ನಕಲಿ ಎನ್‌ಕೌಂಟರ್: 24 ವರ್ಷ ಕಳೆದರೂ ಆಘಾತದಿಂದ ಚೇತರಿಸಿಕೊಳ್ಳದ ಕುಟುಂಬ

Update: 2018-10-15 04:22 GMT

ದಿಬ್ರೂಘರ್, ಅ. 15: ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್‌ನ ಐದು ಮಂದಿಯನ್ನು ಅಪಹರಿಸಿ ನಕಲಿ ಎನ್‌ಕೌಂಟರ್ ಮಾಡಿದ್ದಕ್ಕಾಗಿ ಸೇನೆಯ ಕೋರ್ಟ್‌ಮಾರ್ಷಲ್ ಏಳು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ ತೀರ್ಪು, ಸಂತ್ರಸ್ತರ ಕುಟುಂಬಕ್ಕೆ ಒಂದಷ್ಟು ನೆಮ್ಮದಿ ತಂದಿದೆ. ಆದರೆ ಆ ಆಘಾತದಿಂದ ಕುಟುಂಬ ಇನ್ನೂ ಹೊರಬಂದಿಲ್ಲ.

ಆ ಭಯಾನಕ ನೆನಪು ಇನ್ನೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. "1994ರ ಫೆಬ್ರವರಿ 17ರಂದು ಬೆಳಗ್ಗೆ 10.30ರ ಸಮಯ. ನಾಲ್ಕು ಮಂದಿ ಶಸ್ತ್ರಸಜ್ಜಿತ ಸೈನಿಕರು ಮತ್ತು ಒಬ್ಬ ನಾಗರಿಕ ನಮ್ಮ ಮನೆಗೆ ಬಂದರು. ನನ್ನ ಪತಿಯನ್ನು ಕರೆದೊಯ್ದರು. ಅವರನ್ನು ಮತ್ತೆಂದೂ ನಾನು ನೋಡಲೇ ಇಲ್ಲ" ಎಂದು ಲೀಲೇಶ್ವರಿ ಮೋರನ್ ನೆನಪಿನ ನೋವು ಬಿಚ್ಚಿಟ್ಟರು. ಸೇನೆ ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ ಐದು ಮಂದಿಯ ಪೈಕಿ ಇವರ ಪತಿ ಭಾಬೆನ್ ಮೋರನ್ ಕೂಡಾ ಸೇರಿದ್ದರು. ಆಗ ಲೀಲೇಶ್ವರಿಗೆ 28 ವರ್ಷ.

ದ್ಹೋಲಾದಲ್ಲಿದ್ದ 18ನೇ ಪಂಜಾಬ್ ರೆಜಿಮೆಂಟ್‌ನ ಸೈನಿಕರು, ತೀನ್‌ಸುಕಿಯಾ ಜಿಲ್ಲೆ ದೂಮ್‌ದೂಮಾ ತಾಲೂಕಿನ ದಾಂಗರಿ ಪ್ರದೇಶದ ಭಾಬೆನ್, ಪ್ರವೀಣ್ ಸೋನೊವಾಲ್, ಪ್ರದೀಪ್ ದತ್ತಾ, ದೇವಜಿತ್ ವಿಶ್ವಾಸ್ ಹಾಗೂ ಅಖಿಲ ಸೋನೊವಾಲ್ ಅವರನ್ನು ಕರೆದೊಯ್ದು ದಿಬ್ರೂ- ಸೈಖೋವಾಲಾ ರಾಷ್ಟ್ರೀಯ ಉದ್ಯಾನವನದಲ್ಲಿ ಹತ್ಯೆ ಮಾಡಿದ್ದರು.

