ಚಿಕ್ಕಮಗಳೂರು : ಜಿಪಂ ಹಣಕಾಸು ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ ಸಭೆ

Update: 2018-10-16 18:46 GMT

ಚಿಕ್ಕಮಗಳೂರು, ಅ.16:  ಅರಣ್ಯ ಇಲಾಖೆಯ ಅಧಿಕಾರಿಗಳು ಸಭೆಗೆ ಬರುವುದಿಲ್ಲ. ಇಲಾಖೆ ಸಂಬಂಧದ ಮಾಹಿತಿಯನ್ನು ಸಭೆಗೆ ಸಮರ್ಪಕವಾಗಿ ನೀಡುವುದಿಲ್ಲ. ಜಿಲ್ಲಾದ್ಯಂತ ಅಕ್ರಮವಾಗಿ ಮರ ಸಾಗಣಿಕೆ ಮಾಡುತ್ತಿದ್ದರೂ ಅರಣ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ಈ ಅಸಮರ್ಪಕ ಕಾರ್ಯ ವೈಖರಿ ಮುಂದುವರಿದಲ್ಲಿ ತಾವು ಸಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಆಕ್ರೋಶ ತಿಳಿಸಿದ್ದಾರೆ.

ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಣಕಾಸು ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೀಲಗಿರಿ ಮತ್ತು ಅಕೇಶಿಯ ಮರಗಳನ್ನು ಬೆಳೆಯಬಾರದೆಂದು ಸರಕಾರ ಆದೇಶ ನೀಡಿದೆ. ಆದರೂ ಅಧಿಕಾರಿಗಳು ಅರಣ್ಯ ಕಾಯ್ದೆ, ನೀತಿ ನಿಯಮಗಳನ್ನು ಗಾಳಿಗೆ ತೂರಿ ಜಿಲ್ಲೆಯಲ್ಲಿ ನೀಲಗಿರಿ ಮತ್ತು ಅಕೇಶಿಯ ಮರಗಳನ್ನು ಬೆಳೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಸಭೆಗೆ ತಿಳಿಸಿದರು.

ಕೇಂದ್ರ ಸರಕಾರದ ಆಯುಷ್‍ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕದ ಯೋಜನೆಯ ಮಾಹಿತಿಗಳನ್ನು ಜನರಿಗೆ ಹೆಚ್ಚು ತಿಳಿಸಬೇಕು. ಜನಸಂಪರ್ಕ ಸಭೆ ಮತ್ತು ಗ್ರಾಮಸಭೆಗಳಲ್ಲಿ ವೈದ್ಯಾಧಿಕಾರಿಗಳು ಭಾಗವಹಿಸಿ ತಮ್ಮ ಇಲಾಖಾ ಸೌಲಭ್ಯಗಳ ಬಗ್ಗೆ ಜನರಿಗೆ ತಿಳಿಸಬೇಕು ಎಂದರು.

ಜಿಪಂ ಸದಸ್ಯ ಮಹೇಶ್ ಒಡೆಯರ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರ ರೈತರಿಗೆ ಮತ್ತು ಬಡವರಿಗೆ ಅನುಕೂಲವಾಗಲೆಂದು ಅನೇಕ ವಿಮಾ ಯೋಜನೆಗಳನ್ನು ಜಾರಿಗೆ ತಂದಿದೆ. ಕೃಷಿ, ತೋಟಗಾರಿಕಾ ಅಧಿಕಾರಿಗಳು ಬೆಳೆವಿಮೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ರೈತರಿಗೆ ಹೆಚ್ಚಿನ ನೆರವು ನೀಡಬೇಕು ಎಂದರು.

ಜಿಲ್ಲೆಯಲ್ಲಿರುವ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಮತ್ತು ಶಾಲೆಗಳ ಜಾಗವನ್ನು ಒತ್ತುವರಿ ಮಾಡಲಾಗಿದೆ. ಒತ್ತುವರಿ ಖುಲ್ಲಾ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಯಾವುದೆ ಕ್ರಮ ಕೈಗೊಂಡಿಲ್ಲ. ಮುಂದಿನ ಒಂದು ವಾರದ ಒಳಗೆ ಒತ್ತುವರಿಯಾದ ಜಾಗವನ್ನು ಬಿಡಿಸಿಕೊಂಡು ಜಾಗದ ಚರ ಮತ್ತು ಸ್ಥಿರ ಆಸ್ತಿಯ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕೆಂದು ಸೂಚಿಸಿದರು.

ಜಿಪಂ ಸದಸ್ಯ ಬಣಕಲ್ ಶಾಮಣ್ಣ ಮಾತನಾಡಿ,  ಕೃಷಿ ಮತ್ತು ತೋಟಗಾರಿಕಾ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಪದೇಪದೇ ನೀಡಿದವರಿಗೇ ನೀಡುತ್ತಿರುವುದರ ಬಗ್ಗೆ ದೂರುಗಳು ಬರುತ್ತಿವೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನೆಡೆಸಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ನೀಡುವಂತೆ ತಿಳಿಸಿದರು.

ಪಶುಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಕರ್ನಾಟಕ ಬ್ಯಾಂಕ್‍ನವರು ಸಾಲವನ್ನು ನೀಡದೇ ಫಲಾನುಭವಿಗಳನ್ನು ಸತಾಯಿಸುತ್ತಿದ್ದಾರೆ. ಅರ್ಹ ಫಲಾನುಭವಿಗಳಾದ ಎಸ್ಸಿ-ಎಸ್ಟಿ ಜನಾಂಗದವರಿಗೂ ಸಾಲ ಸೌಲಭ್ಯ ನೀಡದೇ ಉಡಾಫೆ ಉತ್ತರ ನೀಡುತ್ತಿದ್ದಾರೆ. ಇದು ಮುಂದುವರಿದ ಬಗ್ಗೆ ದೂರು ಬಂದಲ್ಲಿ ಅಂತಹವರ ಮೇಲೆ ಅಟ್ರಾಸಿಟಿ ದೂರು ದಾಖಲಿಸುವುದಾಗಿ ಸಭೆಯಲ್ಲಿ ಸೂಚಿಸಿದ ಅವರು, ಈ ಸಂಬಂಧ ಸಂಬಂಧಿಸಿದ ಅಧಿಕಾರಿಗಳು ಬ್ಯಾಂಕ್‍ನವರೊಂದಿಗೆ ಚರ್ಚಿಸಿ ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಚಂದ್ರಮ್ಮ, ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಸತ್ಯಭಾಮ, ಉಪಕಾರ್ಯದರ್ಶಿ ರಾಜಗೋಪಾಲ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News