ಸೂರು, ಶಿಕ್ಷಣ, ಉದ್ಯೋಗ, ಜೀವನ ಭದ್ರತೆಗಾಗಿ ಮನವಿ: ಸಂಕಷ್ಟಕ್ಕೆ ಸ್ಪಂದಿಸುವ ಭರವಸೆ ನೀಡಿದ ಮುಖ್ಯಮಂತ್ರಿ

Update: 2018-10-17 12:21 GMT

ಮಡಿಕೇರಿ, ಅ.17: ಉತ್ತಮ ಸೂರು, ಕುಟುಂಬಕ್ಕೊಂದು ಉದ್ಯೋಗ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಆಸ್ತಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ, ಹೀಗೆ ಹತ್ತು ಹಲವು ಬೇಡಿಕೆಗಳನ್ನು ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಎದುರು ಮಂಡಿಸಿದರು.

ನಗರದ ಗಾಂಧಿ ಮೈದಾನದಲ್ಲಿ ಬುಧವಾರ ನಡೆದ ಕೊಡಗು ಜಿಲ್ಲೆಯ ಸಂತ್ರಸ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಾಲ್ಗೊಂಡು ನೊಂದವರ ಅಹವಾಲು ಆಲಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕುಮಾರಸ್ವಾಮಿ, ತಾನು ಭಾಷಣ ಮಾಡಿ ಹೋಗಲು ಬಂದಿಲ್ಲ. ನೀವು ಅನುಭವಿಸುತ್ತಿರುವ ನೋವನ್ನು ಆಲಿಸಿ, ನಿಮ್ಮ ನಿರೀಕ್ಷೆಗಳೇನು ಎಂಬುದನ್ನು ತಿಳಿದು ಅದನ್ನು ಸರಕಾರದ ಮುಂದಿಟ್ಟು ಪರಿಹಾರ ಕಂಡುಕೊಳ್ಳುವುದಕ್ಕಾಗಿ ಬಂದಿದ್ದೇನೆ. ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್‍ನ ನಿಯಮಾವಳಿಗಳ ಪ್ರಕಾರ ಸಂತ್ರಸ್ತರಿಗೆ ನೀಡುವ ಪರಿಹಾರದಿಂದ ಏನೂ ಮಾಡಲು ಸಾಧ್ಯವಿಲ್ಲ ಎಂಬ ಅರಿವು ತನಗಿದ್ದು, ಆ ಹಿನ್ನೆಲೆಯಲ್ಲಿ ನಿಯಮಾವಳಿಗಳನ್ನು ಬದಿಗಿಟ್ಟು ಕೊಡಗನ್ನು ಪುನರ್ ನಿರ್ಮಾಣ ಮಾಡುವುದಕ್ಕೆ ಸರಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಪ್ರಕೃತಿ ವಿಕೋಪದಲ್ಲಿ ಮನೆ, ಭೂಮಿ, ಆಸ್ತಿಪಾಸ್ತಿ ಕಳೆದುಕೊಂಡವರು ಸರಕಾರದಿಂದ ಯಾವ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೀರಿ ಎಂಬುದನ್ನು ತಿಳಿಸುವಂತೆ ಅವರು ಮನವಿ ಮಾಡಿದರು.

ಈ ಸಂದರ್ಭ ಮಾತನಾಡಿದ ಬಹುತೇಕ ಮಂದಿ ಪ್ರಕೃತಿ ವಿಕೋಪದಿಂದ ಮನೆ, ಆಸ್ತಿಪಾಸ್ತಿ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಕೆಲವರು ಸಂಪೂರ್ಣವಾಗಿ ಮನೆ ಕಳೆದುಕೊಂಡಿದ್ದರೆ, ಮತ್ತೆ ಕೆಲವರು ಭಾಗಶಃ ಹಾನಿಗೊಳಗಾದ ಮನೆಗಳಲ್ಲಿದ್ದಾರೆ. ಕೆಲವು ಮನೆಗಳು ಈಗಲೂ ಬಿರುಕು ಬಿಟ್ಟು ಅಪಾಯದ ಸ್ಥಿತಿಯಲ್ಲಿವೆ. ಅಂತಹ ಎಲ್ಲರಿಗೂ ಉತ್ತಮವಾದ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು. ಆದರೆ ಕಾಲೋನಿಗಳ ರೀತಿಯ ಮನೆಗಳು ಬೇಡ ಎಂಬ ಬೇಡಿಕೆಯನ್ನೂ ಮುಂದಿಟ್ಟರು.

