ಬೆಳ್ಮಣ್ ಟೋಲ್ ಅಳವಡಿಸದಿರಲು ಕೋರಿ ಉಡುಪಿ ನಿಯೋಗದಿಂದ ಸಚಿವ ರೇವಣ್ಣರಿಗೆ ಮನವಿ

Update: 2018-10-10 18:44 GMT

ಬೆಂಗಳೂರು, ಅ. 10: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಬೆಳ್ಮಣ್‌ನಲ್ಲಿ ಟೋಲ್‌ಗೇಟ್ ಅಳವಡಿಸಬಾರದು ಎಂದು ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ನೇತೃತ್ವದ ನಿಯೋಗ, ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣನವರಿಗೆ ಮನವಿ ಸಲ್ಲಿಸಿತು.

ಬುಧವಾರ ವಿಧಾನಸೌಧದಲ್ಲಿ ಸಚಿವ ರೇವಣ್ಣನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ನಿಯೋಗ, ಕಾರ್ಕಳ, ಪಡುಬಿದ್ರಿ ರಸ್ತೆಯ ಬೆಳ್ಮಣ್‌ನಲ್ಲಿ ಟೋಲ್‌ಗೇಟ್ ಅಳವಡಿಸಲು ಉದ್ದೇಶಿಸಿರುವುದನ್ನು ಕೂಡಲೇ ಕೈಬಿಡಬೇಕು ಎಂದು ಇದೇ ವೇಳೆ ಒತ್ತಾಯಿಸಿತು. ಇತ್ತೀಚೆಗಷ್ಟೇ ಸ್ಥಳೀಯರು ಟೋಲ್‌ಗೇಟ್ ಅಳವಡಿಸಲು ಉದ್ದೇಶಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದು, ರಸ್ತೆ ದುರಸ್ತಿ ಮತ್ತು ಅಗಲೀಕರಣ ರೈತರು ತಮ್ಮ ಭೂಮಿ ನೀಡಿ ಸಹಕರಿಸಿದ್ದರು. ರಸ್ತೆಯ ಅಗಲೀಕರಣ ಮತ್ತು ಅಭಿವೃದ್ದಿಯನ್ನು ಕುದುರೆಮುಖ ಅದಿರು ಕಂಪೆನಿ ಅಭಿವೃದ್ದಿಪಡಿಸಿದ ಆ ರಸ್ತೆಗೆ ಟೋಲ್‌ಗೇಟ್ ಅಳವಡಿಸುವುದು ಸರಿಯಲ್ಲ ಎಂದು ಆಕ್ಷೇಪಿಸಲಾಗಿದೆ.

ಈ ವೇಳೆ ಮಾತನಾಡಿದ ಪರಿಷತ್ ಸದಸ್ಯ ಐವಾನ್ ಡಿಸೋಜಾ, ನಾಲ್ಕು ವರ್ಷಗಳ ಹಿಂದೆ ಪಡುಬಿದ್ರಿ, ಕಾರ್ಕಳ, ಕುದುರೆಮುಖ ರಸ್ತೆ ಅಭಿವೃದ್ಧಿಯಾಗಿದ್ದು, ಇದೀಗ ಟೋಲ್‌ಗೇಟ್ ಅಳವಡಿಸಿ ಸುಂಕ ವಸೂಲಿ ನಿರ್ಧಾರ ಸರಿಯಲ್ಲ. ಇದರಿಂದ ಸ್ಥಳೀಯರಿಗೆ ಹೊರೆಯಾಗಲಿದ್ದು, ಇದನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.

ನಿಯೋಗದಲ್ಲಿ ಕಾರ್ಕಳ ಕ್ಷೇತ್ರದ ಮಾಜಿ ಶಾಸಕ ಗೋಪಾಲ್ ಭಂಡಾರಿ, ಬೆಳ್ಮಣ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ಕ್ಷೇಯರ್ ಡಿ’ಮೆಲ್ಲೋ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

‘2018ರ ಮಾರ್ಚ್ 7ರಂದು ಆಗಿರುವ ಒಪ್ಪಂದಂತೆ ಟೋಲ್ ಅಳವಡಿಸಲು ಕ್ರಮ ಕೈಗೊಂಡಿದ್ದು, ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ, ಟೋಲ್ ಅಳವಡಿಸದಿರುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಭರವಸೆ ನೀಡಿದ್ದಾರೆಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News