ಬಗರ್‍ಹುಕುಂ ಸಕ್ರಮ ಅರ್ಜಿ ಸಲ್ಲಿಕೆಗೆ ಸರಕಾರದಿಂದ ಮತ್ತೆ ಅವಕಾಶ: ಶಾಸಕ ರಾಜೇಗೌಡ

Update: 2018-10-12 18:52 GMT

ಕೊಪ್ಪ, ಅ.12: ರಾಜ್ಯ ಸರ್ಕಾರ ಬಗರ್ ಹುಕುಂ ಸಾಗುವಳಿ ಮಾಡಿದ ರೈತರಿಗೆ ಅಕ್ರಮ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ಕಲ್ಪಿಸಿದ್ದು ರೈತರು ಫಾರಂ 57ಯಲ್ಲಿ ಇಂದಿನಿಂದಲೇ ಅರ್ಜಿ ಸಲ್ಲಿಸಬಹುದು ಎಂದು ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದ್ದಾರೆ.

ನಾರ್ವೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರಕ್ಕೆ ಮಂಜೂರಾತಿ ನಿಯಮಕ್ಕೆ ಅರ್ಹವಾಗಿರುವ ಭೂಮಿಯಲ್ಲಿ ದಿನಾಂಕ 01-01-2005ರ ಕನಿಷ್ಠ ಮೂರು ವರ್ಷ ಸಾಗುವಳಿ ಮಾಡಿಕೊಂಡಿರುವ ರೈತರಿಗೆ ತಮ್ಮ ಭೂಮಿಗೆ ಹಕ್ಕುಪತ್ರ ಪಡೆಯಲು ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ ಎಂದರು.

1999ರಲ್ಲಿ ಕಾಂಗ್ರೆಸ್ ಪಕ್ಷ ತಂದ ಅಕ್ರಮ ಸಕ್ರಮ ಫಾರಂ 50 ಮತ್ತು ಫಾರಂ 53 ಯಡಿ ಅರ್ಜಿ ಸಲ್ಲಿಸಿದ ರೈತರ ಅರ್ಜಿಗಳು ನಿಗದಿತ ಸಮಯದಲ್ಲಿ ವಿಲೇವಾರಿ ಮಾಡದಿರುವುದರಿಂದ ಸಾವಿರಾರು ಅರ್ಜಿಗಳು ಇನ್ನೂ ಬಾಕಿ ಉಳಿದಿದೆ. ಇವುಗಳನ್ನು ಆದ್ಯತೆಯ ಮೇಲೆ ಬಗೆಹರಿಸುತ್ತೇನೆ. ಹೊಸದಾಗಿ ಅರ್ಜಿ ಸಲ್ಲಿಸುವವರು ತಾಲುಕು ಕಚೇರಿಯಲ್ಲಿ ತಮ್ಮ ಜಮೀನಿನ ಪೂರ್ಣ ಮಾಹಿತಿಯೊಂದಿಗೆ ರೂ.100 ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬೇಕು. ಹಿಂದೆ ಫಾರಂ 50 ಮತ್ತು 53 ಅಡಿ ಅರ್ಜಿ ಸಲ್ಲಿಸಿದವರಿಗೆ ಪುನಃ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದಿದ್ದಾರೆ. 

ಕಾಂಗ್ರೆಸ್ ಪಕ್ಷ ರೈತರಿಗಾಗಿ ತಂದ ಫಾರಂ 50, 53 ಮತ್ತು 57 ಬಡವರ ಸೂರಿಗಾಗಿ ತಂದ 94ಸಿ ಮತ್ತು 94ಸಿಸಿ ಎಲ್ಲವೂ ರೈತರ, ಬಡವರ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗಾಗಿ ಜಾರಿಗೆ ತಂದ ಕಾಯ್ದೆಗಳು, ಕಾಂಗ್ರೆಸ್ ಅಭಿವೃದ್ಧಿಯಲ್ಲಿ ಎಂದೂ ರಾಜಕಾರಣ ಮತ್ತು ಧರ್ಮಕಾರಣ ಮಾಡಲಿಲ್ಲ. ಕೊಟ್ಟ ಮಾತಿನಂತೆ ನಡೆದುಕೊಂಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News