ಬಹುತೇಕ ಮಂದಿ ಕೃಷಿ ಭೂಮಿ ಕಳೆದುಕೊಂಡಿದ್ದು, ಅವರಿಗೆ ಪರ್ಯಾಯವಾಗಿ ಭೂಮಿ ನೀಡಬೇಕು. ಭೂಮಿ ಮತ್ತು ಮನೆಯನ್ನು ಒಂದೇ ಭಾಗದಲ್ಲಿ ನೀಡುವ ಮೂಲಕ ಕೃಷಿ ಚಟುವಟಿಕೆ ನಡೆಸಲು ಪ್ರೋತ್ಸಾಹ ನೀಡಬೇಕು.  ಸಹಕಾರ ಸಂಘ, ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಮೈಕ್ರೋ ಫೈನಾನ್ಸ್ ಮತ್ತು ಸ್ವಸಹಾಯ ಸಂಘಗಳಿಂದ ಸಾಲ ಪಡೆದಿರುವ ಸಂತ್ರಸ್ತರ ಸಾಲವನ್ನು ಮನ್ನಾ ಮಾಡಬೇಕು. ಸಂತ್ರಸ್ತರ ಕುಟುಂಬದಲ್ಲಿ ತಲಾ ಒಬ್ಬರಿಗೆ ಅವರ ಅರ್ಹತೆಗನುಗುಣವಾಗಿ ಸರಕಾರಿ ಉದ್ಯೋಗ ಕೊಡಿಸಬೇಕು. ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಶಿಕ್ಷಣದ ಜವಾಬ್ದಾರಿಯನ್ನು ಸರಕಾರವೇ ವಹಿಸಿಕೊಳ್ಳಬೇಕು. ಹತ್ತಾರು ವರ್ಷಗಳಿಂದ ಕೃಷಿ ಮಾಡಿಕೊಂಡಿದ್ದವರಿಗೂ ಕಂದಾಯ ಇಲಾಖೆ ಇನ್ನೂ ದಾಖಲೆ ಪತ್ರಗಳನ್ನು ನೀಡಿಲ್ಲ. ಇದರಿಂದಾಗಿ ಪರಿಹಾರ ಪಡೆಯುವುದಕ್ಕೂ ತೊಂದರೆಯಾಗುತ್ತಿದೆ. ಆ ನಿಟ್ಟಿನಲ್ಲಿ ಸೂಕ್ತ ದಾಖಲೆ ಪತ್ರಗಳನ್ನು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ತಾಳತ್‍ಮನೆಯ ನಾಣಯ್ಯ, ಅರೆಕಲ್ಲುವಿನ ಪ್ರಭಾಕರ ಭಟ್, ಎರಡನೇ ಮೊಣ್ಣಂಗೇರಿಯ ರಾಧಾಕೃಷ್ಣ ಮತ್ತಿತರರು ಈ ಬೇಡಿಕೆಗಳನ್ನು ಮುಂದಿಟ್ಟರೆ, ಮಡಿಕೇರಿಯ ಜ್ಯೋತಿನಗರದ ಜೋಸೆಫ್ ಅವರು ಮಾತನಾಡಿ, ನಗರಸಭೆಗೆ ಹೋದರೆ ನಿಮ್ಮಲ್ಲಿ ಯಾವುದೇ ದಾಖಲೆಗಳಿಲ್ಲ. ಆದ್ದರಿಂದ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ವಾಪಾಸು ಕಳುಹಿಸುತ್ತಿದ್ದಾರೆ. 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿದ್ದರೂ, ಇನ್ನೂ ದಾಖಲೆಗಳು ಲಭ್ಯವಾಗಿಲ್ಲ. ಇದರಿಂದಾಗಿ ಅಲ್ಲಿನ ಸುಮಾರು 40ಕ್ಕೂ ಅಧಿಕ ಕುಟುಂಬಗಳು ಪರಿಹಾರದಿಂದ ವಂಚಿತವಾಗಿವೆ ಎಂದು ಅವಲತ್ತುಕೊಂಡರು.

