ಎಸ್‍ಐಟಿ ವರದಿ ‘ಶುದ್ಧ ಸುಳ್ಳು’: ನಿವೃತ್ತ ಸೇನಾಧಿಕಾರಿ ಝಮೀರುದ್ದೀನ್ ಶಾ

Update: 2018-10-14 08:19 GMT

ಹೊಸದಿಲ್ಲಿ, ಅ.14: ಗುಜರಾತ್ ಹಿಂಸಾಚಾರ ಬಗೆಗಿನ ವಿಶೇಷ ತನಿಖಾ ತಂಡ (ಎಸ್ ಐಟಿ) ನೀಡಿದ ವರದಿ ಶುದ್ಧ ಸುಳ್ಳು ಎಂದು ನಿವೃತ್ತ ಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ ಝಮೀರುದ್ದೀನ್ ಶಾ ಹೇಳಿದ್ದಾರೆ.

ತಮ್ಮ ಆತ್ಮಚರಿತ್ರೆ, "ದ ಸರ್ಕಾರಿ ಮುಸಲ್ಮಾನ್" ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, "ತೀರಾ ಇತ್ತೀಚಿನವರೆಗೂ ನನಗೆ ಎಸ್‍ಐಟಿ ವರದಿ ಬಗ್ಗೆ ತಿಳಿದೇ ಇರಲಿಲ್ಲ. ಮತ್ತೆ ಹೇಳುತ್ತೇನೆ; ಇದು ಶುದ್ಧ ಸುಳ್ಳು. ನಾನು ಸತ್ಯ ಹೇಳಿದ್ದೇನೆ. ಈ ವಿಚಾರದ ಬಗ್ಗೆ ಮಾತನಾಡಲು ನನಗಿಂತ ಅರ್ಹ ವ್ಯಕ್ತಿ ಬಹುಶಃ ಬೇರಾರೂ ಸಿಗಲಾರರು" ಎಂದವರು ಸ್ಪಷ್ಟಪಡಿಸಿದರು.

ಸೇನೆಯ ಅಂದಿನ ಮುಖ್ಯಸ್ಥರಾಗಿದ್ದ ಜನರಲ್ ಎಸ್.ಪದ್ಮನಾಭನ್ ಕೂಡಾ ಜನರಲ್ ಶಾ ಹೇಳಿಕೆಯನ್ನು ಬೆಂಬಲಿಸಿದ್ದರು.

" ಝಮೀರುದ್ದೀನ್  ಶಾ ಅವರಿಗೆ ಬಹುಶಃ ಗುಜರಾತ್‍ನಲ್ಲಿ ಸೇನೆಯನ್ನು ನಿಯೋಜಿಸಲು ಕಾರಣವಾದ ಅಂಶಗಳ ಬಗ್ಗೆ ನಿರ್ದಿಷ್ಟವಾಗಿ ಗೊತ್ತಿಲ್ಲದಿರಬಹುದು. ಆದರೆ ಕ್ರಮ ಕೈಗೊಂಡ ವರದಿಯಲ್ಲಿ ಅವರು ಪ್ರತಿಯೊಂದು ವಿವರಗಳನ್ನು ಉಲ್ಲೇಖಿಸಿದ್ದಾರೆ" ಎಂದು ಪದ್ಮನಾಭನ್ ಹೇಳಿದ್ದರು. ಎಸ್‍ಐಟಿ ಎಂದೂ ಲೆಫ್ಟಿನೆಂಟ್ ಜನರಲ್ ಅವರನ್ನು ಭೇಟಿ ಮಾಡಿಲ್ಲ. ಝಮೀರುದ್ದೀನ್ ಶಾ ಅವರ ಕ್ರಮ ಕೈಗೊಂಡ ವರದಿಯನ್ನು ಕೂಡಾ ಎಸ್‍ಐಟಿ ನೋಡಿಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ವಿವರಿಸಿದ್ದರು.

ಝಮೀರುದ್ದೀನ್ ಶಾ ಅವರ ಹೇಳಿಕೆಯಂತೆ 2002ರ ಗುಜರಾತ್ ಹಿಂಸಾಚಾರವನ್ನು ಸೇನೆ ತನ್ನ ಕಠಿಣ ಹಾಗೂ ನ್ಯಾಯಸಮ್ಮತ ಕ್ರಮದ ಮೂಲಕ ಎರಡು ದಿನ ಬಳಿಕ ಕೊನೆಗಾಣಿಸಿತು. ಅನಿಯಂತ್ರಿತ ಹಿಂಸೆಗೆ ಪೊಲೀಸರ ಪಕ್ಷಪಾತ ಧೋರಣೆ ಮತ್ತು ಪೊಲೀಸ್ ವ್ಯವಸ್ಥೆಯನ್ನು ರಾಜಕೀಯಗೊಳಿಸಿದ್ದು ಪ್ರಮುಖ ಕಾರಣ ಎಂದು ಝಮೀರುದ್ದೀನ್ ಶಾ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News