ಲೈಂಗಿಕ ಕಿರುಕುಳ ದೂರು ನೀಡಿದ ಬಿಜೆಪಿ ಸಂಸದನ ಕಚೇರಿಯ ಮಹಿಳಾ ಉದ್ಯೋಗಿಯ ವಜಾ

Update: 2018-10-17 07:25 GMT

ಹೊಸದಿಲ್ಲಿ, ಅ.17:ಉದ್ಯಮಿ ಹಾಗೂ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಅವರ ಬೆಂಗಳೂರು ಕಚೇರಿಯಲ್ಲಿ ಸ್ಟ್ರ್ಯಾಟಜಿ ಕನ್ಸಲ್ಟೆಂಟ್ ಆಗಿ ಉದ್ಯೋಗದಲ್ಲಿದ್ದ ಯುವತಿಯು ಸಂಸದರ ಸಮೀಪವರ್ತಿಯೊಬ್ಬರ ಮೇಲೆ ಲೈಂಗಿಕ ಆರೋಪ ಹೊರಿಸಿದ ಹಿನ್ನೆಲೆಯಲ್ಲಿ ತನ್ನ ಕೆಲಸ ಕಳೆದುಕೊಂಡಿದ್ದೇ ಅಲ್ಲದೆ ಯಾವುದೇ ವಿಚಾರ ಬಹಿರಂಗವಾಗಿ ಮಾತನಾಡದಂತೆ ನ್ಯಾಯಾಲಯದಿಂದ ನಿರ್ಬಂಧಕಾಜ್ಞೆಯನ್ನೂ ಪಡೆದಿರುವುದು ವರದಿಯಾಗಿದೆ.

ರಾಜೀವ್ ಚಂದ್ರಶೇಖರ್ ಅವರ ಬೆಂಗಳೂರು ಕಚೇರಿಯಲ್ಲಿ ಸ್ಟ್ರ್ಯಾಟಜಿ ಕನ್ಸಲ್ಟೆಂಟ್ ಆಗಿದ್ದ ಸೋನಂ ಮಹಾಜನ್ ಕೆಲಸ ಕಳೆದುಕೊಂಡ ಯುವತಿ. ದೂರಿನ ಹಿನ್ನೆಲೆಯಲ್ಲಿ ಆಂತರಿಕ ಸಮಿತಿಯೊಂದರ ತನಿಖೆಯಲ್ಲಿ ಕಿರುಕುಳ ದೃಢಪಟ್ಟರೂ, ಕಳೆದ ವಾರ ದೇಶಾದ್ಯಂತ ಮೀಟೂ ಆಂದೋಲನ ಹರಡುತ್ತಿದ್ದಂತೆಯೇ ಯುವತಿ ಸೋನಂ ಮಹಾಜನ್ ತನ್ನ ಕೆಲಸ ಕಳೆದುಕೊಂಡಿದ್ದಾರೆ. ಅಲ್ಲದೆ ಯಾವುದೇ ವಿಚಾರ ಬಹಿರಂಗವಾಗಿ ಮಾತನಾಡದಂತೆ ನ್ಯಾಯಾಲಯದಿಂದ ನಿರ್ಬಂಧಕಾಜ್ಞೆಯನ್ನೂ ಪಡೆದಿದ್ದಾರೆ.