ಕಾಲೂರಿನ ಎ.ಟಿ.ಮಾದಪ್ಪ ಅವರು ಮಾತನಾಡಿ, ಕಾಲೂರು ಸುತ್ತಮುತ್ತಲ ಮೂರು ಗ್ರಾಮಗಳಲ್ಲಿ ಮನೆ, ತೋಟಗಳು ಕೊಚ್ಚಿಹೋಗಿವೆ. ಬೆಟ್ಟಗಳು ಇನ್ನೂ ಬಾಯ್ತೆರೆದು ನಿಂತಿದ್ದು, ಉಳಿದಿರುವ ಮನೆಗಳೂ ಮುಂದಿನ ಮಳೆಗಾಲದಲ್ಲಿ ಮತ್ತೆ ಕೊಚ್ಚಿಹೋಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನವರನ್ನು ಸಮೀಪದಲ್ಲಿರುವ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿ ಮನೆ ನಿರ್ಮಿಸಿಕೊಡಬೇಕು ಎಂದರು.

ಸಿಎಂ ನಿಧಿ ಕೊಡಗಿಗೇ ಬೇಕು

ಮಕ್ಕಂದೂರಿನ ನಾಪಂಡ ಎಂ. ಕಾಳಪ್ಪ ಅವರು ಆ ಭಾಗದ ಸಂತ್ರಸ್ತರ ಪರವಾಗಿ ಮಾತನಾಡಿ, ಈಗಾಗಲೇ ಪ್ರಕೃತಿ ವಿಕೋಪ ಸಂಭವಿಸಿ ಎರಡು ತಿಂಗಳುಗಳು ಕಳೆದಿವೆ. ಪರಿಹಾರ ಕೇಂದ್ರದಲ್ಲಿದ್ದವರಿಗೆ ಮಾತ್ರ ತುರ್ತು ಪರಿಹಾರದ 3800ರೂ.ಗಳ ಮೊತ್ತ ಸಿಕ್ಕಿದ್ದು, ಪರಿಹಾರ ಕೇಂದ್ರಗಳಿಗೆ ತೆರಳದೆ ಸಂಬಂಧಿಕರ ಮನೆಗಳು ಮತ್ತಿತರ ಕಡೆಗಳಲ್ಲಿ ನೆಲೆಸಿದ್ದವರಿಗೆ ಇದುವರೆಗೂ ಪರಿಹಾರ ಲಭ್ಯವಾಗಿಲ್ಲ. ಕೆಲವರಿಗೆ ಮನೆಗಳಿದ್ದರೂ ಅವು ಅಪಾಯದ ಸ್ಥಿತಿಯಲ್ಲಿವೆ. ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಅಂತಹವರಿಗೂ ಮನೆ ನಿರ್ಮಿಸಿಕೊಡುವಂತಾಗಬೇಕು. ಮನೆ ಇದ್ದು ಆಸ್ತಿ ಕಳೆದುಕೊಂಡವರು ಜೀವನೋಪಾಯಕ್ಕೆ ಏನೂ ಇಲ್ಲದ ಸ್ಥಿತಿಯಲ್ಲಿದ್ದು, ಅವರಿಗೂ ಸೂಕ್ತ ಪರಿಹಾರ ನೀಡುವಂತಾಗಬೇಕು. ತೋಟ, ಜಮೀನುಗಳಲ್ಲಿದ್ದ ಮರಗಳು ಕೊಚ್ಚಿಹೋಗಿ ಗದ್ದೆ, ನದಿಗಳಲ್ಲಿ ಶೇಖರಣೆಯಾಗಿದ್ದು, ಅದನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಬಿಡುತ್ತಿಲ್ಲ. ಆದ್ದರಿಂದ ಅಂತಹ ಮರಗಳನ್ನು ಬಳಸಿಕೊಳ್ಳಲು ಅನುಮತಿ ನೀಡಬೇಕು. ಸಂತ್ರಸ್ತರ ಸಾಲಗಳನ್ನು ಮನ್ನಾ ಮಾಡುವುದರೊಂದಿಗೆ ಮುಂದೆ ದೀರ್ಘಾವಧಿ ಸಾಲವನ್ನು ಮಂಜೂರು ಮಾಡುವಂತಾಗಬೇಕು, ಸಂತ್ರಸ್ತರ ಕುಟುಂಬದ ಮಕ್ಕಳ ವಿದ್ಯಾಭ್ಯಾಸ, ಸರಕಾರಿ ಉದ್ಯೋಗದ ಬಗ್ಗೆ ಗಮನಹರಿಸಬೇಕು. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದಾನಿಗಳು ನೀಡಿದ ಮೊತ್ತವನ್ನು ಕೊಡಗಿನ ಅಭಿವೃದ್ಧಿಗೇ ವಿನಿಯೋಗಿಸುವಂತಾಗಬೇಕು. ಕಂದಾಯ ಇಲಾಖೆಯಲ್ಲಿರುವ ಕಡತಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತಾಗಬೇಕು ಎಂಬ ಬೇಡಿಕೆಗಳನ್ನು ಮಂಡಿಸಿದರು.

