ಆಲಿಘರ್ ಮುಸ್ಲಿಂ ವಿವಿ ತೊರೆಯುವುದಾಗಿ 1200ಕ್ಕೂ ಹೆಚ್ಚು ಕಾಶ್ಮೀರಿ ವಿದ್ಯಾರ್ಥಿಗಳ ಎಚ್ಚರಿಕೆ

Update: 2018-10-15 07:57 GMT

ಆಲಿಘರ್, ಅ. 15: ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿರುವ ತಮ್ಮ ರಾಜ್ಯದ ಮೂವರು ವಿದ್ಯಾರ್ಥಿಗಳ ಮೇಲಿನ ದೇಶದ್ರೋಹ ಪ್ರಕರಣಗಳನ್ನು ಕೈಬಿಡದೇ ಇದ್ದಲ್ಲಿ  ಅಲ್ಲಿ ಕಲಿಯುತ್ತಿರುವ ಎಲ್ಲಾ ಕಾಶ್ಮೀರಿ ವಿದ್ಯಾರ್ಥಿಗಳು ಅ. 17ರಂದು  ಮನೆಗೆ ತೆರಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವಿಶ್ವವಿದ್ಯಾಲಯದಲ್ಲಿರುವ 1,200ಕ್ಕೂ ಅಧಿಕ ಕಾಶ್ಮೀರಿ ವಿದ್ಯಾರ್ಥಿಗಳು ಬೇರೆ ಉಪಾಯವಿಲ್ಲದೆ ತಮ್ಮ ಮನೆಗಳಿಗೆ ಮರಳಲಿದ್ದಾರೆ ಎಂದು ವಿವಿ ಉಪಕುಲಪತಿಗಳಿಗೆ ಬರೆದ ಪತ್ರದಲ್ಲಿ  ವಿವಿ ವಿದ್ಯಾರ್ಥಿ ಯೂನಿಯನ್ ಮಾಜಿ ಉಪಾಧ್ಯಕ್ಷ ಸಜ್ಜದ್ ರಾಥರ್ ಹೇಳಿದ್ದಾರೆ.

ದೇಶದ್ರೋಹದ ಪ್ರಕರಣವನ್ನು ದ್ವೇಷ ಸಾಧನೆಗಾಗಿ  ದಾಖಲಿಸಲಾಗಿದೆ ಎಂದು ಆರೋಪಿಸಿದ ಅವರು  ವಿವಿ ಅಧಿಕಾರಿಗಳು ಅನುಮತಿ ನೀಡದೇ ಇದ್ದ ನಂತರ ನಮಾಝ್-ಇ-ಜನಾಝ ನಡೆಸುವ ನಿರ್ಧಾರವನ್ನು ಕೈಬಿಡಲಾಗಿತ್ತು ಎಂದು ಹೇಳಿದರು. ಈ ಪ್ರಾರ್ಥನಾ ಸಭೆಯೇ ನಡೆಯದಿರುವಾಗ ಈ ದೇಶದ್ರೋಹ ಪ್ರಕರಣ ದಾಖಲಿಸಿದ್ದಾದರೂ ಏಕೆ ಎಂದು ಅವರು ಪ್ರಶ್ನಿಸಿದ್ದಾರೆ. ಆಲಿಘರ್ ಮುಸ್ಲಿಂ ವಿವಿಯ ಮಾಜಿ ವಿದ್ಯಾರ್ಥಿಯಾಗಿದ್ದ ಹಾಗೂ ನಂತರ ಉಗ್ರವಾದಿ ಸಂಘಟನೆ ಸೇರಿ ಇತ್ತೀಚೆಗೆ ಎನ್‍ಕೌಂಟರ್‍ನಲ್ಲಿ ಸಾಯಿಸಲ್ಪಟ್ಟ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಮನನ್ ಬಾಶಿರ್ ವಾನಿ ಸ್ಮರಣಾರ್ಥ  ಪ್ರಾರ್ಥನಾ ಸಭೆಯನ್ನು ಅ. 12ರಂದು ನಡೆಸಲು  ಪ್ರಯತ್ನಿಸಿದ್ದಕ್ಕೆ ಹಾಗೂ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು.

ಇದನ್ನು ವಿರೋಧಿಸಿ ಬರೆದ ಪತ್ರವನ್ನು ವಿವಿಯ ಪ್ರೊಕ್ಟೊರ್ ಮೊಹ್ಸಿನ್ ಖಾನ್ ಅವರಿಗೆ  ಅವರ ಕಚೇರಿಯಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳು ಹಸ್ತಾಂತರಿಸಿದರು. ಯಾವುದೇ ನಿರಪರಾಧಿ ವಿದ್ಯಾರ್ಥಿಯ ಮೇಲೆ ಪ್ರಕರಣ ದಾಖಲಿಸಲಾಗುವುದಿಲ್ಲ ಎಂದು ವಿವಿ ವಕ್ತಾರ ಶಫಯ್ ಕಿದ್ವಾಯಿ ಹೇಳಿದ್ದಾರೆ. ಅದೇ ಸಮಯ ಯಾವುದೇ ದೇಶವಿರೋಧಿ ಚಟುವಟಿಕೆಯನ್ನು ಸಂಸ್ಥೆಯಲ್ಲಿ ಸಹಿಸಲಾಗುವುದಿಲ್ಲ ಎಂದೂ ಅವರು ಹೇಳಿದ್ದಾರೆ.

ದೇಶ ವಿರೋಧಿ ಘೋಷಣೆ ಕೂಗಿದ್ದಾರೆನ್ನಲಾದ ಮೂವರು ವಿದ್ಯಾರ್ಥಿಗಳನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News