ಮಾಜಿ ಮೇಯರ್ ರವಿಕುಮಾರ್ ಹತ್ಯೆ ಪ್ರಕರಣದ 9 ಆರೋಪಿಗಳ ಬಂಧನ: ತುಮಕೂರು ಎಸ್‍ಪಿ ದಿವ್ಯಾಗೋಪಿನಾಥ್

Update: 2018-10-15 11:45 GMT

ತುಮಕೂರು,ಅ.15: ಮಾಜಿ ಮೇಯರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಕೊಲೆ ಪ್ರಕರಣದಲ್ಲಿ ಇದುವರಗೆ ಪ್ರಮುಖ ಆರೋಪಿ ಸುಜಯ್ ಭಾರ್ಗವ್ ಸೇರಿದಂತೆ ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ. ಕೆಲವರು ನ್ಯಾಯಾಲಯದ ಬಂಧನದಲ್ಲಿದ್ದರೆ, ಕೆಲವರು ಪೊಲೀಸ್ ವಶದಲ್ಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹಿಂದೆ 2013ರಿಂದ ಜೊತೆಗಿದ್ದ ರವಿಕುಮಾರ್ ಹಾಗೂ ಸುಜಯ್ ನಡುವೆ ಇತ್ತೀಚಿನ ವರ್ಷಗಳಲ್ಲಿ ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ವೈಷಮ್ಯ ಬೆಳೆದಿದ್ದು, ಅ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎನ್ನುವುದು ಸದ್ಯ ತನಿಖೆಯಲ್ಲಿ ತಿಳಿದು ಬಂದಿದೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಸುಜಯ್ ವ್ಯವಹಾರದಲ್ಲಿ ರವಿಕುಮಾರ್ ಎಂಟ್ರಿ ಆಗುತ್ತಿದ್ದರು ಎನ್ನುವ ಉದ್ದೇಶದಿಂದ ಪೂರ್ವನಿಯೋಜಿತವಾಗಿ ಪ್ಲಾನ್ ಮಾಡಿ ಕೊಲೆ ಮಾಡಲಾಗಿದೆ ಎಂದರು.

ಸುಜಯ್ ಜೊತೆಗಿದ್ದ ರಾಜೇಶ್ ಅಲಿಯಾಸ್ ರಾಜಿ ಮೂಲಕ ಬೆಂಗಳೂರು ಹಾಗೂ ಮಂಡ್ಯ ಮೂಲಕ ರೌಡಿಶೀಟರ್ ಗಳನ್ನು ಕರೆಸಿಕೊಂಡು ಹತ್ಯೆ ಮಾಡಲಾಗಿದೆ. ರವಿ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದು ಟೆಂಪೋದಲ್ಲಿ ಬಂದ ಆರೋಪಿಗಳ ಪೈಕಿ ಚಾಲಕ ಟೀ ಅಂಗಡಿಗೆ ಬಂದು ಸಿಗರೇಟ್ ತಗೆದುಕೊಳ್ಳುವ ನೆಪದಲ್ಲಿ ರವಿಕುಮಾರ್ ಗೆ ಕಾರದ ಪುಡಿ ಎರಚ್ಚಿದ್ದಾನೆ. ನಂತರ ಟೆಂಪೋದಲ್ಲಿದ್ದ 7 ಆರೋಪಿಗಳು ಬಂದು ಹತ್ಯೆ ಮಾಡಿದ್ದಾರೆ. ಆದರೆ ಇದುವರೆಗೆ ರವಿ ತಲೆಗೆ ಲಾಂಗ್‍ನಿಂದ ಹೊಡೆದವರು ಯಾರು ಎನ್ನುವುದು ಸ್ಪಷ್ಟವಾಗಿಲ್ಲ, ತನಿಖೆ ಮುಂದುವರೆದಿದೆ. ಅಲ್ಲಿಂದ ಟೆಂಪೋದಲ್ಲಿ ಮುಂದೆ ಹೋಗಿ ಹನುಮಂತಪುರ ಕ್ರಾಸ್ ಬಳಿ ಟೆಂಪೋ ಬಿಟ್ಟು ಇಂಡಿಕಾ ಈಡಿಗೋ ವಾಹನದಲ್ಲಿ ಪರಾರಿಯಾಗಿದ್ದರು ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಕೃತ್ಯ ನಡೆದ ನಂತರ ಪರಾರಿಯಾಗಲು ಕಾರ್ ನೀಡಿದವರನ್ನು ಮುಂದಿನ ದಿನಗಳಲ್ಲಿ ವಿಚಾರಣೆಗೆ ಒಳಪಡಿಸಲಾಗುವುದು ಎಂದರು.

