ತಾಂಜಾನಿಯಾದ ಕಿಲಿಮಂಜಾರೊ ಪರ್ವತ ಶಿಖರದಲ್ಲಿ ಕನ್ನಡ ಧ್ವಜ ಹಾರಿಸಿದ ಯುವಕ

Update: 2018-10-14 04:56 GMT

ಬೆಂಗಳೂರು, ಅ. 14: 'ಎಲ್ಲಾದರು ಇರು ಎಂತಾದರು ಇರು ನೀ ಕನ್ನಡವಾಗಿರು’ ಎಂಬ ಕವಿವಾಣಿಯನ್ನು ಅಕ್ಷರಶಃ ಪಾಲಿಸಿದ ಯುವಕನೊಬ್ಬ ತಾಂಜಾನಿಯಾದ ಕಿಲಿಮಂಜಾರೊ ಪರ್ವತ ಶಿಖರದಲ್ಲಿ ಕನ್ನಡ ಧ್ವಜ ಹಾರಿಸಿ, ಕನ್ನಡ ಪ್ರೇಮ ಮೆರೆದಿದ್ದಾನೆ.

ಮೋಜಿ ಎಂಬ ಸಾಹಸ ವಸ್ತುಗಳ ಮಾರಾಟ ಪ್ಲಾಟ್‌ಫಾರಂನಲ್ಲಿ ಮಾರಾಟ ಪ್ರತಿನಿಧಿಯಾಗಿರುವ ಅಶುತೋಶ್ ಭಾಸ್ಕರ್ (23), ತಾಂಜಾನಿಯಾಗೆ ಕಂಪನಿಯ ಪರವಾಗಿ ಅಧಿಕೃತ ಭೇಟಿ ನೀಡಿದ್ದ ವೇಳೆ ವಿಶ್ವದ ನಾಲ್ಕನೇ ಅತಿ ಎತ್ತರದ ಶಿಖರವನ್ನು ಏರಿ, ಕನ್ನಡ ಧ್ವಜ ಹಾರಿಸಿದ್ದಾರೆ. "ಈ ಪ್ರವಾಸದ ಆರಂಭದಿಂದಲೂ ಈ ಶಿಖರವನ್ನು ಏರುವ ಕನಸು ಕಾಣುತ್ತಿದ್ದೆ. ಈ ಅವಕಾಶ ಸಿಗುತ್ತದೆ ಎಂಬ ಖಾತ್ರಿ ನನಗೆ ಇರಲಿಲ್ಲ" ಎಂದು ಭಾಸ್ಕರ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

"ಕಂಪನಿಯ ಗ್ರಾಹಕರೊಬ್ಬರು ಉದ್ದೇಶಿತ ಭೇಟಿ ರದ್ದುಪಡಿಸಿದ್ದರಿಂದ ಸಮುದ್ರಮಟ್ಟದಿಂದ 5895 ಮೀಟರ್ ಎತ್ತರದ ಈ ಆಫ್ರಿಕನ್ ಶಿಖರ ಏರುವ ಅವಕಾಶ ಸಿಕ್ಕಿತು. ನಾನು ಮೂಲತಃ ಕರ್ನಾಟಕದವನು. ಕಿಲಿಮಂಜಾರೊ ಶಿಖರ ಏರುವ ಮುನ್ನ ನನ್ನ ಮನಸ್ಸಿಗೆ ತೋಚಿದ್ದು, ಶಿಖರ ಏರಿದ ತಕ್ಷಣ ಕನ್ನಡ ಧ್ವಜ ಹಾರಿಸಬೇಕು ಎನ್ನುವುದು" ಎಂದು ಹೇಳಿದರು.

ತಾಂಜಾನಿಯಾದಲ್ಲಿ ಇದ್ದ ಅವಧಿಯಲ್ಲಿ ಇಡೀ ದೇಶದಲ್ಲಿ ಇಂಗ್ಲಿಷ್ ಮಾತನಾಡುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ ಇರುವುದನ್ನು ಅಶುತೋಶ್ ಕಂಡುಕೊಂಡರು. "ಅರ್ಧಕ್ಕಿಂತ ಹೆಚ್ಚು ಮಂದಿ ಸ್ವಾಹಿಲಿ ಭಾಷೆ ಮಾತನಾಡುತ್ತಾರೆ. ಅಲ್ಲಿ ನನ್ನ ದೇಶ ಹಾಗೂ ಮಾತೃಭಾಷೆಯನ್ನು ಕಳೆದುಕೊಂಡ ಅನುಭವ ನನಗಾಗಿಯಿತು" ಎಂದು ಬಣ್ಣಿಸಿದ್ದಾರೆ.

ಆದ್ದರಿಂದ ತಕ್ಷಣ ಪಕ್ಕದ ಟೈಲರ್ ಬಳಿಗೆ ತೆರಳಿ ಕನ್ನಡ ಧ್ವಜ ಹೊಲಿಸಿದರು. ಸ್ಥಳೀಯರ ನೆರವಿನಿಂದ ಧ್ವಜಕ್ಕೆ ಅಗತ್ಯ ಬಟ್ಟೆ ಖರೀದಿಸಿದರು. "ಸೂಕ್ತ ಬಟ್ಟೆ ಹುಡುಕಲು ಆರು ಗಂಟೆ ಬೇಕಾಯಿತು. 5 ಡಾಲರ್ ವೆಚ್ಚದಲ್ಲಿ ಅದನ್ನು ಹೊಲಿಸಿ ಒಯ್ದೆ" ಎಂದು ಬೆಂಗಳೂರು ಜಯನಗರ ನಿವಾಸಿಯಾದ ಅವರು ವಿವರಿಸಿದರು. ಸೆಪ್ಟೆಂಬರ್ 21ರಂದು ಚಾರಣ ಆರಂಭಿಸಿ ಆರು ದಿನಗಳಲ್ಲಿ ಶಿಖರದ ತುದಿ ತಲುಪಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News