ಕೊಡಗಿನ ಪಟ್ಟಣ ಪಂ.ಗಳಿಗೆ ಅ.28 ರಂದು ಚುನಾವಣೆ: ನಾಮಪತ್ರ ಸಲ್ಲಿಕೆಗೆ ಅ.16 ಕೊನೆ ದಿನ

Update: 2018-10-15 18:34 GMT

ಮಡಿಕೇರಿ, ಅ.15 : ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಮಧ್ಯಂತರದಲ್ಲಿ ಸ್ಥಗಿತಗೊಳಿಸಲಾಗಿದ್ದ, ಜಿಲ್ಲೆಯ ವೀರಾಜಪೇಟೆ, ಕುಶಾಲನಗರ ಮತ್ತು ಸೋಮವಾರಪೇಟೆ ಪಟ್ಟಣ ಪಂ.ಗಳಿಗೆ ಅ.28ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಅ.16 ಕೊನೆಯ ದಿನವಾಗಿದೆ ಮತ್ತು ಈಗಾಗಲೇ ಅ.10ರಿಂದ ನಾಮಪತ್ರ ಸಲ್ಲಿಸಿರುವವರು ಮತ್ತೆ ನಾಮಪತ್ರ ಸಲ್ಲಿಸುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಐ.ಶ್ರೀವಿದ್ಯಾ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಮೂರು ಪಟ್ಟಣ ಪಂ.ಗಳಿಗೆ ಚುನಾವಣೆ ಮುಂದುವರೆಸಲು ರಾಜ್ಯ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಅದರಂತೆ ಮಂಗಳವಾರ ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ ಮತ್ತು ನಾಮಪತ್ರ ಸಲ್ಲಿಸಲು ಅಂದೇ ಕೊನೆಯ ದಿನವಾಗಿದೆ ಎಂದು ಹೇಳಿದರು.

ನಾಮಪತ್ರಗಳ ಪರಿಶೀಲನೆ ಅ.17ರಂದು ನಡೆಯಲಿದ್ದು, ಅ.20ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಮತದಾನ ಅವಶ್ಯವಿದ್ದಲ್ಲಿ ಅ.28ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಹಾಗೂ ಮರು ಮತದಾನ ಅಗತ್ಯವಿದ್ದರೆ ಅ.30ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ನಡೆಯಲಿದ್ದು, ಮಸ್ಟರಿಂಗ್, ಡಿಮಸ್ಟರಿಂಗ್ ಮತ ಎಣಿಕೆ ಸೋಮವಾರಪೇಟೆ ಹಾಗೂ ವೀರಾಜಪೇಟೆ ತಾಲೂಕು ಕೇಂದ್ರಗಳ ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ನಡೆಯಲಿದೆ ಎಂದು ವಿವರಿಸಿದರು.

ಸೋಮವಾರಪೇಟೆ ಪಟ್ಟಣ ಪಂಚಾಯತ್ ನ 11 ಕುಶಾಲನಗರ ಪಟ್ಟಣ ಪಂ.ನ 16 ಹಾಗೂ ವೀರಾಜಪೇಟೆ ಪಟ್ಟಣ ಪಂಚಾಯತ್ ನ 18 ವಾರ್ಡ್‍ಗಳಿಗೆ ಚುನಾವಣೆ ನಡೆಯಲಿದ್ದು, ಪ್ರತೀ ವಾರ್ಡ್‍ಗೆ ಒಂದರಂತೆ ಅಂದರೆ ಒಟ್ಟು 45 ಮತಗಟ್ಟೆಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು. 

ಕಳೆದ ಜೂ.27ರ ಅಂತಿಮ ಮತದಾರರ ಪಟ್ಟಿಯಂತೆ ಮೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ 30,786 ಮಂದಿ ಮತದಾರರು ಮತ ಚಲಾಯಿಸುವ ಅರ್ಹತೆ ಹೊಂದಿದ್ದಾರೆ. ಅದರಂತೆ ಸೋಮವಾರಪೇಟೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 2562 ಮಂದಿ ಪುರುಷ ಹಾಗೂ 2699 ಮಂದಿ ಮಹಿಳಾ ಮತದಾರರು ಸೇರಿದಂತೆ ಒಟ್ಟು 5,261 ಮಂದಿ ಮತದಾರರಿದ್ದು, ಕುಶಾಲನಗರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 5899 ಪುರುಷ ಹಾಗೂ 5700 ಮಹಿಳಾ ಮತದಾರರು ಸೇರಿದಂತೆ 11,599 ಮಂದಿ ಹಾಗೂ ವೀರಾಜಪೇಟೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 6998 ಪುರುಷ ಹಾಗೂ 6925ಮಹಿಳಾ ಮತದಾರರು ಸೇರಿದಂತೆ 13926 ಮಂದಿ ಮತದಾರರಿದ್ದಾರೆ ಎಂದು ನುಡಿದರು.

ಈಗಾಗಲೇ ಮೂರು ಪಟ್ಟಣ ಪಂಚಾಯತ್ ಗಳಿಗೆ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಇದರೊಂದಿಗೆ ಪ್ರತಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಚುನಾವಣಾ ಕಾರ್ಯದ ಮೇಲುಸ್ತುವಾರಿ ನಡೆಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅದರಂತೆ ಕುಶಾಲನಗರ ಪಟ್ಟಣ ಪಂಚಾಯಿತಿಗೆ ಮಡಿಕೇರಿ ಉಪ ವಿಭಾಗಾಧಿಕಾರಿ ಟಿ. ಜವರೇಗೌಡ, ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಶಿವಕುಮಾರ್ ಹಾಗೂ ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಕೃಷಿ ಇಲಾಖೆ ಉಪ ನಿರ್ದೇಶಕ ಕೆ. ರಾಜು ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಹೇಳಿದರು.

