ಕಾನ್ಸುಲೇಟ್ ಕಚೇರಿಯಲ್ಲಿ ಸೌದಿ ಪತ್ರಕರ್ತ ನಾಪತ್ತೆ ಪ್ರಕರಣ: ‘ಹಂತಕ ತಂಡ’ದ ಚಿತ್ರಗಳನ್ನು ಪ್ರಕಟಿಸಿದ ಟರ್ಕಿ ಮಾಧ್ಯಮ

Update: 2018-10-10 17:17 GMT

ಇಸ್ತಾಂಬುಲ್, ಅ. 10: ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿಯನ್ನು ಕೊಲೆ ಮಾಡಲು ಸೌದಿ ಅರೇಬಿಯದಿಂದ ಬಂದಿದೆಯೆನ್ನಲಾದ 15 ಸದಸ್ಯರ ‘ಹಂತಕರ ಪಡೆ’ಯ ಚಿತ್ರಗಳನ್ನು ಟರ್ಕಿ ಮಾಧ್ಯಮಗಳು ಬುಧವಾರ ಪ್ರಕಟಿಸಿವೆ. ಟರ್ಕಿ ನಗರ ಇಸ್ತಾಂಬುಲ್‌ನಲ್ಲಿರುವ ಸೌದಿ ಕಾನ್ಸುಲೇಟ್ ಕಚೇರಿಯಿಂದ ಕಾನ್ಸುಲೇಟ್ ಅಧಿಕಾರಿಯ ಮನೆಗೆ ತೆರಳಿದ ಕಪ್ಪು ವ್ಯಾನೊಂದರ ಚಿತ್ರಗಳೂ ಪ್ರಕಟಗೊಂಡಿವೆ.

ಸೌದಿ ಪ್ರಜೆಯಾಗಿರುವ ಜಮಾಲ್ ಖಶೋಗಿ ತನ್ನ ದೇಶದ ರಾಜಪ್ರಭುತ್ವದ ಟೀಕಾಕಾರರಾಗಿದ್ದು, ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಅವರು ಅಮೆರಿಕದ ಪತ್ರಿಕೆ ‘ವಾಶಿಂಗ್ಟನ್ ಪೋಸ್ಟ್’ನಲ್ಲಿ ಲೇಖನಗಳನ್ನು ಬರೆಯುತ್ತಿದ್ದಾರೆ.

ತನ್ನ ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಳ್ಳುವುದಕ್ಕಾಗಿ ಅವರು ಅಕ್ಟೋಬರ್ 2ರಂದು ಇಸ್ತಾಂಬುಲ್‌ನಲ್ಲಿರುವ ಸೌದಿ ಕಾನ್ಸುಲೇಟ್ ಕಚೇರಿಗೆ ಪ್ರವೇಶಿಸಿದ್ದರು. ಅಂದಿನಿಂದ ಅವರು ನಾಪತ್ತೆಯಾಗಿದ್ದಾರೆ.

ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಟೀಕಾಕಾರರಾಗಿದ್ದ ಜಮಾಲ್‌ರನ್ನು ಈ ತಂಡವು ಕಾನ್ಸುಲೇಟ್ ಕಚೇರಿಯಲ್ಲಿ ಕೊಲೆಗೈದಿದೆ ಎಂಬ ಭೀತಿಯನ್ನು ಟರ್ಕಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಜಮಾಲ್ ಜೊತೆಗೆ ಕಾನ್ಸುಲೇಟ್‌ಗೆ ಹೋಗಿದ್ದ ಅವರ ಟರ್ಕಿ ಗೆಳತಿ ಹೊರಗೆ ಕಾದು ಕುಳಿತಿದ್ದರು. ಆದರೆ, ಎಷ್ಟು ಹೊತ್ತಾದರೂ ಅವರು ಹೊರಗೆ ಬಾರದ ಹಿನ್ನೆಲೆಯಲ್ಲಿ ದೂರು ನೀಡಿದ್ದರು.

