ಬಳಸಲು ಪ್ರಯತ್ನಿಸುವುದನ್ನು ಚೀನಾ ಕಟುವಾಗಿ ವಿರೋಧಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News