ಎಂಬಿಎ ಪದವೀಧರೆಯಾಗಿರುವ ಸೋನಂ ಅವರು ಚಂದ್ರಶೇಖರ್ ಅವರ ಕಚೇರಿಯಲ್ಲಿ ಅಕ್ಟೋಬರ್ 9, 2017ರಲ್ಲಿ ಉದ್ಯೋಗಕ್ಕೆ ಒಂದು ವರ್ಷದ ಗುತ್ತಿಗೆಯಾಧಾರದಲ್ಲಿ ನೇಮಕಗೊಂಡಿದ್ದರು. ಚಂದ್ರಶೇಖರ್ ಅವರ ಸಂಸ್ಥೆ ಬೆಂಗಳೂರಿನ ಜುಪಿಟರ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ ಕಟ್ಟಡದಲ್ಲಿರುವ 'ನಮ್ಮ ಬೆಂಗಳೂರು ಫೌಂಡೇಶನ್‌'ನಲ್ಲಿ ಆಕೆ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲಿ ಚಂದ್ರಶೇಖರ್ ಅವರ ಸಮೀಪವರ್ತಿ ಹಾಗೂ ಅವರ ಮಾಧ್ಯಮ ಸಂಸ್ಥೆ ಏಷ್ಯಾನೆಟ್ ಇದರ ಸಿಒಒ ಆಗಿರುವ ಅಭಿನವ್ ಖರೆಯ ಅಡಿಯಲ್ಲಿ ಕೆಲಸ ಮಾಡಬೇಕಿತ್ತು. ಕೆಲಸಕ್ಕೆ ಸೇರಿ ತಿಂಗಳಾಗುವುದರೊಳಗಾಗಿ ಅಭಿನವ್ ಅವರ ಅನುಚಿತ ವರ್ತನೆಯಿಂದ ಬೇಸತ್ತು ಲೈಂಗಿಕ ಕಿರುಕುಳ ದೂರನ್ನು ಚಂದ್ರಶೇಖರ್ ಅವರಿಗೆ ನೇರವಾಗಿ ಸಲ್ಲಿಸಿದ್ದರು. ಆರಂಭದಲ್ಲಿ ರಾಜಿ ಪಂಚಾಯತಿಕೆಗೆ ಮುಂದಾದರೂ ನಂತರ ಆಂತರಿಕ ತನಿಖಾ ಸಮಿತಿ ಮೂಲಕ ತನಿಖೆ ನಡೆದು ಅಭಿನವ್ ಖರೆ ತಪ್ಪಿತಸ್ಥ ಎಂದು ಸಾಬೀತಾಗಿ ಸಮಿತಿ ಹಲವು ಕ್ರಮಗಳನ್ನು ಶಿಫಾರಸು ಮಾಡಿತ್ತು. ಆದರೆ ಸೂಕ್ತ ಕ್ರಮ ಜಾರಿಯಾಗದೇ ಇದ್ದಾಗ ಸೋನಂ ಅದನ್ನು ಪ್ರಶ್ನಿಸಲಾರಂಭಿಸಿದರಲ್ಲದೆ ಅಭಿನವ್ ಖರೆ ಅಧೀನದಲ್ಲಿ ಕೆಲಸ ಮಾಡಲು ನಿರಾಕರಿಸಿದ್ದರು.

ಅಕ್ಟೋಬರ್ 1ರಂದು ಆಂತರಿಕ ತನಿಖಾ ಸಮಿತಿಯ ಶಿಫಾರಸು ಜಾರಿಗೆ ತಡೆ ಕೋರಿ ಖರೆ ಬೆಂಗಳೂರಿನ ನ್ಯಾಯಾಲಯದ ಮೊರೆ ಹೋಗಿದ್ದರು. ಕಳೆದ ವಾರ ಮೀ ಟೂ ಆಂದೋಲನ ಕಾವು ಪಡೆಯುತ್ತಿದ್ದಂತೆಯೇ ಸೋನಂ ಟ್ವಿಟ್ಟರ್ ನಲ್ಲಿ ಈ ವಿಚಾರ ಪ್ರಸ್ತಾಪಿಸಿದಾಗ ಅಭಿನವ್ ಖರೆ ಮತ್ತೆ ನ್ಯಾಯಾಲಯದ ಮೊರೆ ಹೋಗಿ ಆಕೆ ಹಾಗೂ 'ನಮ್ಮ ಬೆಂಗಳೂರು ಫೌಂಡೇಶನ್' ವಿರುದ್ಧ ನಿರ್ಬಂಧಕಾಜ್ಞೆ ಪಡೆಯುವಲ್ಲಿ ಸಫಲರಾಗಿದ್ದರು.

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News