ಗೋವಾ ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕಿದ್ದು ಯಾರು ಗೊತ್ತೇ?

Update: 2018-10-17 03:38 GMT

ಪಣಜಿ, ಅ.17: ಇಬ್ಬರು ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಸೆಳೆಯುವಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ವಲಸೆ ಹೋಗಿದ್ದ ಗೋವಾ ಸಚಿವ ವಿಶ್ವಜೀತ್ ಪ್ರತಾಪಸಿಂಗ್ ರಾಣೆ ಪ್ರಮುಖ ಪಾತ್ರ ವಹಿಸಿದ್ದರು ಎನ್ನುವ ಅಂಶ ಇದೀಗ ಬಹಿರಂಗವಾಗಿದೆ. ಇಬ್ಬರು ಕಾಂಗ್ರೆಸ್ ಶಾಸಕರ ವಲಸೆಯಿಂದಾಗಿ ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ ಬದಲಾವಣೆಯಾಗಿದೆ.

ಕಾಂಗ್ರೆಸ್ ಶಾಸಕರಾದ ಸುಭಾಷ್ ಶಿರೋಡ್ಕರ್ ಮತ್ತು ದಯಾನಂದ ಸೋಪ್ಟೆ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿಯಾಗುವ ಸಲುವಾಗಿ ಮಂಗಳವಾರ ವಿಮಾನ ಏರಿದ್ದರು. ಆದರೆ ರಾಣೆ ಇದಕ್ಕೂ ಮುನ್ನ ಸೋಮವಾರವೇ ದೆಹಲಿಗೆ ತೆರಳಿದ್ದರು. ಈ ಮಧ್ಯೆ ಶಿರೋಡ್ಕರ್ ಹಾಗೂ ಸೋಪ್ಟೆ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದಾಗಿ ಸದನದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ಸದಸ್ಯಬಲ ತಲಾ 14 ಆಗಿದೆ.

ರಾಣೆ ತಂತ್ರಗಾರಿಕೆಯನ್ನು ಕಟುವಾಗಿ ಟೀಕಿಸಿರುವ ವಿರೋಧ ಪಕ್ಷದ ನಾಯಕ ಚಂದ್ರಕಾಂತ್ ಕಾಳ್ವೇಕರ್, "ಜನ ಅವರಿಗೆ ಪಾಠ ಕಲಿಸಲಿದ್ದಾರೆ" ಎಂದು ಹೇಳಿದ್ದಾರೆ.

ಪರಿಕ್ಕರ್ ಅವರ ಉತ್ತರಾಧಿಕಾರಿ ಎಂದೇ ರಾಣೆ ಬಿಂಬಿಸಿಕೊಂಡಿದ್ದಾರೆ. ಆದರೆ ಬಿಜೆಪಿ ಇದನ್ನು ನಿರಾಕರಿಸಿದ್ದು, ಆಡಳಿತ ಪಕ್ಷದಲ್ಲಿ ಆಂತರಿಕ ಕಚ್ಚಾಟಕ್ಕೆ ಇದು ಕಾರಣವಾಗಿದೆ. "ರಾಣೆಯನ್ನು ಸಿಎಂ ಮಾಡಿದರೆ ಅವರು ಇಡೀ ಬಿಜೆಪಿಯನ್ನು ಕೆಲವೇ ವರ್ಷಗಳಲ್ಲಿ ಮುಗಿಸಲಿದ್ದಾರೆ" ಎಂದು ಹಿರಿಯ ಬಿಜೆಪಿ ಮುಖಂಡರೊಬ್ಬರು ಆತಂಕ ವ್ಯಕ್ತಪಪಡಿಸಿದ್ದಾರೆ.

ಗೋವಾದಲ್ಲಿ 1977ರಿಂದಲೂ ನಿರಂತರವಾಗಿ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ದಾಖಲೆ ಸ್ಥಾಪಿಸಿರುವ ಶಾಸಕ ಪ್ರತಾಪ್ ಸಿಂಗ್ ರಾಣೆ ಅವರ ಮಗನಾಗಿರುವ ವಿಶ್ವಜೀತ್, 2007ರಲ್ಲಿ ಮೊದಲ ಬಾರಿಗೆ ಸ್ವತಂತ್ರ ಅಭ್ಯರ್ಥಿಯಾಗಿ ವಿಧಾನಸಭೆ ಪ್ರವೇಶಿಸಿದ್ದರು. ದಿಗಂಬರ ಕಾಮತ್ ನೇತೃತ್ವದ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 2017ರ ಚುನಾವಣೆಯಲ್ಲಿ ಏಕೈಕ ದೊಡ್ಡಪಕ್ಷವಾಗಿ ಹೊರಹೊಮ್ಮಿದರೂ ಕಾಂಗ್ರೆಸ್ ಸರ್ಕಾರ ರಚನೆಗೆ ವಿಫಲವಾದ್ದನ್ನು ಪ್ರತಿಭಟಿಸಿ ರಾಣೆ ಪಕ್ಷ ತೊರೆದರು. ಪಕ್ಷದ ವೀಕ್ಷಕ ದಿಗ್ವಿಜಯ ಸಿಂಗ್ ವಿರುದ್ಧ ನೇರ ಆರೋಪ ಮಾಡಿ, ಪಕ್ಷದ ಹಿರಿಯ ಮುಖಂಡರು ತಮ್ಮ ಕರೆಗೆ ಸ್ಪಂದಿಸಲಿಲ್ಲ ಎಂದು ದೂರಿದ್ದರು. ಪರಿಕ್ಕರ್ ಅವರ ವಿಶ್ವಾಸಮತ ಯಾಚನೆ ಸಂದರ್ಭ ಮತದಾನದಿಂದ ಹೊರಗುಳಿದಿದ್ದ ರಾಣೆ, ಮುಂದಿನ ವಾರ ರಾಜೀನಾಮೆ ನೀಡಿ, ಬಿಜೆಪಿ ಟಿಕೆಟ್‌ನಲ್ಲಿ ವಿಧಾನಸಭೆಗೆ ಆಯ್ಕೆಯಾಗಿ, ಸಚಿವ ಪಟ್ಟವನ್ನೂ ಗಿಟ್ಟಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News