ಮಾದಾಪುರದ ಸಂತ್ರಸ್ತೆ ಸುನಂದ ಅವರು ಮಾತನಾಡಿ, ಕೂಲಿ ಕೆಲಸ ಮಾಡಿಕೊಂಡಿರುವ ಕುಟುಂಬಗಳಿಗೆ ಇದೀಗ ಕೆಲಸವೂ ಇಲ್ಲವಾಗಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ. ಇದರೊಂದಿಗೆ ಸ್ವಸಹಾಯ ಸಂಘಗಳು, ಮೈಕ್ರೋಫೈನಾನ್ಸ್‍ನಿಂದ ಪಡೆದ ಸಾಲವನ್ನು ಮನ್ನಾ ಮಾಡುವಂತಾಗಬೇಕು. ತುರ್ತು ಪರಿಹಾರದ 3800 ರೂ.ಗಳನ್ನು ಎಲ್ಲಾ ಸಂತ್ರಸ್ತರಿಗೂ ವಿತರಿಸುವಂತಾಗಬೇಕು ಎಂದು ಆಗ್ರಹಿಸಿದರು.

ಪಿ.ಎ.ಯೂಸುಫ್ ಅವರು ಮಾತನಾಡಿ ಕೊಂಡಂಗೇರಿ ಗ್ರಾಮದ ಸುಮಾರು 80ಕ್ಕೂ ಅಧಿಕ ಕುಟುಂಬಗಳು ಕಾವೇರಿ ನದಿ ದಂಡೆಯಲ್ಲಿ ವಾಸಿಸುತ್ತಿದ್ದು, ಅವರನ್ನು ಅಲ್ಲಿಂದ ಸ್ಥಳಾಂತರಿಲು ಕ್ರಮ ಕೈಗೊಳ್ಳಬೇಕು. ಆನೆ ಹಾವಳಿಯಿಂದ ಗ್ರಾಮಸ್ಥರು ಜೀವನ ನಡೆಸುವುದೇ ಕಷ್ಟವಾಗಿದ್ದು, ಕಂದಾಯ ಇಲಾಖೆ ಸಣ್ಣ ಹಿಡುವಳಿದಾರರಿಗೆ ಪ್ರಮಾಣ ಪತ್ರಗಳನ್ನು ನೀಡದಿರುವುದರಿಂದ ಸಾಲ ಪಡೆಯುವುದಕ್ಕೂ ತೊಂದರೆಯಾಗುತ್ತಿದೆ ಎಂದು ನುಡಿದರು.

ಜಿಲ್ಲಾ ಹೊಟೇಲ್, ರೆಸಾರ್ಟ್ ಮತ್ತು ರೆಸ್ಟೋರೆಂಟ್ ಮಾಲಕರ ಸಂಘದ ಅಧ್ಯಕ್ಷ ಬಿ.ಆರ್. ನಾಗೇಂದ್ರಪ್ರಸಾದ್ ಅವರು, ಪ್ರಕೃತಿ ವಿಕೋಪದಿಂದಾಗಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ನೆಲಕಚ್ಚಿದ್ದು, ಅದರ ಪುನಶ್ಚೇತನಕ್ಕೆ ಸರಕಾರ ಪ್ರವಾಸೋದ್ಯಮ ಇಲಾಖೆ ಮೂಲಕ ಮುಂದಾಗಬೇಕು.ಜಿಎಸ್‍ಟಿಗೆ ಆರು ತಿಂಗಳವರೆಗೆ ರಿಯಾಯಿತಿ ನೀಡಬೇಕು. ಸಾಲ ಮರುಪಾವತಿಗೂ 6 ತಿಂಗಳ ರಜೆ ಘೋಷಿಸಬೇಕು ಎಂದರು.

