ನೀವು ಈವರೆಗೆ ಗಂಗಾನದಿಯಿಂದ ಲಾಭಗಳಿಕೆಯ ಬಗ್ಗೆ ಮಾತ್ರ ಯೋಚಿಸಿದ್ದೀರಿ

Update: 2018-10-12 11:15 GMT

ಹೊಸದಿಲ್ಲಿ,ಅ.12: ಗಂಗಾ ನದಿಯ ಬಗ್ಗೆ ಸರಕಾರದ ಗಮನ ಸೆಳೆಯಲು ಕಳೆದ ಜೂ.22ರಿಂದ ಆಮರಣಾಂತ ಉಪವಾಸವನ್ನು ಕೈಗೊಂಡಿದ್ದ ಮಾಜಿ ಐಐಟಿ ಪ್ರೊಫೆಸರ್ ಹಾಗೂ ಪರಿಸರವಾದಿ ಜಿ.ಡಿ. ಅಗರ್ವಾಲ್ ಅಲಿಯಾಸ್ ಸ್ವಾಮಿ ಜ್ಞಾನಸ್ವರೂಪ ಸಾನಂದ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ತನ್ನ ಅಂತಿಮ ಪತ್ರದಲ್ಲಿ ‘‘ನೀವು ಈವರೆಗೆ ಗಂಗಾನದಿಯಿಂದ ಲಾಭಗಳಿಕೆಯ ಬಗ್ಗೆ ಮಾತ್ರ ಯೋಚಿಸಿದ್ದೀರಿ ’’ ಎಂದು ಆರೋಪಿಸಿದ್ದಾರೆ. ನಿರಶನದಿಂದ ತೀವ್ರ ಆನಾರೋಗ್ಯಕ್ಕೊಳಗಾಗಿದ್ದ ಅವರು ಗುರುವಾರ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಗಂಗಾನದಿ ಭಾರತದ ಸಂಕೇತವಾಗಿದೆ ಎನ್ನುವುದು ಅವರ ನಂಬಿಕೆಯಾಗಿತ್ತು.

 ಸರಕಾರವು ಗಂಗಾನದಿ ಮತ್ತು ಅದರ ಉಪನದಿಗಳ ಹರಿವಿಗೆ ತಡೆಯನ್ನುಂಟು ಮಾಡುವ ಯಾವುದೇ ಹೊಸ ಅಣೆಕಟ್ಟುಗಳು ಅಥವಾ ಜಲವಿದ್ಯುತ್ ಯೋಜನೆಗಳನ್ನು ಸ್ಥಾಪಿಸದೆ ಅದು ಮುಕ್ತವಾಗಿ ಹರಿಯುವಂತೆ ನೋಡಿಕೊಳ್ಳಬೇಕು ಎಂದು ಅಗರ್ವಾಲ್ ಬಯಸಿದ್ದರು. ಅವರು ಕೈಗೊಂಡಿದ್ದ 111 ದಿನಗಳ ನಿರಶನ ಇದೇ ಮೊದಲಿನದಾಗಿರಲಿಲ್ಲ. ಗಂಗಾನದಿಯತ್ತ ಸರಕಾರದ ನಿರ್ಲಕ್ಷದ ವಿರುದ್ಧ ಕಳೆದ ಹತ್ತು ವರ್ಷಗಳಿಂದಲೂ ಅವರು ಪ್ರತಿಭಟನೆಗಳನ್ನು ನಡೆಸುತ್ತಲೇ ಬಂದಿದ್ದರು.

ಗಂಗಾ ಸಂರಕ್ಷಣೆ ಮತ್ತು ನಿರ್ವಹಣೆ ಕಾಯ್ದೆಯನ್ನು ತರುವಂತೆ ಅವರು ಹಿಂದಿನ ಯುಪಿಎ ಮತ್ತು ಈಗಿನ ಎನ್‌ಡಿಎ ಸರಕಾರಗಳನ್ನು ಆಗ್ರಹಿಸಿದ್ದರು. ಗಂಗಾನದಿ ಪುನಶ್ಚೇತನದ ಹೊಣೆಯನ್ನು ಹೊತ್ತಿದ್ದ ಸಚಿವರಿಗೂ ಅವರು ಪತ್ರಗಳನ್ನು ಬರೆದಿದ್ದರು. ಆದರೆ ಸಂಬಂಧಿಸಿದ ಅಧಿಕಾರಿಗಳು ಅವರ ಯಾವುದೇ ಪತ್ರಕ್ಕೆ ಉತ್ತರಿಸುವ ಸೌಜನ್ಯವನ್ನು ತೋರಿಸಿರಲಿಲ್ಲ.

