ಕೃಷಿ ಬೆಳೆಗೆ ಏಕರೂಪ ಬೆಲೆ ನಿಗದಿಗೆ ಕೇಂದ್ರಕ್ಕೆ ಶೀಘ್ರ ನಿಯೋಗ: ಸಚಿವ ಬಂಡೆಪ್ಪ ಕಾಶಂಪೂರ್

Update: 2018-10-12 11:51 GMT

ಚಿಕ್ಕಮಗಳೂರು, ಅ.11: ರೈತರು ಬೆಳೆದ ಬೆಳೆಗೆ ಹೆಚ್ಚಿನ ಬೆಲೆ ಒದಗಿಸಿ ಕೊಡುವ ನಿಟ್ಟಿನಲ್ಲಿ ದೇಶಾದ್ಯಂತ ಏಕರೂಪ ಬೆಲೆ ನಿಗದಿ ಮಾಡುವ ಕಾನೂನನ್ನು ಜಾರಿಗೆ ತರುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ಹೇಳಿದರು.

ನಗರದ ಡಿಸಿಸಿ ಬ್ಯಾಂಕ್‍ನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೊಂದಿಗೆ ಪ್ರಧಾನ ಮಂತ್ರಿಗಳ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಲಾಗುವುದು ಎಂದರು.

ಈಗಿನ ವ್ಯವಸ್ಥೆಯಲ್ಲಿ ಮಾರುಕಟ್ಟೆಯಲ್ಲಿ ಟೊಮೆಟೋಗೆ 2 ರೂಪಾಯಿ ಬೆಲೆ ಇದ್ದರೆ ಮಾಲ್‍ಗಳಲ್ಲಿ ಅದರ ಬೆಲೆ 10 ರೂ ಇರುತ್ತದೆ. ಇದರಿಂದ ವರ್ತಕರಿಗಷ್ಟೇ ಲಾಭವಾಗುತ್ತಿದೆ. ಬೆಳೆದ ರೈತನಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು. ಇಡೀ ದೇಶದ ಎಲ್ಲಾ ಭಾಗದಲ್ಲೂ ಒಂದೇ ರೂಪದ ಬೆಲೆ ನಿಗಧಿ ಮಾಡುವ ಕಾನೂನು ಜಾರಿಗೆ ತಂದಲ್ಲಿ ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್‍ಗಳ ಒಟ್ಟು ಆರ್ಥಿಕ ನಿರ್ವಹಣೆ ಮೇಲೆ ನಬಾರ್ಡ್‍ನಿಂದ ನೀಡಲಾಗುತ್ತಿರುವ ಮರುಪಾವತಿ ಅನುದಾನನ್ನು ಶೇ 40 ರಿಂದ 75 ಕ್ಕೆ ಹೆಚ್ಚಿಸುವಂತೆ ಮನವಿ ಮಾಡಲಾಗುವುದು ಎಂದರು.

ನಗರದ ಕೃಷಿ ಮಾರುಕಟ್ಟೆಯಲ್ಲಿ ರೈತರಿಂದ ಕಮಿಷನ್ ಪಡೆಯುತ್ತಿರುವ ಕುರಿತು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಸಚಿವರು, ವರ್ತಕರಿಂದ ಮಾತ್ರ ಕಮಿಷನ್ ಪಡೆಯಬೇಕು. ಯಾವುದೇ ಕಾರಣಕ್ಕೂ ರೈತರಿಂದ ಕಮಿಷನ್ ಪಡೆಯಬಾರದು ಎಂದು ಸ್ಥಳದಲ್ಲಿದ್ದ ಎಪಿಎಂಸಿ ಕಾರ್ಯದರ್ಶಿಗೆ ಸೂಚಿಸಿದರು.

ಇದೇ ವೇಳೆ ಡಿಸಿಸಿ ಬ್ಯಾಂಕ್ ವತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು, ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಧರ್ಮೇಗೌಡ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಬ್ಯಾಂಕ್‍ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಾಗೇಶ್ ಎಸ್.ಡೋಂಗ್ರೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News