ದಾವಣಗೆರೆ: ಸಂಚಾರಿ ಪೊಲೀಸ್ ಪೇದೆ, ಎಎಸ್‍ಐ ಮೇಲೆ ಹಲ್ಲೆ ನಡೆಸಿದ ಬೈಕ್ ಸವಾರ

Update: 2018-10-10 18:52 GMT

ದಾವಣಗೆರೆ,ಅ.10: ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುತ್ತಿದ್ದ ವ್ಯಕ್ತಿಗೆ ಬೈಕ್ ನಿಲ್ಲಿಸುವಂತೆ ತಡೆದ ಸಂಚಾರಿ ಪೊಲೀಸ್ ಠಾಣೆ ಪೇದೆ ಹಾಗೂ ಎಎಸ್‍ಐ ಮೇಲೆ ಹಲ್ಲೆ ಮಾಡಿದ ಘಟನೆ ನಗರದ ಡಿಆರ್‍ಆರ್ ಪಾಲಿಟೆಕ್ನಿಕ್ ಎದುರು ಹದಡಿ ರಸ್ತೆಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

ಇಲ್ಲಿನ ಸಂಚಾರ ಪೊಲೀಸ್ ಠಾಣೆ ಪೇದೆ ನಾರಾಯಣ ಅರಸ್ ಹಾಗೂ ಎಎಸ್‍ಐ ಅಂಜಿನಪ್ಪ ಕರ್ತವ್ಯ ನಿರತರಾಗಿದ್ದಾಗಲೇ ವ್ಯಕ್ತಿಯೊಬ್ಬನಿಂದ ತೀವ್ರ ಹಲ್ಲೆಗೆ ಒಳಗಾಗಿದ್ದಾರೆ. 

ಪೇದೆ ನಾರಾಯಣರಾಜ ಅರಸ್ ಜಿಲ್ಲಾ ಕ್ರೀಡಾಂಗಣದ ಕಡೆಯಿಂದ ಗ್ರಾಮಾಂತರ ಪೊಲೀಸ್ ಠಾಣೆ ಕಡೆ ಬರುತ್ತಿದ್ದ ಬೈಕ್ ಸವಾರ ರುದ್ರಪ್ಪನನ್ನು ತಡೆದು, ಹೆಲ್ಮೆಟ್ ಧರಿಸದ ಬಗ್ಗೆ ಸಂಚಾರ ಠಾಣೆ ಪೇದೆ ಅರಸು ಪ್ರಶ್ನಿಸಿದ್ದಾರೆ. ಇದರಿಂದ ಕುಪಿತನಾದ ರುದ್ರಪ್ಪ ಏಕಾಏಕಿ ಪೇದೆ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಎಎಸ್‍ಐ ಅಂಜಿನಪ್ಪ ಪೇದೆ ಅರಸು ರಕ್ಷಣೆಗೆ ಬರುತ್ತಿದ್ದಂತೆ ಬೈಕ್ ಸವಾರ ರುದ್ರಪ್ಪ ಎಎಸ್‍ಐ ಅಂಜಿನಪ್ಪ ಕೊರಳ ಪಟ್ಟಿ ಹಿಡಿದು, ಎಳೆದಾಡಿ ಹಲ್ಲೆ ಮಾಡಿದ್ದಾರೆ. ಅವಾಚ್ಯವಾಗಿ ಪೇದೆ, ಎಎಸ್‍ಐಗೆ ನಿಂದಿಸುತ್ತಾ, ರಸ್ತೆಯಲ್ಲೆಲ್ಲಾ ಉರುಳಾಡಿಸಿ, ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.  

ಎಲ್‍ಎಲ್‍ಬಿ ಓದಿರುವುದಾಗಿ ಹೇಳಿಕೊಂಡ ರುದ್ರಪ್ಪ ತಾನೊಬ್ಬ ವಕೀಲನಾಗಿದ್ದೇನೆಂದು ಹೇಳಿಕೊಂಡು ಮತ್ತಷ್ಟು ದೌರ್ಜನ್ಯ ಎಸಗಿದ್ದು, ತಕ್ಷಣವೇ ದಾರಿಹೋಕರು, ಇತರೆ ಪಾದ ಚಾರಿಗಳು ಬೈಕ್ ಸವಾರನನ್ನು ಹಿಡಿದು ಕೆಟಿಜೆ ನಗರ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು. ಇಡೀ ಘಟನೆಯನ್ನು ಪ್ರತ್ಯಕ್ಷದರ್ಶಿಯೊಬ್ಬರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

ಬೈಕ್ ಸವಾರ ಮಾನಸಿಕ ಅಸ್ವಸ್ಥನೆಂದು ಹೇಳಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆಂಬ ಮಾತುಗಳು ಕೇಳಿ ಬರುತ್ತಿವೆ. ನಂತರ ಗಾಯಾಳು ಪೇದೆ ಅರಸು, ಎಎಸ್‍ಐ ಅಂಜಿನಪ್ಪರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಎಸ್ಪಿ ಆರ್. ಚೇತನ್, ಎಎಸ್ಪಿ ಟಿ.ಜೆ. ಉದೇಶ್ ಹಾಗೂ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳು ಸಿಬ್ಬಂದಿ ಆರೋಗ್ಯ ವಿಚಾರಿಸಿದರು. ಕೆಟಿಜೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News