‘‘ನೀವು ಆಸಕ್ತಿ ತೋರಿಸಿ ಗಂಗಾನದಿಗೆ ಸಂಬಂಧಿಸಿದ ಎಲ್ಲ ಕಾರ್ಯಗಳಿಗಾಗಿ ಪ್ರತ್ಯೇಕ ಸಚಿವಾಲಯವನ್ನು ರೂಪಿಸಿದ್ದರಿಂದ ನೀವು ಎರಡು ಹೆಜ್ಜೆ ಮುಂದೆ ಸಾಗುತ್ತೀರಿ ಮತ್ತು ಗಂಗಾನದಿಯ ಸಂರಕ್ಷಣೆಗಾಗಿ ವಿಶೇಷ ಪ್ರಯತ್ನಗಳನ್ನು ಮಾಡುತ್ತೀರಿ ಎಂದು ನಾನು ನಿರೀಕ್ಷಿಸಿದ್ದೆ. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ನಿಮ್ಮ ಸರಕಾರವು ಕೈಗೊಂಡ ಎಲ್ಲ ಕ್ರಮಗಳಿಂದ ಗಂಗಾನದಿಗೆ ಯಾವುದೇ ಲಾಭವಾಗಿಲ್ಲ. ಅದಕ್ಕೆ ಬದಲಾಗಿ ಕಾರ್ಪೊರೇಟ್ ಕ್ಷೇತ್ರಕ್ಕೆ ಮತ್ತು ಹಲವಾರು ಉದ್ಯಮ ಸಂಸ್ಥೆಗಳಿಗೆ ಮಾತ್ರ ಲಾಭವಾಗಿದೆ. ನೀವು ಈವರೆಗೆ ಗಂಗಾನದಿಯಿಂದ ಲಾಭಗಳಿಕೆಯ ಬಗ್ಗೆ ಮಾತ್ರ ಯೋಚಿಸಿದ್ದೀರಿ’’ ಎಂದು ಅಗರ್ವಾಲ್ ಮೋದಿಯವರಿಗೆ ಬರೆದಿರುವ ತನ್ನ ಮೂರನೇ ಹಾಗೂ ಅಂತಿಮ ಪತ್ರದಲ್ಲಿ ಹೇಳಿದ್ದಾರೆ.

2012ರಲ್ಲಿ ಗಂಗಾ ಮಹಾಸಭಾ ಸಿದ್ಧಗೊಳಿಸಿದ್ದ ರಾಷ್ಟ್ರೀಯ ನದಿ ಗಂಗಾನದಿ(ಸಂರಕ್ಷಣೆ ಮತ್ತು ನಿರ್ವಹಣೆ)ಕಾಯ್ದೆ ಮಸೂದೆಯನ್ನು ತಕ್ಷಣವೇ ಸಂಸತ್ತಿನಲ್ಲಿ ಮಂಡಿಸಿ ಅಂಗೀಕಾರ ಪಡೆಯಬೇಕು,ಕಾಮಗಾರಿ ಹಂತದಲ್ಲಿರುವ ಎಲ್ಲ ಜಲವಿದ್ಯುತ್ ಯೋಜನೆಗಳನ್ನು ನಿಲ್ಲಿಸಬೇಕು,ಅರಣ್ಯನಾಶ,ಪ್ರಾಣಿಗಳ ಹತ್ಯೆ ಮತ್ತು ಗಣಿಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಬೇಕು ಹಾಗೂ ಗಂಗಾ ಭಕ್ತ ಪರಿಷತ್ ಅನ್ನು ಸ್ಥಾಪಿಸಬೇಕು ಎಂಬ ನಾಲ್ಕು ಬೇಡಿಕೆಗಳನ್ನು ಅಗರ್ವಾಲ್ ಮೋದಿಯವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News