ಮನೆ ಮನೆಗೆ ಮದ್ಯ: ಸರಕಾರದ ಆತ್ಮವಂಚನೆ

Update: 2018-10-17 04:19 GMT

 ಗಾಂಧೀಜಿಯವರ 150ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರ, ಅವರನ್ನು ವಿಶೇಷ ರೀತಿಯಲ್ಲಿ ನೆನೆಯುವುದಕ್ಕೆ ಹೊರಟಿದೆ. ಮಹಾರಾಷ್ಟ್ರದ ಪ್ರತಿ ಮನೆಗಳಿಗೆ ನೇರವಾಗಿ ಮದ್ಯವನ್ನು ಸರಬರಾಜು ಮಾಡುವ ಯೋಜನೆಯೊಂದನ್ನು ಅದು ರೂಪಿಸಿದೆ. ಈ ಬಗ್ಗೆ ಅಬಕಾರಿ ಸಚಿವರು ಹೇಳಿಕೆಯನ್ನೂ ನೀಡಿದ್ದಾರೆ. ಈ ಮೂಲಕ ಇಂತಹದೊಂದು ವ್ಯವಸ್ಥೆಯನ್ನು ಮಾಡಿದ ಮೊತ್ತ ಮೊದಲ ರಾಜ್ಯ ಎನ್ನುವ ಕುಖ್ಯಾತಿಗೂ ಮಹಾರಾಷ್ಟ್ರ ಪಾತ್ರವಾಗಲಿದೆ. ಇತ್ತೀಚಿನ ದಿನಗಳಲ್ಲಿ ಖ್ಯಾತಿಗೆ ಕಾರಣವಾಗುವ ಯಾವುದೇ ದಾರಿಗಳು ತನ್ನ ಸರಕಾರದ ಬಳಿ ಇಲ್ಲದೇ ಇರುವುದರಿಂದ, ಇಂತಹ ಕುಖ್ಯಾತಿಗಳ ಮೂಲಕವೇ ಸರಕಾರವನ್ನು ಎತ್ತಿ ನಿಲ್ಲಿಸುವ ಪ್ರಯತ್ನವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್ ಮಾಡ ಹೊರಟಿದ್ದಾರೆ. ವಿಪರ್ಯಾಸವೆಂದರೆ, ತನ್ನ ನಿರ್ಧಾರಕ್ಕೆ ‘ಮಾನವೀಯ ಕಾರಣ’ವೊಂದನ್ನೂ ಅವರು ನೀಡಿದ್ದಾರೆ. ‘‘ಇತ್ತೀಚೆಗೆ ಹೆಚ್ಚುತ್ತಿರುವ ಅಪಘಾತಗಳಿಗೆ ಮದ್ಯಪಾನವೇ ಕಾರಣವಾಗಿರುವುದರಿಂದ, ಮನೆಗಳಿಗೇ ಮದ್ಯ ಪೂರೈಸುವ ವ್ಯವಸ್ಥೆ ಮಾಡುತ್ತಿದ್ದೇವೆ...’’. ಅಂದರೆ ಸರಕಾರದ ಪ್ರಕಾರ ಈ ಕ್ರಮ ಮದ್ಯ ಮಾರಾಟವನ್ನು ಹೆಚ್ಚಿಸುವುದಕ್ಕಲ್ಲ, ಬದಲಿಗೆ ಅಪಘಾತ ಪ್ರಕರಣಗಳನ್ನು ಇಳಿಸುವುದಕ್ಕೆ. ತರಕಾರಿ, ದಿನಸಿಗಳನ್ನು ಪಡೆಯುವ ರೀತಿಯಲ್ಲೇ ಸರಕಾರ ಇದನ್ನು ಒದಗಿಸಲಿದೆಯಂತೆ.