ಪ್ರಮುಖ ಆರೋಪಿ ಸುಜಯ್ ಭಾರ್ಗವ್ ಮೇಲೆ 2004ರಲ್ಲಿ ನಡೆದ ಜೈಪುರ ಕೃಷ್ಣ ಹತ್ಯೆ ಹಾಗೂ 1 ಅಟ್ರಾಸಿಟಿ ಪ್ರಕರಣ ಸೇರಿದಂತೆ ಒಟ್ಟು 9 ಪ್ರಕರಣಗಳು ದಾಖಲಾಗಿತ್ತು. ಅಟ್ರಾಸಿಟಿ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ರವಿ ಹತ್ಯೆ ಪ್ರಕರಣದಲ್ಲಿ ರವಿ ಚಲನವಲದ ಬಗ್ಗೆ ಸುಜಯ್‍ಗೆ ಮಾಹಿತಿ ನೀಡುತ್ತಿದ್ದ ಇಬ್ಬರು ಪರಾರಿಯಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು. ಜೊತೆಗೆ ಈ ಕೃತ್ಯಕ್ಕೆ ಬಳಸಿದ ಲಾಂಗ್, ಡ್ರ್ಯಾಗರ್ ನೀಡಿದವರನ್ನು ತನಿಖೆಗೆ ಒಳಪಡಿಸಲಾಗುವುದು ಎಂದರು. 

ರವಿಕುಮಾರ್ ಹತ್ಯೆ ಪ್ರಕರಣದಲ್ಲಿ ತುಮಕೂರಿನ ಹನುಮಂತಪುರ ನಿವಾಸಿ ಸುಜಯ್‍ ಭಾರ್ಗವ್ ಅಲಿಯಾಸ್ ಸುಜಿ, ತುಮಕೂರಿನ ಬಿದಿರುಮಳೆ ತೋಟದ ವಾಸಿ ರಘು ಅಲಿಯಾಸ್ ಚಡ್ಡಿ, ಕುಂದೂರು ವಾಸಿ ರಾಜೇಶ್ ಅಲಿಯಾಸ್ ರಾಜಿ, ದೇವರಾಯಪಟ್ಟಣ ವಾಸಿ ನವೀನ್, ಕೋಳಾಲ ಹರಿಜನ ಕಾಲೋನಿ ವಾಸಿ ಕೆ.ಎಲ್.ದೇವರಾಜ ಅಲಿಯಾಸ್ ದೇವು, ಬೆಂಗಳೂರಿನ ಬಸವರೇಶ್ವರ ನಗರ ನಿವಾಸಿ ರಘು ಅಲಿಯಾಸ್ ಚಿಯಾ, ಬೆಂಗಳೂರಿನ ಪಾರ್ವತಿನಗರ ಲಗ್ಗೆರೆ ನಿವಾಸಿ ಜೋಮನ್.ವಿ.ಜಾರ್ಜ್ ಅಲಿಯಾಸ್ ಜಾರ್ಜ್, ಮಂಡ್ಯ ಜಿಲ್ಲೆಯ ಬೆಸಗರಹಳ್ಳಿ ವಾಸಿ ಜಗದೀಶ್.ಬಿ.ಎಂ ಅಲಿಯಾಸ್ ಜಗ್ಗು, ಮಂಡ್ಯ ಜಿಲ್ಲೆ ವಳಗೇರಹಳ್ಳಿ ವಾಸಿ ವಿ.ಎನ್.ಮಹೇಶ್ ಅಲಿಯಾಸ್ ಅಮಾಸೆ ಅವರುಗಳನ್ನು ವಶಕ್ಕೆಪಡೆಯಲಾಗಿದೆ ಎಂದರು.

ಆರೋಪಿಗಳ ಬಂಧನಕ್ಕೆ ತುಮಕೂರು ಡಿವೈಎಸ್‍ಪಿ ಕೆ.ಎಸ್.ನಾಗರಾಜು ನೇತೃತ್ವದಲ್ಲಿ ಪಿಎಸ್‍ಐಗಳಾದ ರಾಘವೇಂದ್ರ, ಚಂದ್ರಶೇಖರ್, ರಾಧಾಕೃಷ್ಣ, ರಾಮಕೃಷ್ಣಯ್ಯ, ಅಂಬರೀಶ್, ಮಧುಸೂಧನ್ ಹಾಗೂ ಪಾರ್ವತಮ್ಮ ಒಳಗೊಂಡ 5 ವಿಶೇಷ ತಂಡಗಳನ್ನು ರಚಿಸಲಾಗಿತ್ತು, ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ತನಿಖಾ ತಂಡಕ್ಕೆ ಎಸ್‍ಪಿ ಹಾಗೂ ಎಎಸ್‍ಪಿ ಅಭಿನಂದನೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News