ದಾವಣಗೆರೆ : ಸಂಪನ್ನ ಭಾರತದತ್ತ ಕೇಂದ್ರ ಸರ್ಕಾರ ಕುರಿತ ಆರ್ಥಿಕ ವಿಶ್ಲೇಷಣೆಯ ಸಭೆ

Update: 2018-10-14 18:32 GMT

ದಾವಣಗೆರೆ,ಅ.14:ಮೋದಿ ಸರ್ಕಾರ ಕೇವಲ ನಾಲ್ಕೂವರೆ ವರ್ಷಗಳಲ್ಲಿ ಸಾಧಿಸಿರುವುದನ್ನು ಬಿಜೆಪಿ ಕಾರ್ಯಕರ್ತರು ಹೆಮ್ಮೆಯಿಂದ ತಲೆಎತ್ತಿಕೊಂಡು ಜನಸಾಮಾನ್ಯರಿಗೆ ತಿಳಿಸಬೇಕು ಎಂದು ಬಿಜೆಪಿ ರಾಜ್ಯ ಆರ್ಥಿಕ ಪ್ರಕೋಷ್ಠದ ಸಂಚಾಲಕ ವಿಶ್ವನಾಥ್ ಭಟ್ ನುಡಿದರು.

ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ರವಿವಾರ ಹಮ್ಮಿಕೊಂಡಿದ್ದ ಸಂಪನ್ನ ಭಾರತದತ್ತ ಕೇಂದ್ರ ಸರ್ಕಾರ ಕುರಿತ ಆರ್ಥಿಕ ವಿಶ್ಲೇಷಣೆಯ ವಿಶೇಷ ಸಭೆಯಲ್ಲಿ ಅವರು ವಿಶ್ಲೇಷಣೆ ಮಾಡಿದರು.

2014ರ ವರೆಗೆ ಭಾರತವನ್ನು ಐಸಿಯುನಲ್ಲಿಟ್ಟದ ಕಾಂಗ್ರೆಸ್ ಸರ್ಕಾರದ ಕರ್ಮಕಾಂಡ ಹಾಗೂ ಕಳೆದ ನಾಲ್ಕೂವರೆ ವರ್ಷದಲ್ಲಿ ಮೋದಿ ಮಾಡಿದ ಸಾಧನೆಗಳನ್ನು ಜನಸಾಮಾನ್ಯರಿಗೆ ನಮ್ಮ ಕಾರ್ಯಕರ್ತರು ಹೆಮ್ಮೆಯಿಂದ ತಲೆಎತ್ತಿ ಹೇಳುವಂತಹ ಎಂದೂ ಕಂಡರಿಯದ, ಕೇಳರಿಯದ ಮಹತ್ತರ ಸಾಧನೆಗಳನ್ನು ನಮ್ಮ ಕೇಂದ್ರ ಬಿಜೆಪಿ ಸರ್ಕಾರ ಮಾಡಿದೆ ಎಂದ ಅವರು, 2014ರ ವರೆಗೆ ಇಡೀ ಜಗತ್ತಿನಲ್ಲಿಯೇ ಅಸಮಾನತೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿತ್ತು. ಆರ್ಥಿಕ ಸಂಪತ್ತೆಲ್ಲಾ ಕೆಲವೇ ಕೆಲವರ ಕೈಯಲ್ಲಿತ್ತು. ಆದರೆ, ಪ್ರಧಾನಿ ಮೋದಿ ಅವರ ಆರ್ಥಿಕ ನೀತಿಗಳಿಂದ ಅಸಮಾನತೆ ಇಳಿಮುಖ ಕಂಡಿದೆ ಎಂದು ಅವರು ವಿವರಿಸಿದರು.

ಹಿಟ್ಲರ್ ಆಡಳಿತದಲ್ಲಿ ಒಬ್ಬ ಪ್ರಚಾರಕನಿದ್ದ. ಅವನು ಒಂದು ಸುಳ್ಳನ್ನು ಪದೇ ಪದೇ ನಿಜವೆಂದು ಹೇಳುತ್ತಿದ್ದ. ಇದು ವರ್ಷಗಟ್ಟಲೇ ಸಾಗುತ್ತಿತ್ತು. ಇದರಿಂದ ಜನರು ಆ ಸುಳ್ಳು ನಿಜವೇಂದೆ ನಂಬಿಬಿಡುತ್ತಿದ್ದರು. ಅದರಂತೆ, ಕಾಂಗ್ರೆಸ್ ಸುಳ್ಳನ್ನೇ ಪದೇಪದೇ ಸತ್ಯವೆಂದು ನಂಬಿಸಿ 52 ವರ್ಷಗಳ ಕಾಲ ಆಡಳಿತ ನಡೆಸಿತು. ಜೊತೆಗೆ, ದೇಶದ ಜನತೆಗೆ ಸ್ವಾವಲಂಬಿ ಬದುಕನ್ನೇ ಸೃಷ್ಟಿಸಲಿಲ್ಲ. ಆದರೆ, ಕೇವಲ ನಾಲ್ಕೂವರೆ ವರ್ಷದಲ್ಲಿ ಮೋದಿ ಭಾರತೀಯರಿಗೆ ಸ್ವಾವಲಂಬಿ ಬದುಕು ಸೃಷ್ಟಿಸಿದರು. ಮುಂದಿನ 2020ರ ವೇಳೆಗೆ ಭಾರತ ಆಮದು ಮಾಡಿಕೊಳ್ಳುವುದಕ್ಕಿಂತ ಹೆಚ್ಚು ರಪ್ತು ಮಾಡುವತ್ತ ಮುನ್ನಡೆಯಿಡಲಿದೆ ಎಂದರು.