ಬಹುಶಃ ಮಹಾರಾಷ್ಟ್ರ ಸರಕಾರದ ಪ್ರಕಾರ ಈ ಯೋಜನೆಯಿಂದ ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಅಪಘಾತ ಪ್ರಕರಣಗಳು ಇದರಿಂದಾಗಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಮಹಾರಾಷ್ಟ್ರ ಸರಕಾರ ಆತ್ಮವಂಚನೆಯ ಪರಾಕಾಷ್ಠೆಯನ್ನು ಪ್ರದರ್ಶಿಸಿದೆ. ಮದ್ಯವನ್ನು ಮನೆಮನೆಗೆ ಹಂಚಿ ತನ್ನ ಸರಕಾರದ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಬೇಕಾದ ದೈನೇಸಿ ಸ್ಥಿತಿಯನ್ನು ಮುಚಿಟ್ಟಿದೆ. ನಿಜಕ್ಕೂ, ಇದರಿಂದಾಗಿ ಮದ್ಯ ಕುಡಿದು ಕಾರು ಚಲಾಯಿಸುವವರ ಸಂಖ್ಯೆ ಇಳಿಯುವುದಿಲ್ಲ. ಬದಲಿಗೆ, ಯಾವುದೇ ವಾಹನಗಳಿಲ್ಲದೆ ಬಾರ್‌ಗಳಿಗೆ ತೆರಳಲಾಗದ ಮಂದಿಗೆ, ಬಾರ್‌ಗಳನ್ನು ಮನೆಯ ಕಡೆಗೆ ತಲುಪಿಸುವ ಪ್ರಯತ್ನಕ್ಕೆ ಸರಕಾರ ಮುಂದಾಗಿದೆ. ಇಷ್ಟಕ್ಕೂ ಬಾರ್‌ನಲ್ಲಿ ಕುಡಿಯುವವರು ಅಥವಾ ವಾಹನದಲ್ಲಿ ಕುಡಿಯುವವರು ಅದನ್ನು ಮನೆಗೆ ಒಯ್ದು ಕುಡಿಯುವುದಕ್ಕೆ ಇರುವ ಅಡ್ಡಿ ಏನು ಎನ್ನುವುದನ್ನು ಸರಕಾರ ಈವರೆಗೆ ವಿವರಿಸಿಲ್ಲ. ಸರಕಾರದ ಈ ಕ್ರಮದಿಂದ, ಇರುವ ಬಾರ್‌ಗಳ ಜೊತೆಗೆ ಮನೆಗಳೂ ಬಾರ್‌ಗಳಾಗಿ ಪರಿರ್ವತನೆಯಾಗುವ ಸಾಧ್ಯತೆಗಳಿವೆ. ಇದರಿಂದ ಅಪಘಾತಗಳು ಇಳಿಯುವುದು ಬಿಡಿ, ಬದಲಿಗೆ ಪ್ರತಿ ಮನೆಗಳು ಅಪರಾಧಗಳ ತಂಗುದಾಣಗಳಾಗಲಿವೆ. ಒಂದೆಡೆ ಬಿಹಾರದಂತಹ ರಾಜ್ಯಗಳು ಮದ್ಯ ನಿಷೇಧದ ಬಗ್ಗೆ ಯೋಚಿಸುತ್ತಾ, ಪ್ರಯೋಗಗಳನ್ನು ಮಾಡುವ ಮೂಲಕ ದೇಶಕ್ಕೆ ಮಾದರಿಯಾಗಿವೆ. ಮದ್ಯ ನಿಷೇಧದಿಂದಾಗಿ ಬಿಹಾರದಲ್ಲಿ ಅಪರಾಧ ಪ್ರಕರಣಗಳು ಗಣನೀಯವಾಗಿ ಇಳಿದಿದೆ ಎನ್ನುವುದನ್ನು ಅಲ್ಲಿನ ಮುಖ್ಯಮಂತ್ರಿಯವರೇ ಪತ್ರಿಕಾಗೋಷ್ಠಿಯ ಮೂಲಕ ಸ್ಪಷ್ಟಪಡಿಸಿದ್ದಾರೆ. ಹಲವು ರಾಜ್ಯಗಳು ಮದ್ಯ ನಿಷೇಧದ ಕುರಿತಂತೆ ಗಂಭೀರವಾಗಿ ಯೋಚಿಸುತ್ತಿವೆ. ಅದನ್ನು ಅನುಷ್ಠಾನಕ್ಕೆ ತರಲು ಮಾರ್ಗಗಳನ್ನು ಹುಡುಕುತ್ತಿವೆ. ಆದರೆ ಮಹಾರಾಷ್ಟ್ರ ಮಾತ್ರ ಇದಕ್ಕೆ ತದ್ವಿರುದ್ಧವಾದ ನೀತಿಯನ್ನು ಮದ್ಯದ ಕುರಿತಂತೆ ಹೊಂದಿದೆ.

