‘ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ’ ರಚನೆ: ಸಿಎಂ ಕುಮಾರಸ್ವಾಮಿ ಭರವಸೆ

Update: 2018-10-17 12:27 GMT

ಮಡಿಕೇರಿ, ಅ.17: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಹೊಸ ಬದುಕನ್ನು ಕಟ್ಟಿ ಕೊಡಲು ಮತ್ತು ಹಾನಿಗೀಡಾದ ಪ್ರದೇಶಗಳನ್ನು ಪುನರ್ ನಿರ್ಮಿಸಲು ಅನುಕೂಲವಾಗುವಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ‘ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ’ ರಚನೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ನಗರದ ಗಾಂಧಿ ಮೈದಾನದಲ್ಲಿ ನಡೆದ ‘ಸಂತ್ರಸ್ತರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿಗಳು ಸಂತ್ರಸ್ತರೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದರು. ಮಳೆ ಹಾನಿಯಿಂದ ಕೊಡಗು ಜಿಲ್ಲೆಯಲ್ಲಿ ಅನೇಕ ಕಷ್ಟ ನಷ್ಟಗಳು ಸಂಭವಿಸಿದ್ದು, ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬುವುದರೊಂದಿಗೆ ಶಾಶ್ವತ ಪರಿಹಾರವನ್ನು ದೊರಕಿಸಿಕೊಡುವುದು ಮೈತ್ರಿ ಸರ್ಕಾರದ ಜವಾಬ್ದಾರಿಯಾಗಿದೆ ಎಂದರು. ಈ ನಿಟ್ಟಿನಲ್ಲಿ ಈಗಾಗಲೆ ಕಾರ್ಯೋನ್ಮುಖರಾಗಿದ್ದು, ಮಳೆ ಹಾನಿ ಪ್ರದೇಶಗಳ ಪುನರ್ ನಿರ್ಮಾಣಕ್ಕೆ ಪ್ರಾಧಿಕಾರ ರಚಿಸಬೇಕೆನ್ನುವ ಸಲಹೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳಿಂದ ಕೇಳಿ ಬಂದಿದೆ. ಈ ಬೇಡಿಕೆಯ ಬಗ್ಗೆ ಗಮನ ಹರಿಸಲಾಗಿದ್ದು, ಪ್ರಾಧಿಕಾರ ರಚನೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕುಮಾರಸ್ವಾಮಿ ತಿಳಿಸಿದರು.

ಮನೆ ಕಳೆದುಕೊಂಡವರಿಗೆ ತಲಾ 10 ಲಕ್ಷ ರೂ.ಗಳಲ್ಲಿ ಹೊಸ ಮನೆ ನಿರ್ಮಿಸಿಕೊಡುವಂತೆ ಜಿಲ್ಲೆಯ ಶಾಸಕರು ಮನವಿ ಮಾಡಿದ್ದಾರೆ. ಈಗಾಗಲೆ ಮನೆ ಕಳೆದುಕೊಂಡವರಿಗೆ ತಲಾ 1.03 ಲಕ್ಷ ರೂ.ವನ್ನು ವಿತರಿಸಲಾಗಿದೆ. ಇದರೊಂದಿಗೆ ರೂ. 50 ಸಾವಿರವನ್ನು ಸಾಮಾಗ್ರಿಗಳ ಹಾನಿಗಾಗಿ ನೀಡಲಾಗುತ್ತಿದೆ. ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ಹೊಸದಾಗಿ ಮನೆ ನಿರ್ಮಿಸಿಕೊಡಲು ಏಳೆಂಟು ತಿಂಗಳ ಕಾಲಾವಕಾಶ ಬೇಕಾಗಿರುವುದರಿಂದ ಅಲ್ಲಿಯವರೆಗೆ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಲು ತಿಂಗಳಿಗೆ 10 ಸಾವಿರ ರೂ.ಗಳಂತೆ ಅಂದಾಜು 1 ಲಕ್ಷ ನೀಡಲಾಗುವುದು. ಇದರೊಂದಿಗೆ ಹೊಸ ಮನೆ ನಿರ್ಮಾಣಕ್ಕೆ 6 ಲಕ್ಷ ರೂ.ಗಳನ್ನು ವ್ಯಯ ಮಾಡಲಾಗುತ್ತದೆ. ಹೀಗೆ ಒಟ್ಟು 8.53 ಲಕ್ಷ ರೂ.ಗಳಲ್ಲಿ ನಿರಾಶ್ರಿತರಿಗಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ಬ್ಯಾಂಕ್ ಖಾತೆಗೆ ರೂ.50 ಸಾವಿರ

ಸಂಕಷ್ಟದಲ್ಲಿರುವ ಜನರ ಬದುಕಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಉದ್ದೇಶದಿಂದ ಮಾನವೀಯ ನೆಲೆಗಟ್ಟಿನಲ್ಲಿ ಎನ್‍ಡಿಆರ್‍ಎಫ್ ನಿಯಮವನ್ನು ಬದಿಗೊತ್ತಿ ತಲಾ 50 ಸಾವಿರ ರೂ.ಗಳಂತೆ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಲು ಆದೇಶಿಸಲಾಗಿದೆ. ಈಗಾಗಲೆ ಇದಕ್ಕಾಗಿ 6 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಮುಂದಿನ ಮೂರು, ನಾಲ್ಕು ದಿನಗಳಲ್ಲಿ ಸಂತ್ರಸ್ತರ ಖಾತೆಗಳಿಗೆ ತಲಾ 50 ಸಾವಿರ ರೂ. ಜಮೆ ಆಗಲಿದೆಯೆಂದು ಮುಖ್ಯಮಂತ್ರಿಗಳು ತಿಳಿಸಿದರು. ಸರ್ಕಾರ ಮನೆ ನಿರ್ಮಿಸಿಕೊಡಲು 6 ಲಕ್ಷ ರೂ.ಗಳನ್ನು ಖರ್ಚು ಮಾಡುತ್ತಿದ್ದು, ಈ ಹಣಕ್ಕೆ ಮತ್ತಷ್ಟು ಹಣವನ್ನು ಸೇರಿಸಿ ಫಲಾನುಭವಿಗಳೆ ಮನೆ ಕಟ್ಟಿಕೊಳ್ಳಲು ಮುಂದಾದರೆ ