ಕೊಹಿನೂರ್ ವಜ್ರ ಬ್ರಿಟಿಷರ ಪಾಲು: ವಾಸ್ತವವೇನು ಗೊತ್ತೇ?

Update: 2018-10-16 04:20 GMT

ಲೂಧಿಯಾನಾ, ಅ.16: ಕೊಹಿನೂರ್ ವಜ್ರ ಬ್ರಿಟಿಷರ ಪಾಲಾದ ಬಗೆಗೆ ಕೇಂದ್ರ ಸರ್ಕಾರ ಹಾಗೂ ಭಾರತದ ಪ್ರಾಚ್ಯವಸ್ತು ಸರ್ವೇಕ್ಷಣಾಲಯ ಪರಸ್ಪರ ವಿರುದ್ಧ ನಿಲುವು ಹೊಂದಿರುವುದು, ಈ ಅಮೂಲ್ಯ ವಜ್ರದ ಬಗೆಗಿನ ಹೊಸ ವಿವಾದಕ್ಕೆ ಕಾರಣವಾಗಿದೆ.

ಕೇಂದ್ರ ಸರ್ಕಾರ 2016ರಲ್ಲಿ ಸುಪ್ರೀಂಕೋರ್ಟ್‌ಗೆ ನೀಡಿದ ಅಫಿಡವಿಟ್‌ನಲ್ಲಿ, "ಕೊಹಿನೂರ್ ವಜ್ರವನ್ನು ಬ್ರಿಟಿಷರು ಬಲಾತ್ಕಾರದಿಂದ ತೆಗೆದುಕೊಳ್ಳಲೂ ಇಲ್ಲ ಅಥವಾ ಕದಿಯಲೂ ಇಲ್ಲ. ಬದಲಾಗಿ ಅದನ್ನು ಪಂಜಾಬ್‌ನ ಮಹಾರಾಜ ರಂಜೀತ್ ಸಿಂಗ್ ಅವರ ಉತ್ತರಾಧಿಕಾರಿ ಈಸ್ಟ್‌ ಇಂಡಿಯಾ ಕಂಪನಿಗೆ ಉಡುಗೊರೆಯಾಗಿ ನೀಡಿದ್ದರು" ಎಂದು ಹೇಳಿತ್ತು. ಆದರೆ ಭಾರತದ ಪ್ರಾಚ್ಯವಸ್ತುಗಳ ಸರ್ವೇಕ್ಷಣಾಲಯ (ಎಎಸ್‌ಐ), ಮಾಹಿತಿಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.

ವಾಸ್ತವವಾಗಿ ಈ ಅಮೂಲ್ಯ ವಜ್ರವನ್ನು ಲಾಹೋರ್‌ನ ಮಹಾರಾಜ ಇಂಗ್ಲೆಂಡಿನ ರಾಣಿ ವಿಕ್ಟೋರಿಯಾಗೆ ಒಪ್ಪಿಸಿದ್ದು ಎಂದು ಎಎಸ್‌ಐ ಹೇಳಿದೆ. ಆಂಗ್ಲೊ-ಸಿಕ್ಖ್ ಯುದ್ಧಕ್ಕೆ ಸ್ವಯಂಪ್ರೇರಿತ ಪರಿಹಾರವಾಗಿ ಮಹಾರಾಜ ರಂಜೀತ್ ಸಿಂಗ್‌ನ ಪುತ್ರ ಇದನ್ನು ನೀಡಿದ್ದಾಗಿ ಉತ್ತರಿಸಲಾಗಿದೆ. ಬ್ರಿಟನ್‌ಗೆ ಹೇಗೆ ಕೊಹಿನೂರ್ ವಜ್ರ ವರ್ಗಾಯಿಸಲಾಗಿದೆ ಎಂಬ ಬಗ್ಗೆ ಆರ್‌ಟಿಐ ಹೋರಾಟಗಾರ ರೋಹಿತ್ ಸಭರ್‌ವಾಲ್ ಸ್ಪಷ್ಟನೆ ಕೋರಿದ್ದರು. ಪ್ರಧಾನಿ ಕಚೇರಿಗೆ ಸಲ್ಲಿಸಿದ ಆರ್‌ಟಿಐ ಪ್ರಶ್ನೆಯನ್ನು ಎಎಸ್‌ಐಗೆ ವರ್ಗಾಯಿಸಲಾಗಿದ್ದು, ಎಎಸ್‌ಐನಿಂದ ಈ ಬಗ್ಗೆ ಉತ್ತರ ಬಂದಿದೆ ಎಂದು ಅವರು ಹೇಳಿದ್ದಾರೆ.

"ದಾಖಲೆಗಳ ಪ್ರಕಾರ, ಲಾರ್ಡ್ ಡಾಲ್‌ಹೌಸಿ ಮತ್ತು ಮಹಾರಾಜ ದುಲೀಪ್ ಸಿಂಗ್ ನಡುವೆ 1849ರಲ್ಲಿ ಲಾಹೋರ್ ಒಪ್ಪಂದ ನಡೆದಿತ್ತು. ಈ ಅವಧಿಯಲ್ಲಿ ಲಾಹೋರ್ನ ಮಹಾರಾಜ, ಇಂಗ್ಲೆಂಡಿನ ರಾಣಿಗೆ ಇದನ್ನು ಒಪ್ಪಿಸಿದ" ಎಂದು ಉತ್ತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News