ದೇಶಾಭಿವೃದ್ಧಿಗೆ ಗಾಂಧಿ ಪಥದ ಅನುಸರಣೆ ಅತ್ಯಗತ್ಯ: ಶಾಸಕ ಸಿ.ಟಿ.ರವಿ

Update: 2018-10-13 12:23 GMT

ಚಿಕ್ಕಮಗಳೂರು, ಅ.13: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಇಂದು ಎಲ್ಲರೂ ಗಾಂಧಿ ಮಾರ್ಗದಲ್ಲಿ ನಡೆಯುವ ಆವಶ್ಯಕತೆ ಇದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಜ್ಯಾದ್ಯಂತ ಸಂಚರಿಸುತ್ತಿರುವ ಸ್ಥಬ್ದಚಿತ್ರ ರಥವನ್ನು ನಗರದಲ್ಲಿ ಶನಿವಾರ ಸ್ವಾಗತಿಸಿ ಅವರು ಮಾತನಾಡಿದರು.

ಬಹುಶಃ ಮುಂದಿನ ಪೀಳಿಗೆಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅಂತಹವರು ಹುಟ್ಟಿದ್ದರೇ? ಬದುಕಿದ್ದರೇ? ಎಂದು ಪ್ರಶ್ನಾರ್ತಕ ಚಿಹ್ನೆ ಮೂಡಬಹುದು. ಆ ರೀತಿ ಬದುಕಲು ಸಾಧ್ಯವಾ ಎಂಬ ಅನುಮಾನ ಕೆಲವರಲ್ಲಿ ಮೂಡಬಹುದು ಎಂದ ಅವರು, ಗಾಂಧೀಜಿಯವರು ನಮ್ಮ ದೇಶದಲ್ಲಿ ಹುಟ್ಟಿ ಸಾಮಾನ್ಯ ಜನರಂತೆಯೇ ಇದ್ದು, ತಮ್ಮ ಪ್ರಾಮಾಣಿಕತೆ, ಸತ್ಯ ಮತ್ತು ಸರಳತೆಯ ಮೂಲಕ ಮಹಾತ್ಮರಾಗಿ ಬೆಳೆದು ಬಂದವರು ಎಂದರು.

ಅಹಿಂಸೆಯ ಮೂಲಕ ಸಾಮಾನ್ಯ ಜನರನ್ನೂ ಸಹ ಅಂದೋಲನಗಳಲ್ಲಿ ಭಾಗಿಯಾಗುವಂತೆ ಮಾಡಿದವರು. ಉಪ್ಪು, ಚರಕ, ಖಾದಿ ಇವುಗಳನ್ನು ಶಸ್ತ್ರಗಳನ್ನಾಗಿ ಪರಿವರ್ತಿಸಿ ಸಾಮಾನ್ಯ ಜನರನ್ನು ಚಳುವಳಿಗೆ ಜೋಡಿಸುವಂತ ಕೆಲಸವನ್ನು ಮಾಡಿದವರು, ಸ್ವಚ್ಚತೆ ಎಲ್ಲಿರುತ್ತದೋ ಅಲ್ಲಿ ಭಗವಂತ ಇರುತ್ತಾನೆ ಎಂದು ಸ್ವಚ್ಚತೆಗೆ ಕರೆ ಕೊಟ್ಟವರು ಗಾಂಧೀಜಿ ಎಂದು ಹೇಳಿದರು.

ಗಾಂಧಿ ಮಾರ್ಗ ಎಲ್ಲರನ್ನೂ ಪ್ರಾಣಿ, ಪಕ್ಷಿಗಳನ್ನೂ ಬದುಕಿಸುತ್ತದೆ ಎಂದ ಅವರು ಈ ಹಿನ್ನೆಲೆಯಲ್ಲಿ ನಾವುಗಳು ದೇಶವನ್ನು ಸ್ವಚ್ಚಗೊಳಿಸುವುದರ ಜೊತೆಗೆ ನಮ್ಮ ಮನಸ್ಸುಗಳನ್ನು ಸ್ವಚ್ಚಗೊಳಿಸೋಣ. ಆ ಮೂಲಕ ಬಲಿಷ್ಠ ಭಾರತವನ್ನು ನಿರ್ಮಾಣ ಮಾಡೋಣ ಎಂದು ಮನವಿ ಮಾಡಿದರು.

ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೆ.ಮಂಜೇಗೌಡ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಹಿನ್ನೆಲೆಯಲ್ಲಿ ಗಾಂಧೀಜಿಯವರ ಆದರ್ಶ, ಸಂದೇಶ ಮತ್ತು ವಿಚಾರಧಾರೆಗಳನ್ನು ರಾಜ್ಯದ ಜನತೆಗೆ ತಲುಪಿಸುವ ಉದ್ದೇಶದಿಂದ ಸ್ಥಬ್ದಚಿತ್ರ ಯಾತ್ರೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ತಹಶೀಲ್ದಾರ್ ನಂದಕುಮಾರ್, ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ರಾಜಗೋಪಾಲ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಸೇರಿದಂತೆ ಗಣ್ಯರು ಮತ್ತು ಸಾರ್ವಜನಿಕರು ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಜೊತೆಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಸ್ಥಬ್ದಚಿತ್ರ ರಥ ಐ.ಜಿ. ರಸ್ತೆ, ಎಂ.ಜಿ.ರಸ್ತೆ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಇದಕ್ಕೂ ಮುನ್ನ ಬೆಳಗ್ಗೆ ಜಿಲ್ಲೆಗೆ ಆಗಮಿಸಿದ ಸ್ಥಬ್ದಚಿತ್ರ ರಥವನ್ನು ಜಿಲ್ಲೆಯ ಗಡಿ ಗ್ರಾಮವಾದ ಬಸ್ಕಲ್‍ನಲ್ಲಿ ಮೂಡಿಗೆರೆ ತಹಶೀಲ್ದಾರ್ ಪಧ್ಮನಾಭ ಶಾಸ್ತ್ರಿ ಮತ್ತು ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೆ.ಮಂಜೇಗೌಡ ಸ್ವಾಗತಿಸಿದರು. ನಂತರ ಮೂಡಿಗೆರೆಗೆ ಆಗಮಿಸಿದ ಸ್ಥಬ್ದಚಿತ್ರ ರಥಕ್ಕೆ ಸಾರ್ವಜನಿಕರು, ಗಣ್ಯರು, ವಿದ್ಯಾರ್ಥಿಗಳು ಪುಷ್ಪ ನಮನ ಸಲ್ಲಿಸಿದರು. ಇದೇ ವೇಳೆ ಪಟ್ಟಣದಲ್ಲಿ ವಿದ್ಯಾರ್ಥಿಗಳೊಂದಿಗೆ ಸ್ಥಬ್ದಚಿತ್ರ ರಥದ ಮೆರವಣಿಗೆ ನಡೆಯಿತು. ಸಾರ್ವಜನಿಕರು ಸ್ಥಬ್ದಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News