ಲೀಲೇಶ್ವರಿ ಅವರಿಗೆ ಈ ತೀರ್ಪು ಸ್ವಲ್ಪಮಟ್ಟಿನ ಸಮಾಧಾನವನ್ನೇನೋ ತಂದಿದೆ. ಆದರೆ ತಪ್ಪಿತಸ್ಥರನ್ನು ಗಲ್ಲಿಗೇರಿಸಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. "ಅವರು ಗಲ್ಲುಶಿಕ್ಷೆಗೆ ಅರ್ಹರು. ಏಕೆಂದರೆ ಅವರು ಹತ್ಯೆ ಮಾಡಿರುವುದು ಅಮಾಯಕರನ್ನು. ನನ್ನ ಪತಿ ಅಮಾಯಕ. ಇಂದಿಗೂ ಜೀವನ ಸಾಗಿಸಲು ಕಷ್ಟಪಡುತ್ತಿದ್ದೇವೆ. ಸೇನಾ ಸಿಬ್ಬಂದಿ ಅವರನ್ನು ಕರೆದೊಯ್ದು ಉಲ್ಘಾ ಉಗ್ರ ಎಂಬ ಹಣೆಪಟ್ಟಿ ಕಟ್ಟಿ ಹತ್ಯೆ ಮಾಡಿದರು" ಎಂದು ವೇದನೆ ತೋಡಿಕೊಂಡರು.

ವಿದ್ಯಾರ್ಥಿ ಸಂಘಟನೆ ನಡೆಸಿದ ಸುಧೀರ್ಘ ಹೋರಾಟಕ್ಕೆ ಸಂದ ಜಯ ಈ ತೀರ್ಪು. ಸಂಘಟನಾ ಕಾರ್ಯದರ್ಶಿ ದೀಪಾಂಕರ್ ಸೋನೊವಾಲ್ ಹಾಗೂ ಕುಟುಂಬ ಸದಸ್ಯರು ಐವರು ಮುಖಂಡರಿಗೆ ಶ್ರದ್ಧಾಂಜಲಿ ಸಮರ್ಪಿಸುವ ಸಮಾರಂಭವನ್ನು ತೀರ್ಪು ಹೊರಬಿದ್ದ ಬಳಿಕ ಹಮ್ಮಿಕೊಂಡಿದ್ದರು. ಹತ್ಯೆಗೀಡಾದ ಐವರ ಸ್ಮಾರಕವನ್ನೂ ಆಸು ನಿರ್ಮಿಸಿ, ಇವರನ್ನು ಹುತಾತ್ಮರು ಎಂದು ಘೋಷಿಸಿದೆ. "ನನ್ನ ಸುಧೀರ್ಘ ಹೋರಾಟಕ್ಕೆ ಕೊನೆಗೂ ಜಯ ಸಂದಿದೆ. ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆಯಾಗಿದೆ" ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

"ಪತಿಯ ಹತ್ಯೆ ನಡೆದ ಬಳಿಕ ಕಷ್ಟದ ದಿನಗಳನ್ನು ಎದುರಿಸಿದೆವು. ಮಕ್ಕಳು ಚಿಕ್ಕವರು. ನನಗೂ ಯಾವ ಉದ್ಯೋಗವೂ ಇರಲಿಲ್ಲ. ಆಗ ಎಜಿಪಿ ಮುಖಂಡ ಜಗದೀಶ್ ಭೂಯಾನ್ ನಮ್ಮ ನೆರವಿಗೆ ಬಂದರು. ಈ ಹತ್ಯೆ ಬಗ್ಗೆ ಸಿಬಿಐ ತನಿಖೆಗೆ ಹಾಗೂ ಕೋರ್ಟ್ ಮಾರ್ಷಲ್‌ಗೆ ಆಗ್ರಹಿಸಿದರು. ಬಿಡಿಒ ಕಚೇರಿಯಲ್ಲಿ ಗುಮಾಸ್ತೆ ಕೆಲಸಕ್ಕೆ ನಿಯೋಜಿಸಿದರು. ಆಗ 900 ರೂಪಾಯಿ ವೇತನ ಇತ್ತು. ಈಗ 5500 ರೂಪಾಯಿಗೆ ಹೆಚ್ಚಿಸಿದ್ದಾರೆ" ಎಂದು ಲೀಲೇಶ್ವರಿ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News