ದೇಶದ ಸಂಸ್ಕೃತಿಯ ಗುತ್ತಿಗೆ ವಹಿಸಿಕೊಂಡಿರುವಂತೆ ಮಾತನಾಡುತ್ತಿರುವ ಬಿಜೆಪಿ ಇದೀಗ ಮದ್ಯ ಮಾರಾಟದ ಗುತ್ತಿಗೆಯನ್ನು ವಹಿಸಿರುವುದರ ಬಗ್ಗೆ ಆರೆಸ್ಸೆಸ್ ಈವರೆಗೆ ತುಟಿ ಬಿಚ್ಚಿಲ್ಲ. ಪುರಾಣಗಳಲ್ಲೂ ಮದ್ಯ ದೇವತೆಗಳ ಮಹತ್ತರ ಪಾನೀಯವಾಗಿದ್ದುದರಿಂದ ಆರೆಸ್ಸೆಸ್, ಈ ಯೋಜನೆಯನ್ನು ಧರ್ಮದ ಪುನರುತ್ಥಾನದ ಭಾಗವಾಗಿ ಸ್ವೀಕರಿಸಿರಬಹುದು. ಮಹಾರಾಷ್ಟ್ರದಲ್ಲಿ ಎಂದಲ್ಲ ದೇಶದಲ್ಲೇ ಅಪಘಾತಗಳಿಗೆ ಮುಖ್ಯವಾದ ಕಾರಣ ಮದ್ಯ ಸೇವಿಸಿ ವಾಹನ ಚಲಾಯಿಸುವುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಮದ್ಯವನ್ನು ಅವರವರ ಮನೆಗೆ ತಲುಪಿಸಿ, ಚಾಲಕರು ಮದ್ಯ ಸೇವಿಸದಂತೆ ತಡೆಯುವುದು ಸಾಧ್ಯವೇ? ವಾಹನ ಚಾಲಕರು ಮದ್ಯ ಸೇವಿಸದಂತೆ ಮಾಡಲು ಇರುವ ಒಂದೇ ಉಪಾಯ ನಗರಗಳಲ್ಲಿ, ರಸ್ತೆ ಬದಿಗಳಲ್ಲಿರುವ ಎಲ್ಲ ಸಾರಾಯಿ ಅಂಗಡಿಗಳನ್ನು ಮುಚ್ಚಿಸುವುದು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ರಾಜ್ಯದಲ್ಲಿ ಮದ್ಯವನ್ನೇ ಸಂಪೂರ್ಣವಾಗಿ ನಿಷೇಧಿಸುವುದು. ಇದರಿಂದಷ್ಟೇ ವಾಹನ ಚಾಲಕರು ಮದ್ಯ ಸೇವಿಸದಂತೆ ತಡೆಯಬಹುದು.

ಒಂದೆಡೆ ಬಾರ್‌ಗಳನ್ನು, ಸಾರಾಯಿ ಅಂಗಡಿಗಳನ್ನು ಬಹಿರಂಗವಾಗಿ ತೆರೆದಿಟ್ಟು, ಮಗದೊಂದೆಡೆ ಮನೆ ಮನೆಗಳಿಗೆ ಮದ್ಯ ಸರಬರಾಜು ಮಾಡುವ ಮೂಲಕ ಅಪಘಾತಗಳನ್ನು ತಡೆಯಲು ಯಾವ ರೀತಿಯಲ್ಲೂ ಸಾಧ್ಯವಿಲ್ಲ. ಬದಲಿಗೆ, ನೇರವಾಗಿ ಮನೆಯ ಸದಸ್ಯರ ಮೇಲೆ ಇದು ದುಷ್ಪರಿಣಾಮ ಬೀರಲಿದೆ. ಮೊತ್ತ ಮೊದಲಾಗಿ ಇದರ ಸಂತ್ರಸ್ತರು ಮಹಿಳೆಯರು. ಪತಿಯ ದುಶ್ಚಟಗಳಿಗೆ ಮೊದಲು ಬೆಲೆ ತೆರಬೇಕಾದವರೇ ಪತ್ನಿಯರು. ಇದಾದ ಬಳಿಕ ಮಕ್ಕಳು. ಜೊತೆಗೆ, ಮನೆಯ ಪರಿಸರ ಕೆಡತೊಡಗುತ್ತದೆ. ಕದ್ದು