ಈ ಆರೋಪಗಳನ್ನು ಸೌದಿ ಅರೇಬಿಯ ‘ಆಧಾರರಹಿತ’ ಎಂಬುದಾಗಿ ತಳ್ಳಿಹಾಕಿದೆ. ಭಿನ್ನಮತೀಯ ಪತ್ರಕರ್ತ ತನ್ನ ಕೆಲಸವಾದ ಬಳಿಕ ಕಾನ್ಸುಲೇಟ್ ಕಚೇರಿಯಿಂದ ಹೊರಗೆ ಹೋಗಿದ್ದಾರೆ ಎಂದು ಅದು ಹೇಳಿಕೊಂಡಿದೆ. ಆದರೆ, ಅವರು ಕಾನ್ಸುಲೇಟ್‌ನಿಂದ ಹೊರಗೆ ಹೋಗಿದ್ದಾರೆ ಎಂಬುದಕ್ಕೆ ಪುರಾವೆ ನೀಡಿಲ್ಲ.

 ‘ಕಪ್ಪು ವಾಹನದಲ್ಲಿ ಜಮಾಲ್‌ರನ್ನು ಕರೆದೊಯ್ಯಲಾಗಿತ್ತು’

ಕಾನ್ಸುಲೇಟ್ ಕಚೇರಿಯಿಂದ ಹೊರಟ ಕಪ್ಪು ಮರ್ಸಿಡಿಸ್ ವಿಟೊ ವಾಹನದಲ್ಲಿ ಜಮಾಲ್ ಇದ್ದರು ಎನ್ನುವುದನ್ನು ಬಿಂಬಿಸುವ ವೀಡಿಯೊವೊಂದನ್ನು ಸುದ್ದಿ ಚಾನೆಲ್ ‘24’ ಪ್ರಸಾರಿಸಿದೆ.

 ಈ ವಾಹನವು ಜಮಾಲ್ ಕಾನ್ಸುಲೇಟ್ ಒಳಗೆ ಹೋದಾಗ ಹೊರಗಡೆ ನಿಲ್ಲಿಸಲಾಗಿದ್ದ ವಾಹನವನ್ನು ಹೋಲುತ್ತಿದೆ.

ಈ ವಾಹನವು ಸುಮಾರು 2 ಕಿಲೋಮೀಟರ್ ದೂರದಲ್ಲಿರುವ ಕಾನ್ಸುಲ್ ಜನರಲ್‌ರ ಮನೆಯನ್ನು ಪ್ರವೇಶಿಸಿದೆ ಹಾಗೂ ಅಲ್ಲಿನ ಗ್ಯಾರೇಜ್‌ನಲ್ಲಿ ನಿಂತಿದೆ ಎಂದು ಚಾನೆಲ್ ವರದಿ ಮಾಡಿದೆ.

‘ಹಂತಕ ತಂಡ’ದ ಚಿತ್ರಗಳನ್ನು ‘ಸಬಾ’ ಪತ್ರಿಕೆಯೂ ಪ್ರಕಟಿಸಿದೆ. ಈ ಚಿತ್ರಗಳನ್ನು ಪಾಸ್‌ಪೋರ್ಟ್ ಕಚೇರಿಯಲ್ಲಿ ತೆಗೆಯಲಾಗಿದೆ ಎಂದು ಅದು ಹೇಳಿದೆ.

ತಂಡದ ಸದಸ್ಯರು ಅಕ್ಟೋಬರ್ 2ರಂದು ಇಸ್ತಾಂಬುಲ್‌ನಲ್ಲಿನ ಎರಡು ಹೊಟೇಲ್‌ಗಳಲ್ಲಿ ತಂಗಿದ್ದರು ಹಾಗೂ ಅದೇ ದಿನ ತಡವಾಗಿ ಅಲ್ಲಿಂದ ಹೊರಟಿದ್ದಾರೆ ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News