ನನ್ನ ಪುತ್ರನನ್ನು ನೇಣಿಗೆ ಹಾಕಿ: ಬೇರೆ ರಾಜ್ಯದವರನ್ನು ಹೊರ ಹಾಕಬೇಡಿ

Update: 2018-10-10 17:07 GMT

ಪಾಟ್ನಾ, ಅ. 10: ತನ್ನ ಪುತ್ರ ತಪ್ಪೆಸಗಿದ್ದರೆ ಆತನನ್ನು ಶಿಕ್ಷಿಸಿ, ಆದರೆ, ರಾಜ್ಯದಿಂದ ಬಿಹಾರದವರನ್ನು ಹೊರ ಹಾಕಬೇಡಿ ಎಂದು 14 ತಿಂಗಳ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಒಳಗಾಗಿರುವ ಬಿಹಾರದ ಯುವಕನ ತಾಯಿ ರಮಾವತಿ ದೇವಿ ಹೇಳಿದ್ದಾರೆ.

‘‘ಆತ ತಪ್ಪು ಮಾಡಿದ್ದರೆ, ನೇಣಿಗೆ ಹಾಕಿ. ನನ್ನ ಮಗನ ತಪ್ಪಿಗಾಗಿ ಬಿಹಾರದವರಿಗೆ ಕಿರುಕುಳ ನೀಡಬೇಡಿ. ಅವರನ್ನು ರಾಜ್ಯದಿಂದ ಹೊರಗೆ ಹಾಕಬೇಡಿ’’ ಎಂದು ಪತ್ರಕರ್ತರ ಮುಂದೆ ಅವರು ಹೇಳಿದ್ದಾರೆ.

ಸರನ್ ಜಿಲ್ಲೆಯ ಮಾಂಝಿ ಬ್ಲಾಕ್‌ನ ವ್ಯಾಪ್ತಿಯಲ್ಲಿ ಬರುವ ನಟ್ವರ್-ಕಂಗೋಯಿ ಗ್ರಾಮದ ನಿವಾಸಿಯಾಗಿರುವ ರಮಾವತಿ ದೇವಿ, ಪರಿಶಿಷ್ಟ ಜಾತಿಯ ಬಡ ಕುಟುಂಬಕ್ಕೆ ಸೇರಿದವರು. ಅವರ ಪತಿ ಸಾವಾಲಿಯಾ ಶಾಹ್ ದಿನಗೂಲಿ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೈಶಾಚಿಕ ಕೃತ್ಯದಲ್ಲಿ ತಮ್ಮ ಮಗ ಪಾಲ್ಗೊಂಡಿರುವ ಸುದ್ದಿ ಕೇಳಿ ಶಿಥಿಲಗೊಂಡ ಮನೆಯಲ್ಲಿ ವಾಸಿಸುತ್ತಿರುವ ಕುಟುಂಬ ಆಘಾತಗೊಂಡಿದೆ. ‘‘ನನ್ನ ಪುತ್ರ ಅಪ್ರಾಪ್ತ. ಆತ ಮಾನಸಿಕ ಅಸ್ವಸ್ಥ. ಕೆಲವೊಮ್ಮೆ ಅಸಹಜವಾಗಿ ವರ್ತಿಸುತ್ತಾನೆ. ಆತ ಕೇವಲ 5ನೇ ತರಗತಿ ವರಗೆ ಓದಿದ್ದಾನೆ. ನಾಲ್ವರು ಮಕ್ಕಳಲ್ಲಿ ಆತ ಒಬ್ಬ. ಎರಡು ವರ್ಷಗಳ ಹಿಂದೆ ಆತ ಯಾರೊಬ್ಬರಿಗೂ ಮಾಹಿತಿ ನೀಡದೆ ಗೆಳೆಯರೊಂದಿಗೆ ಗುಜರಾತ್‌ಗೆ ತೆರಳಿದ್ದ. ಕೆಲವು ತಿಂಗಳ ಹಿಂದೆಯಷ್ಟೆ ಆತನ ಬಗ್ಗೆ ತಿಳಿಯಿತು.’’ ಎಂದು ತಂದೆ ಹೇಳಿದ್ದಾರೆ.

 ಆತ ಮುಂಗೋಪಿ. ಯಾವುದೇ ಸೂಚನೆ ನೀಡಿದರೆ ನಿರ್ಲಕ್ಷಿಸುತ್ತಾನೆ. ಆತನಿಗೆ ಸಂತೋಷವಾಗುವುದನ್ನು ಮಾಡುತ್ತಾನೆ. ಆದರೆ, ಮಗುವಿನ ಮೇಲೆ ಆತ ಅತ್ಯಾಚಾರ ಮಾಡಿದ್ದಾನೆ ಎಂಬುದನ್ನು ನಂಬಲು ಸಾಧ್ಯವಿಲ್ಲ ಎಂದು ಸೋನ್‌ಬರ್ಸಾ ಪಂಚಾಯತ್‌ನ ಮಾಜಿ ಮುಖ್ಯಸ್ಥ ದಲ್ಲಾನ್ ಪ್ರಸಾದ್ ಯಾದವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News