ಮುಚ್ಚಿ ಕುಡಿಯುತ್ತಿದ್ದ ಪಾಲಕರು, ಬಹಿರಂಗವಾಗಿ ಮನೆಯಲ್ಲಿ ಮದ್ಯ ಸೇವಿಸುವುದನ್ನು ಮಕ್ಕಳು ಗಮನಿಸುತ್ತಾರೆ. ಅದು ಮಾನಸಿಕವಾಗಿ ಅವರ ಮೇಲೆ ಪರಿಣಾಮ ಉಂಟು ಮಾಡಬಹುದು. ಹೊಸ ತಲೆಮಾರು ಕೂಡ ಅತಿ ಬೇಗ ಮದ್ಯದ ದಾಸರಾಗಬಹುದು. ಬಹುಶಃ ಸರಕಾರಕ್ಕೂ ಇದೇ ಬೇಕಾಗಿದೆ ಎಂದು ಕಾಣುತ್ತದೆ. ಇಂದು ಸರಕಾರಕ್ಕೆ ಬರುವ ಅತಿ ಹೆಚ್ಚಿನ ಆದಾಯ ಅಬಕಾರಿ ಇಲಾಖೆಯಿಂದಾಗಿದೆ. ಆದುದರಿಂದ ಮದ್ಯ ಹೆಚ್ಚು ಮಾರಾಟವಾದಷ್ಟು ಸರಕಾರಕ್ಕೆ ಹಣ. ಸಮಾಜದ ಸ್ವಾಸ್ಥದ ಹೊಣೆಗಾರಿಕೆ ತನಗೆ ಸಂಬಂಧಿಸಿದ್ದಲ್ಲ ಎಂದು ಮಹಾರಾಷ್ಟ್ರ ಸರಕಾರ ಹೇಳುತ್ತಿದೆ.

ದೇಶದ ಕುಸಿಯುತ್ತಿರುವ ಆರ್ಥಿಕತೆಯಿಂದ ಕಂಗೆಟ್ಟಿರುವ ರಾಜ್ಯ ಸರಕಾರಗಳು ಹಣ ಸಂಗ್ರಹಿಸಲು ಅಡ್ಡ ದಾರಿಯನ್ನು ಆಯ್ದುಕೊಳ್ಳುತ್ತಿವೆ. ಹೇಗಾದರೂ ಸರಿ, ಸರಕಾರದ ಖಜಾನೆಯನ್ನು ತುಂಬಿಸಬೇಕು ಎನ್ನುವುದು ಅದರ ಗುರಿ. ಇದರ ಭಾಗವಾಗಿಯೇ ಮಹಾರಾಷ್ಟ್ರ ಸರಕಾರ, ಅತಿ ಹೆಚ್ಚು ಮದ್ಯ ಮಾರಾಟದ ಗುರಿಯನ್ನು ಅಧಿಕಾರಿಗಳಿಗೆ ಮತ್ತು ವಿವಿಧ ಗುತ್ತಿಗೆದಾರರಿಗೆ ಸೂಚಿಸಿದೆ. ಈ ಈ ಗುರಿಯನ್ನು ತಲುಪಿಸುವ ಉದ್ದೇಶಕ್ಕಾಗಿಯೇ ಇಲಾಖೆ ಮನೆ ಮನೆಗಳಿಗೆ ಮದ್ಯವನ್ನು ತಲುಪಿಸುವ ಹೊಸ ತಂತ್ರವನ್ನು ಹೂಡಿದೆ. ಬಡವರ ಮನೆ ಹುಡುಕಿ ಅಲ್ಲಿಗೆ ಅಕ್ಕಿ, ಗೋಧಿ, ಸೀಮೆಎಣ್ಣೆ ತಲುಪಿಸಬೇಕಾದ ಸರಕಾರ, ಇದೀಗ ಮದ್ಯ ತಲುಪಿಸುವುದನ್ನು ತನ್ನ ಕರ್ತವ್ಯವಾಗಿ ಸ್ವೀಕರಿಸಿದೆ. ಜನಸಾಮಾನ್ಯರ ಸಬ್ಸಿಡಿ ಆಹಾರಗಳ ಕುರಿತಂತೆ ಮಾತನಾಡಿದರೆ, ಅದನ್ನು ಅಭಿವೃದ್ಧಿ ವಿರೋಧಿ ಮಾತುಗಳು ಎಂದು ತಿರಸ್ಕರಿಸುವ ಸರಕಾರ ಮದ್ಯ ಮಾರಾಟದ ವಿರುದ್ಧ ಮಾತನಾಡಿದರೆ, ಹಾಗಾದರೆ ಸರಕಾರ ನಡೆಸುವುದಕ್ಕೆ ಹಣ ಎಲ್ಲಿಂದ ಬರಬೇಕು ಎಂದು ಕೇಳುತ್ತದೆ. ಒಟ್ಟಿನಲ್ಲಿ ದೇಶ ಇಂದು ಮದ್ಯ, ಪ್ರವಾಸೋದ್ಯಮದ ಹೆಸರಿನಲ್ಲಿ ವೇಶ್ಯಾವಾಟಿಕೆಯಂತಹ ಉದ್ಯಮದ ಮೂಲಕ ಸರಕಾರವನ್ನು ನಡೆಸುವ ಸ್ಥಿತಿಗೆ ಬಂದು ನಿಂತಿದೆ. ಒಂದೆಡೆ ‘ಹೆಂಡ ಸಾರಾಯಿ ಸಹವಾಸ-ಹೆಂಡತಿ ಮಕ್ಕಳ ಉಪವಾಸ’ ಎನ್ನುವ ಜಾಹೀರಾತಿಗೆ ಕೋಟಿಗಟ್ಟಲೆ ಖರ್ಚು ಮಾಡುವ ಸರಕಾರ ಮಗದೊಂದೆಡೆ ತಾನೇ ಖುದ್ದಾಗಿ ಮದ್ಯವನ್ನು ಮನೆಮನೆಗೆ ತಲುಪಿಸಲು ಹೊರಟಿರುವುದು ವಿಪರ್ಯಾಸವಾಗಿದೆ.

ಸರಕಾರ ಒಂದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮದ್ಯದಿಂದ ಸರಕಾರಕ್ಕೆ ಆದಾಯ ಬರಬಹುದು. ಆದರೆ ಇದೇ ಸಂದರ್ಭದಲ್ಲಿ ಮದ್ಯದಿಂದಾಗಿ ಸಂಭವಿಸುವ ಅಪರಾಧ, ಅಪಘಾತಗಳಿಂದಾಗಿ ಸರಕಾರ ದುಪ್ಪಟ್ಟು ನಷ್ಟವನ್ನು ಅನುಭವಿಸಬೇಕಾಗುತ್ತದೆ. ಸಾರ್ವಜನಿಕ ಆರೋಗ್ಯಕ್ಕಾಗಿ ಸರಕಾರ ಭಾರೀ ಪ್ರಮಾಣದಲ್ಲಿ ಹಣವನ್ನು ಬಿಡುಗಡೆ ಮಾಡುತ್ತದೆ. ಮದ್ಯ ಮಾರಾಟ ಹೆಚ್ಚಿದಂತೆಯೇ ನಾಡು ಹೆಚ್ಚು ಹೆಚ್ಚು ಅನಾರೋಗ್ಯಕ್ಕೊಳಗಾಗುತ್ತದೆ. ದೇಶದ ಜನಸಂಪತ್ತು ದುರ್ಬಲವಾಗತೊಡಗುತ್ತದೆ. ಇದೇ ಸಂದರ್ಭದಲ್ಲಿ ರಸ್ತೆ ಅಪಘಾತಗಳೂ ಹೆಚ್ಚುತ್ತಾ ಅದು ಜನರ ಬದುಕಿನ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸಮಾಜದ ನೈತಿಕತೆಯನ್ನು ಸಂಪೂರ್ಣ ನಾಶ ಮಾಡುತ್ತದೆ. ಮದ್ಯ ಮಾರಾಟದಿಂದ ಖಜಾನೆಗೆ ಬಂದ ಹಣ, ಅದರ ದುಪ್ಪಟ್ಟು ಹಣವನ್ನು ಕಿತ್ತುಕೊಂಡು ಹೋಗುತ್ತದೆ. ಮದ್ಯ ಮಾರಾಟ, ವೇಶ್ಯಾವಾಟಿಕೆಯಂತಹ ಉದ್ಯಮದಿಂದ ಬಂದ ಹಣದಿಂದ ಸರಕಾರ ನಡೆಸಬೇಕಾದ ದುರ್ಗತಿ ದೇಶಕ್ಕೆ ಯಾವ ಕಾರಣಕ್ಕೂ ಬಾರದಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News