ಪಾಕ್ ಸ್ಪಿನ್ನರ್ ಅಬ್ದುರ್ರಹ್ಮಾನ್ ನಿವೃತ್ತಿ

Update: 2018-10-10 18:57 GMT

ಲಾಹೋರ್, ಅ.10: ಪಾಕಿಸ್ತಾನದ ಎಡಗೈ ಸ್ಪಿನ್ನರ್ ಅಬ್ದುರ್ರಹ್ಮಾನ್ ಬುಧವಾರ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಆದರೆ, ದೇಶೀಯ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ.

ಯುಎಇನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ತೋರಿದ ವೀರೋಚಿತ ಪ್ರದರ್ಶನದ ಮೂಲಕ ರಹ್ಮಾನ್ ಪ್ರಸಿದ್ಧಿ ಪಡೆದಿದ್ದರು. ಆ ಸರಣಿಯಲ್ಲಿ ಪಾಕ್ ವೈಟ್‌ವಾಶ್ ಸಾಧನೆ ಮಾಡಿತ್ತು. ರಹ್ಮಾನ್ ಸರಣಿಯಲ್ಲಿ ಒಟ್ಟು 19 ವಿಕೆಟ್‌ಗಳನ್ನು ಪಡೆದಿದ್ದರು. ಸಿಯಾಲ್‌ಕೋಟ್‌ನಲ್ಲಿ ಜನಿಸಿರುವ ರಹ್ಮಾನ್ 2006ರಲ್ಲಿ ವೆಸ್ಟ್‌ಇಂಡೀಸ್ ವಿರುದ್ದ ಸ್ವದೇಶದಲ್ಲಿ ನಡೆದ ಸರಣಿಯ ವೇಳೆ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. 2007ರಲ್ಲಿ ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕ ವಿರುದ್ಧ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆಗೈದಿದ್ದರು. ರಹ್ಮಾನ್ ಚೊಚ್ಚಲ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ಇನಿಂಗ್ಸ್‌ನಲ್ಲಿ ಒಟ್ಟು 8 ವಿಕೆಟ್ ಪಡೆದಿದ್ದರು. ಆ ಸರಣಿಯಲ್ಲಿ ಪಾಕ್ ಪರ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಆದರೆ, ಅವರು ಮತ್ತೊಮ್ಮೆ ಟೆಸ್ಟ್ ಪಂದ್ಯವನ್ನಾಡಲು 3 ವರ್ಷ ಕಾಯಬೇಕಾಯಿತು. 2010ರಲ್ಲಿ ಪಾಕ್ ತಂಡಕ್ಕೆ ವಾಪಸಾಗಿದ್ದ ರಹ್ಮಾನ್ 2014ರ ತನಕ ಖಾಯಂ ಸದಸ್ಯರಾಗಿದ್ದರು. 2011ರ ವಿಶ್ವಕಪ್‌ನಲ್ಲಿ ಆಡಿದ್ದ ರಹ್ಮಾನ್ ಉತ್ತಮ ಪ್ರದರ್ಶನ ನೀಡಿದ್ದರು. 2014ರ ಬಳಿಕ ರಹ್ಮಾನ್ ಪಾಕ್ ತಂಡದಲ್ಲಿ ಆಡಿಲ್ಲ. ಸ್ಪಿನ್ನರ್ ಸ್ಥಾನಕ್ಕಾಗಿ ಎದುರಾದ ಕಠಿಣ ಸ್ಪರ್ಧೆ ಅವರನ್ನು ತಂಡದಿಂದ ದೂರ ಉಳಿಯುವಂತೆ ಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News