2008ರಿಂದ 2014ರ ವರೆಗೆ ಕೈಗಾರಿಕೋದ್ಯಮಿಗಳಿಗೆ ಭಾರತೀಯ ಬ್ಯಾಂಕ್‍ಗಳು 34 ಲಕ್ಷ ಕೋಟಿ ಸಾಲ ನೀಡಿದೆ. ಇದರಲ್ಲಿ ಸಾಲಕ್ಕೆ ಬಡ್ಡಿ ಪಾವತಿಯೂ ಆಗದೇ 10 ಲಕ್ಷ ಕೋಟಿಗಿಂತಲೂ ಹೆಚ್ಚು ಮೊತ್ತ ಅನುತ್ಪಾದಿತ ಸ್ವತ್ತಾಗಿದೆ. ಕಾಂಗ್ರೆಸ್ ಸರ್ಕಾರದಿಂದ ಈ ರೀತಿಉ ದೇಶ ಮುಳುಗುವಂತಹ ಭಯಂಕರ ಸಮಸ್ಯೆಗಳ ಪರಿಹಾರಕ್ಕಾಗಿ ಮೋದಿ ಹಲವಾರು ಹೊಸ ಕಾಯ್ದೆ, ಸುಧಾರಣೆ ಜಾರಿಗೆ ತಂದು ತೆರಿಗೆ ವಂಚನೆ, ಕಾಳಧನ, ಬ್ಯಾಂಕ್ ಸಂಪತ್ತಿನ ಲೂಟಿ ನಿಲ್ಲಿಸಿದೆ ಎಂದರು.

ಕೃಷಿ ರೈತ ಸಮುದಾಯ, ನಿರುದ್ಯೋಗ ಸಮಸ್ಯೆ ನಿವಾರಣೆ, ಮಹಿಳೆಯರ ಸಬಲೀಕರಣ, ದುರ್ಬಲ ವರ್ಗದವರ ಏಳ್ಗೆ, ಕಾರ್ಮಿಕ ವರ್ಗ ಸಮಸ್ಯೆ ನಿವಾರಣೆ ಹಾಗೂ ಯುವ ಪೀಳಿಗೆಗೆ ಉತ್ತಮ ಭವಿಷ್ಯಕ್ಕಾಗಿ ಶಿಕ್ಷಣದಲ್ಲಿ ಬದಲಾವಣೆ, ಹೆಚ್ಚು ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಜವಳಿ ಹಾಗೂ ಚರ್ಮದ ಉತ್ಪನ್ನ ತಯಾರಿಸುವ ಕ್ಷೇತ್ರಗಳಿಗೆ ವಿಶೇಷ ಪ್ಯಾಕೇಜ್ ಸೇರಿದಂತೆ ಮೋದಿ ಸರ್ಕಾರ ದಿಟ್ಟ ನಡೆ, ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ ಎಂದ ಅವರು, ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಬಳಕೆ ಕಂಡು 2014ರಲ್ಲಿ ಕೇವಲ 2 ಮಾತ್ರವಿದ್ದ ಮೊಬೈಲ್ ಘಟಕಗಳನ್ನು ಇಂದು 121 ಘಟಕಗಳಿಗೆ ವಿಸ್ತರಿಸಿದ್ದಾರೆ ಇದರಿಂದ ನಾಲ್ಕೂವರೆ ಲಕ್ಷ ಜನರಿಗೆ ಉದ್ಯೋಗ ದೊರೆತಿದೆ ಎಂದರು.

ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಕಳೆದ ನಾಲ್ಕೂವರೆ ವರ್ಷದಲ್ಲಿ ಮೋದಿ ಸರ್ಕಾರ ಈವರೆಗೆ ಯಾರೂ ಮಾಡದಷ್ಟು ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಇಂದಿನ ವಿಶೇಷ ಸಭೆಯಲ್ಲಿ ಮಾಹಿತಿ ಪಡೆದು ಜನಸಾಮಾನ್ಯರಿಗೆ ಮುಟ್ಟಿಸುವ ಮೂಲಕ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯನ್ನಾಗಿಸಬೇಕೆಂದರು.

ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಡಾ. ಶಿವಯೋಗಿಸ್ವಾಮಿ, ಧನಂಜಯ ಕಡ್ಲೇಬಾಳು, ರುದ್ರಮುನಿಸ್ವಾಮಿ, ಎಚ್.ಎನ್. ಶಿವಕುಮಾರ್, ಡಿ.ಎಚ್. ಶಿವಶಂಕರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News