ವಿಶ್ವಸಂಸ್ಥೆ ಮಾನವಹಕ್ಕು ಮಂಡಳಿಗೆ ಭಾರತ ಆಯ್ಕೆ

Update: 2018-10-13 06:05 GMT

ವಾಷಿಂಗ್ಟನ್, ಅ. 13: ವಿಶ್ವಸಂಸ್ಥೆಯ ಅತ್ಯುನ್ನತ ಮಾನವ ಹಕ್ಕು ಮಂಡಳಿಗೆ ಭಾರತ ಶುಕ್ರವಾರ ಚುನಾಯಿತವಾಗಿದೆ. ಏಷ್ಯಾ- ಫೆಸಿಫಿಕ್ ವರ್ಗದಲ್ಲಿ ಗರಿಷ್ಠ 188 ಮತಗಳನ್ನು ಪಡೆದು ಭಾರತ ಈ ಪ್ರತಿಷ್ಠಿತ ಹುದ್ದೆಗೆ ಆಯ್ಕೆಯಾಗಿದೆ. ಭಾರತದ ಅಧಿಕಾರಾವಧಿ 2019ರ ಜನವರಿ 1ರಿಂದ 3 ವರ್ಷಗಳವರೆಗೆ ಇರುತ್ತದೆ.

193 ಸದಸ್ಯರ ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನದಲ್ಲಿ ನಡೆದ ಚುನಾವಣೆಯಲ್ಲಿ ಭಾರತ ಇತರ ಯಾವುದೇ ಸ್ಪರ್ಧಿಗಳಿಗಿಂತ ಗರಿಷ್ಠ ಮತ ಗಳಿಸಿದ ಸಾಧನೆ ಮಾಡಿತು. ರಹಸ್ಯ ಮತದಾನದ ಮೂಲಕ ಒಟ್ಟು 18 ಹೊಸ ಸದಸ್ಯರನ್ನು ಚುನಾಯಿಸಲಾಯಿತು. ಮಂಡಳಿಗೆ ಆಯ್ಕೆಯಾಗಲು ಕನಿಷ್ಠ 97 ಮತಗಳು ಅಗತ್ಯವಿದ್ದವು.

ಏಷ್ಯಾ ಪೆಸಿಫಿಕ್ ವರ್ಗದಲ್ಲಿ ಭಾರತದ ಜತೆ ಬಹರೈನ್, ಬಾಂಗ್ಲಾದೇಶ, ಫಿಜಿ ಮತ್ತು ಫಿಲಿಫೀನ್ಸ್ ಕೂಡಾ ತಮ್ಮ ಹಕ್ಕು ಪ್ರತಿಪಾದಿಸಿದ್ದವು. ಐದು ಸ್ಥಾನಗಳಿಗೆ ಐದು ದೇಶಗಳು ಸ್ಪರ್ಧಿಸಿದ್ದರೂ, ಗರಿಷ್ಠ ಮತ ಗಳಿಸಿದ ಹೆಗ್ಗಳಿಕೆ ಭಾರತದ್ದಾಯಿತು. ಭಾರತ ಅತ್ಯಧಿಕ ಮತಗಳನ್ನು ಗಳಿಸಿರುವುದು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗರಿಮೆಯ ಕನ್ನಡಿ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ರಾಯಭಾರಿ ಸೈಯದ್ ಅಕ್ಬರುದ್ದೀನ್ ಸಂತಸ ವ್ಯಕ್ತಪಡಿಸಿದ್ದಾರೆ.

ಫಿಜಿ 187, ಬಾಂಗ್ಲಾದೇಶ 178, ಬಹರೈನ್ ಹಾಗೂ ಫಿಲಿಫೀನ್ಸ್ ತಲಾ 165 ಮತ ಪಡೆದವು. ಐದು ಪ್ರಾದೇಶಿಕ ವಿಭಾಗಗಳ 18 ದೇಶಗಳು ಈ ಬಾರಿ ಆಯ್ಕೆಯಾಗಿವೆ.

ಭಾರತ ಈ ಮೊದಲು 2011-2014, 2014-2017ರ ಅವಧಿಗೂ ಜಿನೀವಾ ಮೂಲದ ಈ ಅತ್ಯುನ್ನತ ಸಂಸ್ಥೆಗೆ ಆಯ್ಕೆಯಾಗಿತ್ತು. 2017ರ ಡಿಸೆಂಬರ್ 31ರಂದು ಭಾರತದ ಅಧಿಕಾರಾವಧಿ ಮುಗಿದಿತ್ತು. ಮಂಡಳಿಯಲ್ಲಿ ಒಟ್ಟು 47 ಚುನಾಯಿತ ಸದಸ್ಯ ದೇಶಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News