ಚಲುವರಾಯಸ್ವಾಮಿ ಓರ್ವ ರಾಜಕೀಯ ವ್ಯಭಿಚಾರಿ: ಶಾಸಕ ಕೆ.ಸುರೇಶ್‍ಗೌಡ

Update: 2018-10-10 17:20 GMT

ನಾಗಮಂಗಲ, ಅ.10: ಮಾಜಿ ಸಚಿವ ಚಲುವರಾಯಸ್ವಾಮಿ ಓರ್ವ ರಾಜಕೀಯ ವ್ಯಭಿಚಾರಿಯಾಗಿದ್ದು, ಅವರು ಡೆಡ್‍ಹಾರ್ಸ್ ಅಲ್ಲ, ಕ್ಲೋಸ್ಡ್ ಹಾರ್ಸ್ ಎಂದು ಶಾಸಕ ಕೆ.ಸುರೇಶ್‍ಗೌಡ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಚಲುವರಾಯಸ್ವಾಮಿ ವಿರುದ್ದ ಸಚಿವ ಪುಟ್ಟರಾಜು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಒಂದು ಪಕ್ಷದಲ್ಲಿದ್ದುಕೊಂಡು ಎದುರಾಳಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡುತ್ತಾ, ಜನರು ಕೊಟ್ಟ ಅಧಿಕಾರದ ಶಾಸಕ ಸ್ಥಾನದ ಮತದಾನವನ್ನು ಹಣಕ್ಕಾಗಿ ಮಾರಾಟ ಮಾಡಿಕೊಂಡ ದಿನದಿಂದಲೇ ಚಲುವರಾಯಸ್ವಾಮಿ ರಾಜಕೀಯದಲ್ಲಿ ಡೆಡ್ ಆಗಿದ್ದಾರೆ ಎಂದು ಅವರು ಟೀಕಿಸಿದರು.

2013ರ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‍ನ ರಮ್ಯಾ ಹೇಗೆ ಗೆದ್ದಿದ್ದಾರೆ ಮತ್ತು ಸಿ.ಎಸ್.ಪುಟ್ಟರಾಜುರನ್ನು ಸೋಲಿಸಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಳಿ ಒಳ ಒಪ್ಪಂದ ಮಾಡಿಕೊಂಡಿದ್ದ ಬಗ್ಗೆ ಪಿನ್ ಟು ಪಿನ್ ಗೊತ್ತಿದೆ. ತಾಕತ್ ಇದ್ದರೆ ನಾನು ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಮಂಜುನಾಥಸ್ವಾಮಿ ಮೇಲೆ ಆಣೆ ಪ್ರಮಾಣ ಮಾಡಲಿ. ಚಲುವರಾಯಸ್ವಾಮಿ ಮೊದಲಿನಿಂದಲೂ ರಾಜಕೀಯ ವ್ಯಭಿಚಾರ ಮಾಡಿಕೊಂಡೇ ಬಂದವರು ಎಂದು ಅವರು ಆರೋಪಿಸಿದರು.

ತಾಕತ್ ಇದ್ದರೆ ಚುನಾವಣೆಗೆ ಸ್ಪರ್ಧಿಸಲಿ: ಈಗಾಗಲೇ ಕ್ಲೋಸ್ಡ್ ಹಾರ್ಸ್ ಆಗಿ ದಾರಿತಪ್ಪಿದ ತಬ್ಬಲಿಯಾಗಿರುವ ಚಲುವರಾಯಸ್ವಾಮಿ, ತಮ್ಮ ಶಕ್ತಿ ಸಾಮರ್ಥ್ಯ ತೋರಬೇಕೆಂದಿದ್ದರೆ ಲೋಕಸಭೆ ಉಪಚುನಾವಣೆಗೆ ನಿಂತು ತೋರಿಸಲಿ ಎಂದು ಸವಾಲು ಹಾಕಿದ ಸುರೇಶ್‍ಗೌಡ, ಈಗಾಗಲೆ ಹಣಕ್ಕಾಗಿ ತಮ್ಮ ಮತವನ್ನು ಮಾರಿಕೊಂಡು ಹಾಗೂ ದೇವೇಗೌಡ, ಕುಮಾರಸ್ವಾಮಿ ಬೆಂಬಲವಿಲ್ಲದೆ ಸೋಲುಂಡಿರುವ ಅವರಿಗೆ ಯಾವ ಮುಖ ಹೊತ್ತುಕೊಂಡು ಜನಗಳ ಮುಂದೆ ಬರಲು ನೈತಿಕತೆ ಇದೆ ಎಂದು ಲೇವಡಿ ಮಾಡಿದರು.

ನಾನು ಯಾವಾಗಲೂ ಪಕ್ಷಕ್ಕೆ ನಿಷ್ಠನಾಗಿ ಕೆಲಸ ಮಾಡಿದ್ದೇನೆ. ಆದರೆ, ಚಲುವರಾಯಸ್ವಾಮಿ ಕೇವಲ ರಾಜಕೀಯ ಅಸ್ತಿತ್ವಕ್ಕಾಗಿ ಮಾತ್ರ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಕಾಂಗ್ರೆಸ್‍ಗೆ ನಮ್ಮ ಕುಮಾರಸ್ವಾಮಿ ಅನಿವಾರ್ಯವಾಗಿದ್ದಾರೆ ಎಂದು ಅವರ ಪಕ್ಷದ ನಾಯಕ ಅಂಬರೀಷ್ ಅವರೇ ಚಿನ್ನದಂತಹ ಮಾತನ್ನು ಹೇಳಿದ್ದಾರೆ. ಇದನ್ನು ಅರ್ಥಮಾಡಿಕೊಂಡು ಇನ್ನೂ 5 ವರ್ಷ ತೆಪ್ಪಗಿರೋದು ಒಳ್ಳೆಯದು ಎಂದೂ ಅವರು ವ್ಯಂಗ್ಯವಾಡಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಚನ್ನಪ್ಪ, ಸ್ವಾಮಿ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News