ಪರಿಸರ ಸ್ನೇಹಿ ಆರೋಗ್ಯ ರಕ್ಷಾ ವಿಧಾನಕ್ಕೆ ಆದ್ಯತೆ ಅಗತ್ಯ : ಡಾ.ಜಯಲಕ್ಷ್ಮಿ ಪಾಟ್ಕರ್

Update: 2018-10-16 11:31 GMT

ಮಡಿಕೇರಿ, ಅ.16 : ಹೆಣ್ಣು ಮಕ್ಕಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದರೊಂದಿಗೆ ಪರಿಸರ ಸ್ನೇಹಿ ಆರೋಗ್ಯ ರಕ್ಷಾ ವಿಧಾನಕ್ಕೆ ಆದ್ಯತೆ ನೀಡಬೇಕೆಂದು ಹಿರಿಯ ವೈದ್ಯೆ ಡಾ.ಜಯಲಕ್ಷ್ಮಿ ಪಾಟ್ಕರ್ ಸಲಹೆ ನೀಡಿದ್ದಾರೆ.

ಬೆಂಗಳೂರು ಹಾಗೂ ಕೊಡಗು ಭಾರತೀಯ ವಿದ್ಯಾಭವನ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಮಹಿಳಾ ವಸತಿ ನಿಲಯಕ್ಕೆ ಸ್ಯಾನಿಟರಿ ನ್ಯಾಪ್‍ಕಿನ್ ಡಿಸ್ವೆನ್ಸರ್ ಮತ್ತು ಡಿಸ್ಟ್ರಾಯರ್‍ಗಳನ್ನು ನೀಡಿದೆ. ಜಿಲ್ಲೆಯಲ್ಲೇ ಪ್ರಥಮ ಎನ್ನಬಹುದಾದ ಈ ವ್ಯವಸ್ಥೆಯನ್ನು ಹಿರಿಯ ವೈದ್ಯೆ ಉದ್ಘಾಟಿಸಿ ಮಾತನಾಡಿದರು. 

ಹೆಣ್ಣುಮಕ್ಕಳು ತಮ್ಮ ದೈನಂದಿನ ಶುಚಿತ್ವದತ್ತ ಹೆಚ್ಚು ಗಮನ ಕೊಡಬೇಕು,   ಅಲ್ಲದೇ ಅದರ ಬಗ್ಗೆ ಇರುವ ಗೊಂದಲಗಳನ್ನು ವೈದ್ಯರಲ್ಲಿ ಕೇಳಿ ತಿಳಿದು ಬಗೆಹರಿಸಿಕೊಳ್ಳಬೇಕು ಎಂದು ಡಾ.ಜಯಲಕ್ಷ್ಮಿ ಪಾಟ್ಕರ್ ಹೇಳಿದರು. 

ಭಾರತೀಯ ವಿದ್ಯಾಭವನದ  ಅಧ್ಯಕ್ಷ  ಕೆ.ಎಸ್.ದೇವಯ್ಯ ಮಾತನಾಡಿ ವಿದ್ಯಾರ್ಥಿಗಳ ಹಿತವನ್ನು ಕಾಯುವ ದೃಷ್ಟಿಯಿಂದ ನೀಡಲಾಗಿರುವ ಸೌಲಭ್ಯ ಸದುಪಯೋಗವಾಗಬೇಕೆಂದರು. 

ಖಜಾಂಚಿ ಡಾ. ಮನೋಹರ್ ಪಾಟ್ಕರ್ ಮಾತನಾಡಿ ಯಾವುದನ್ನು ಒಂದು ಕಾಲದಲ್ಲಿ ಚರ್ಚಿಸಲು ಜನ ಹಿಂಜರಿಯುತ್ತಿದ್ದರೋ ಅದರ ಕುರಿತು ಮುಕ್ತ ವಿಚಾರ ವಿನಿಮಯವಾಗಬೇಕಿದೆ. ಹೆಣ್ಣುಮಕ್ಕಳ ಋತುಚಕ್ರದ ಸಮಯದಲ್ಲಿ ಅವರಿಗೆ ಅಗತ್ಯವಿರುವ ವಿರಾಮ ಈಗಿನ ದಿನಗಳಲ್ಲಿ ಸಿಗದೇ ಇರುವುದು ಮಹಿಳೆಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದ್ದು, ಹೆಣ್ಣುಮಕ್ಕಳು ಈ ಕುರಿತು ಎಚ್ಚರಿಕೆ ವಹಿಸಬೇಕೆಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಅವರು ಮಾತನಾಡಿ ಮಹಿಳಾ ವಸತಿ ನಿಲಯಕ್ಕೆ ಅಗತ್ಯವಾಗಿದ್ದ ಯಂತ್ರಗಳನ್ನು ನೀಡಿದ ಭಾರತೀಯ ವಿದ್ಯಾಭವನಕ್ಕೆ ಧನ್ಯವಾದ ಸಮರ್ಪಿಸಿದರು. 

ಭಾರತೀಯ ವಿದ್ಯಾ ಭವನದ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ಹಾಗೂ ಮನು ದೇವಯ್ಯ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್‍ನ ಮಹಿಳಾ ವಸತಿ ನಿಲಯ ಪಾಲಕಿ ಡಾ. ನಯನ ಕಾಶ್ಯಪ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News