ದೀರ್ಘಾವಧಿ ಸಾಲ

ಕಾಫಿ ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ ಕೆ.ಕೆ. ವಿಶ್ವನಾಥ್, ವಿಶೇಷ ಪ್ಯಾಕೇಜ್‍ಗೆ ಮನವಿ ಮಾಡಿದರಲ್ಲದೆ, ಶೇ.50ರಷ್ಟು ಬೆಳೆ ನಾಶವಾಗಿರುವುದರಿಂದ ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡಬೇಕು, ಅಲ್ಪಾವಧಿ ಸಾಲವನ್ನು ದೀರ್ಘಾವಧಿ ಸಾಲವನ್ನಾಗಿ ಪರಿವರ್ತಿಸಬೇಕು, ಭೂಮಿ ಕಳೆದುಕೊಂಡವರಿಗೆ ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ಅಡಿ ನೀಡುವ ಪರಿಹಾರ ಅತ್ಯಲ್ಪವಾಗಿದ್ದು, ಇದನ್ನು ಹೆಚ್ಚಿಸಲು ಕ್ರಮವಹಿಸಬೇಕು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಂಟಿಯಾಗಿ ಟಾಸ್ಕ್‍ಫೋರ್ಸ್ ರಚಿಸಿ ಬೆಳೆಗಾರರ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.

ಕೊಡಗು ಸಂತ್ರಸ್ತರ ಸಮಿತಿ ಪರವಾಗಿ ಮಾತನಾಡಿದ ಎಂ.ಪಿ.ಮನುಮೇದಪ್ಪ ಅವರು ವಿಶೇಷ ಪ್ಯಾಕೇಜ್ ಘೋಷಣೆಯೊಂದಿಗೆ ಹಾರಂಗಿ ಜಲಾಶಯದ ಹೂಳೆತ್ತಲು ಕ್ರಮವಹಿಸಬೇಕು ಎಂದು ಕೋರಿದರು

ಕೆ.ಆರ್.ಸುರೇಶ್, ದಕ್ಷಿಣ ಕೊಡಗಿನಲ್ಲೂ ಅತಿವೃಷ್ಟಿಯಿಂದಾಗಿ ಸಂಪೂರ್ಣ ಬೆಳೆ ಹಾನಿಗೊಳಗಾಗಿದ್ದು, ಬೆಳೆಗಾರರ ಸಾಲ ಮರು ಪಾವತಿಗೆ ಮೂರು ವರ್ಷಗಳ ರಜೆ ಘೋಷಿಸಬೇಕು. ಸಹಕಾರ ಸಂಘಗಳಲ್ಲಿನ ಸಾಲ ಮನ್ನಾದ ನಿಯಮಾವಳಿಗಳನ್ನು ಸಡಿಲ ಮಾಡಬೇಕು ಎಂದು ಒತ್ತಾಯಿಸಿದರು. ಡಾ. ಮನೋಜ್ ಬೋಪಯ್ಯ, ಚೇಂಬರ್ ಜಿಲ್ಲಾ ಕಾರ್ಯದರ್ಶಿ ಮೊಂತಿ ಗಣೇಶ್, ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ,  ಬಿ.ಎಂ. ಎಲ್ಲಪ್ಪ ಮತ್ತಿತರರೂ ವಿವಿಧ ವಿಷಯಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದರು.

ಭೂದಾನ ಮಾಡಿದ ರಂಜನ್ ಚೆಂಗಪ್ಪ

ಪ್ರಕೃತಿ ವಿಕೋಪದಲ್ಲಿ ಜೀವ ಕಳೆದುಕೊಂಡಿರುವ ಒಂದು ಕುಟುಂಬಕ್ಕೆ ತನ್ನಲ್ಲಿರುವ ಎರಡು ಎಕರೆ ತೋಟ ಹಾಗೂ ಮನೆಯನ್ನು ನಿರ್ಮಿಸಿಕೊಡುವುದಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಾಳೆಲೆಯ ರಂಜನ್ ಚೆಂಗಪ್ಪ ಇದೇ ಸಂದರ್ಭ ಘೋಷಿಸಿದರು.

ಪ್ರಕೃತಿ ವಿಕೋಪದಲ್ಲಿ ಸತ್ತವರ ಕುಟುಂಬದ ಒಬ್ಬರಿಗೆ ತಕ್ಷಣ ಉದ್ಯೋಗ ನೀಡಬೇಕು. ಬಾಡಿಗೆ ಮನೆಯ ಬಾಡಿಗೆಯನ್ನು ಸರಕಾರ ಪಾವತಿಸಬೇಕು, ಪ್ರಕೃತಿ ವಿಕೋಪದಲ್ಲಿ ಜಾನುವಾರುಗಳನ್ನು ಕಳೆದುಕೊಂಡವರಿಗೆ ಜಾನುವಾರಿನ ಮೌಲ್ಯದಷ್ಟೇ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News