ಆಮೆಗತಿಯಲ್ಲಿ ಸಾಗುತ್ತಿದೆ ಪ್ರಧಾನಿಯ ಮಹಾತ್ವಾಕಾಂಕ್ಷೆಯ ಬುಲೆಟ್ ಟ್ರೈನ್ ಯೋಜನೆ

Update: 2018-10-17 08:16 GMT

ಹೊಸದಿಲ್ಲಿ, ಅ.17: ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷೆಯ ಬುಲೆಟ್ ಟ್ರೈನ್ ಯೋಜನೆಗೆ ಶಿಲಾನ್ಯಾಸ ನೆರವೇರಿಸಿ ಒಂದು ವರ್ಷವೇ ಕಳೆದಿದ್ದರೂ ಯೋಜನೆಗೆ ಅಗತ್ಯವಿರುವ 1,400 ಹೆಕ್ಟೇರ್ ಭೂಮಿಯ ಪೈಕಿ ಕೇವಲ 0.9 ಹೆಕ್ಟೇರ್ ಭೂಮಿಯನ್ನು ಮಾತ್ರ ಇಲ್ಲಿಯ ತನಕ ಸ್ವಾಧೀನ ಪಡಿಸಿಕೊಳ್ಳಲಾಗಿದೆ. 1.10 ಲಕ್ಷ ಕೋಟಿ ರೂ. ವೆಚ್ಚದ ಈ ಯೋಜನೆಗೆ ರೈತರ ವಿರೋಧ ಕೇಳಿ ಬರುತ್ತಿದ್ದು, ಸ್ವಾಧೀನಪಡಿಸಿಕೊಳ್ಳಲಾಗುವ ಭೂಮಿಗೆ ನೀಡಲಾಗುವ ಪರಿಹಾರ ಮೊತ್ತದ ಬಗ್ಗೆ ಅವರಿಗೆ ಅಸಮಾಧಾನವಿದೆ.

ಒಟ್ಟು 316 ಮೈಲು ಉದ್ದದ ಮುಂಬೈ-ಅಹ್ಮದಾಬಾದ್ ನಡುವಿನ ಈ ರೈಲು ಯೋಜನೆ ಜಾರಿಯಲ್ಲಾಗುತ್ತಿರುವ ಪ್ರಗತಿಯನ್ನು ಗಮನಿಸಿದಾಗ  ಅದು 2023ರಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಬಹಳಷ್ಟು ಕಡಿಮೆಯೆಂದೇ ಹೇಳಬಹುದು. ಜಪಾನ್ ದೇಶದ ಶಿಂಕನ್ಸೆನ್ ತಂತ್ರಜ್ಞಾನ ಉಪಯೋಗಿಸಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ.

ಈ ಯೋಜನೆಯಿಂದ ಬಾಧಿತರಾಗಲಿರುವ ರೈತರ ಗುಂಪೊಂದು ಈಗಾಗಲೇ ಗುಜರಾತ್ ಹೈಕೋರ್ಟಿಗೆ ಅಪೀಲು ಸಲ್ಲಿಸಿದ್ದು, ಈ ಬಗ್ಗೆ ಸರಕಾರದ ನಿಲುವನ್ನು ನವೆಂಬರ್ 22ರಂದು ಸ್ಪಷ್ಟಪಡಿಸುವಂತೆ ನ್ಯಾಯಾಲಯ ಹೇಳಿದೆ. ಸರಕಾರಿ-ಖಾಸಗಿ ಸಹಭಾಗಿತ್ವದ ಯೋಜನೆಗಳಿಗೆ  ಭೂಮಿ ಸ್ವಾಧೀನ ಪಡಿಸಲು ಸರಕಾರಕ್ಕಿರುವ ಅಧಿಕಾರವನ್ನೂ ರೈತರು ಪ್ರಶ್ನಿಸಿದ್ದಾರೆನ್ನಲಾಗಿದೆ.

ಇದಕ್ಕೂ ಮುಂಚೆ ಭೂಸ್ವಾಧೀನ ಪ್ರಕ್ರಿಯೆಗೆ ತಡೆ ಹೇರಲು ನ್ಯಾಯಾಲಯ ನಿರಾಕರಿಸಿತ್ತು. ಯೋಜನೆ ಪೂರ್ಣಗೊಳಿಸಲು 2023 ಗಡುವಾಗಿದ್ದರೂ ಅದಕ್ಕಿಂತಲೂ ಒಂದು ವರ್ಷ ಮುನ್ನ, ಅಂದರೆ ಆಗಸ್ಟ್ 2022ರೊಳಗಾಗಿ ಯೋಜನೆ ಕಾರ್ಯಾರಂಭಗೊಳ್ಳಲಿದೆ ಎಂದು  ಈ ಯೋಜನೆಯ ನಿರ್ಮಾಣ ಜವಾಬ್ದಾರಿ ಹೊತ್ತಿರುವ ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೊರೇಶನ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News