ಅ.31ರವರೆಗೆ ನೀತಿ ಸಂಹಿತೆ ಜಾರಿ: ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆಯು ಅ.31ರವರೆಗೂ ಜಾರಿಯಲ್ಲಿರುತ್ತದೆ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಮೇಲ್ವಿಚಾರಣೆ ಮಾಡಲು ನೋಡಲ್ ಅದಿsಕಾರಿಯನ್ನು ಹಾಗೂ ಸೆಕ್ಟರ್ ಆಫೀಸರ್‍ಗಳನ್ನೂ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಅದರಂತೆ ಸೋಮವಾರಪೇಟೆ ಪಟ್ಟಣ ಪಂ.ಗೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ ಹಾಗೂ ತಾ.ಪಂ. ದ್ವಿತೀಯ ದರ್ಜೆ ಗುಮಾಸ್ತ ಮೇಘನಾಥ್ ಅವರನ್ನು ನೇಮಿಸಲಾಗಿದ್ದು, ಕುಶಾಲನಗರ ಪಟ್ಟಣ ಪಂಚಾಯಿತಿಯ 1ರಿಂದ 8ನೇ ವಾರ್ಡ್‍ಗಳಿಗೆ ತಾ.ಪಂ. ಸಹಾಯಕ ನಿರ್ದೇಶಕ ಬಿ.ಡಿ.ಸುನಿಲ್ ಕುಮಾರ್ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಲೆಕ್ಕಾಧಿಕಾರಿ ಕೆ.ಆರ್. ರವಿಕುಮಾರ್, 9ರಿಂದ 16ನೇ ವಾರ್ಡ್‍ವರೆಗೆ ಹಾರಂಗಿ ಅಣೆಕಟ್ಟೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್  ಧರ್ಮರಾಜು ಹಾಗೂ ಹಾರಂಗಿ ಪುನರ್ವಸತಿ ಉಪ ವಿಭಾಗದ ಕಿರಿಯ ಇಂಜಿನಿಯರ್ ಟಿ.ಪಿ ಸತ್ಯ, ವೀರಾಜಪೇಟೆ ಪಟ್ಟಣ ಪಂ. ನ 1ರಿಂದ 9ನೇ ವಾರ್ಡ್‍ವರೆಗೆ ಪಿಡಬ್ಲ್ಯುಡಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಂ.ಇ.ಸುರೇಶ್ ಹಾಗೂ ಹಾತೂರು ಗ್ರಾ.ಪಂ. ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಅರುಣ್ ಭಾಸ್ಕರ್, 10ರಿಂದ 18ನೇ ವಾರ್ಡ್‍ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎ.ಲೋಕೇಶ್ ಮತ್ತು ದ್ವಿತೀಯ ದರ್ಜೆ ಸಹಾಯಕ ಜಲೇಂದ್ರ ಅವರನ್ನು ನೇಮಿಸಲಾಗಿದೆ ಎಂದು ವಿವರಿಸಿದರು. 

ಸೂಕ್ಷ್ಮ ಅತಿ ಸೂಕ್ಷ್ಮ ಮತಗಟ್ಟೆಗಳು: ಸೋಮವಾರಪೇಟೆ ಪಟ್ಟಣ ಪಂಚಾಯತ್ ವ್ಯಾಪ್ತಿಯ 11 ಮತಗಟ್ಟೆಗಳ ಪೈಕಿ 3 ಸೂಕ್ಷ್ಮ 2 ಅತಿಸೂಕ್ಷ್ಮ, ಕುಶಾಲನಗರ ಪಟ್ಟಣ ಪಂಚಾಯತ್ ವ್ಯಾಪ್ತಿಯ 16 ಮತಗಟ್ಟೆಗಳ ಪೈಕಿ 4ಸೂಕ್ಷ್ಮ ಹಾಗೂ 3 ಅತಿ ಸೂಕ್ಷ್ಮ ವೀರಾಜಪ್ಭೆಟೆ ಪಟ್ಟಣ ಪಂಚಾಯತ್ ವ್ಯಾಪ್ತಿಯ 18 ಮತಗಟ್ಟೆಗಳ ಪೈಕಿ ಮೂರು ಸೂಕ್ಷ್ಮ ಮತ್ತು 2 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ಶ್ರೀವಿದ್ಯಾ ತಿಳಿಸಿದರು. 

ರಾಜ್ಯ ಚುನಾವಣಾ ಆಯೋಗವು ವಿಶೇಷ ವೀಕ್ಷಕರನ್ನಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯಕ್ತೆ  ಅರುಂಧತಿ ಚಂದ್ರಶೇಖರ್, ಸಾಮಾನ್ಯ ವೀಕ್ಷಕರಾಗಿ ಮೈಸೂರಿನ ಅಪರ ಪ್ರಾದೇಶಿಕ ಆಯಕ್ತೆ ರೂಪ.ಎಂ.ಜೆ., ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯ ಮುಖ್ಯ ಲೆಕ್ಕಾಧಿಕಾರಿ ಎನ್. ಸುಶೀಲಮ್ಮ ಅವರನ್ನು ವೆಚ್ಚ ವೀಕ್ಷಕರನ್ನಾಗಿ ನೇಮಕ ಮಾಡಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News