ಕನ್ನಡ ಬಾರದ ಸರಕಾರಿ ನೌಕರರಿಗೆ ಅಂಚೆ ಮೂಲಕ ಕನ್ನಡ ಶಿಕ್ಷಣಕ್ಕೆ ಅರ್ಜಿ ಆಹ್ವಾನ

Update: 2018-10-16 12:37 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.16: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಮತ್ತು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ಜಂಟಿಯಾಗಿ ಕನ್ನಡ ಬಾರದ ಸರಕಾರಿ ನೌಕರರಿಗೆ ಹಾಗೂ ಸಾರ್ವಜನಿಕರಿಂದ ಹನ್ನೆರಡು ತಿಂಗಳುಗಳ ಅಂಚೆ ಮೂಲಕ ಕನ್ನಡ ಶಿಕ್ಷಣಕ್ಕಾಗಿ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ಸರಕಾರಿ ನೌಕರರು ಸಂಪರ್ಕ ಶಿಬಿರ ಹಾಗೂ ಪರೀಕ್ಷೆಗಳಿಗೆ ಹಾಜರಾಗುವ ದಿನಗಳಲ್ಲಿ ಅವರ ಕಚೇರಿ ಗೈರು ಹಾಜರಿಯನ್ನು ಅನ್ಯ ಕಾರ್ಯ ನಿಮಿತ್ತ ಎಂದು ಪರಿಗಣಿಸಲಾಗುವುದು. ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಗೆ ನೋಂದಾಯಿಸಿಕೊಂಡು ಉತ್ತೀರ್ಣರಾದವರಿಗೆ ಕರ್ನಾಟಕ ಲೋಕಸೇವಾ ಆಯೋಗದ ಕನ್ನಡ ಪರೀಕ್ಷೆಯಿಂದ ವಿನಾಯಿತಿಯಿದೆ.

ಈ ಯೋಜನೆಯನ್ನು ಈಗ ಸಾರ್ವಜನಿಕರಿಗೂ ವಿಸ್ತರಿಸಲಾಗಿದೆ. ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ವಯೋಮಿತಿ 18 ರಿಂದ 50 ವಯಸ್ಸಿನ ಒಳಗಿರಬೇಕು. ಆಸಕ್ತರು ಭರ್ತಿಮಾಡಿದ ಅರ್ಜಿಯ ಜತೆಯಲ್ಲಿ 250ರೂ. ಡಿಮ್ಯಾಂಡ್ ಡ್ರಾಫ್ಟ್‌ನ್ನು ಕಳುಹಿಸಿ ಕೊಡಬೇಕು. ನೋಂದಾಯಿತರಿಗೆ ಇಪ್ಪತ್ತು ಪಾಠಾವಳಿಗಳನ್ನು ಕಳುಹಿಸಿಕೊಡಲಾಗುವುದು. ತರಬೇತಿ ಮತ್ತು ಸಂಪರ್ಕ ಶಿಬಿರದ ಅಂತ್ಯದಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು.

33ನೆ ತಂಡದ ತರಬೇತಿಯು ನ.1 ರಿಂದ ಆರಂಭವಾಗುತ್ತದೆ. ಅರ್ಜಿ ನಮೂನೆ ಮತ್ತು ತರಬೇತಿ ವಿವರಗಳನ್ನು ಪ್ರಭಾರಿ ಅಧಿಕಾರಿ, ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ, ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು - 06 ದೂ. 0821-2345128 ಇವರಿಗೆ ಐದು ರೂಪಾಯಿಯ ಅಂಚೆ ಚೀಟಿಯನ್ನು ಹಚ್ಚಿದ ಸ್ವವಿವರದ ಲಕೋಟೆಯನ್ನು ಕಳುಹಿಸಿ ಪಡೆದುಕೊಳ್ಳಬಹುದು. ಭರ್ತಿಮಾಡಿದ ಅರ್ಜಿಗಳು ಪ್ರಭಾರಿ ಅಧಿಕಾರಿಯವರಿಗೆ ಅ.31 ಒಳಗೆ ತಲುಪಬೇಕು ಎಂದು ಪ್ರಕಟಣೆ ತಿಳಿಸಿದೆ.

ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಮತ್ತು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ಜಂಟಿಯಾಗಿ ನ.1, 1985 ರಿಂದ ಕರ್ನಾಟಕದಲ್ಲಿರುವ ಕನ್ನಡ ಬಾರದ ಎಲ್ಲಾ ಸರಕಾರಿ ನೌಕರಿಗಾಗಿ ಹನ್ನೆರಡು ತಿಂಗಳುಗಳ ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಯೊಂದನ್ನು ನಡೆಸುತ್ತಿವೆ.

ಕರ್ನಾಟಕದಲ್ಲಿರುವ ಎಲ್ಲಾ ನಗರಸಭೆ, ಕೆಎಸ್ಸಾರ್ಟಿಸಿ, ವಿಶ್ವವಿದ್ಯಾಲಯಗಳು, ಶಾಲಾ ಕಾಲೇಜುಗಳು ಮತ್ತಿತರ ಸರಕಾರಿ ಅನುದಾನ ಪಡೆಯುವ ಸಂಸ್ಥೆಗಳ ನೌಕರರು ಮತ್ತು ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳ ನೌಕರರು ಸಹ ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News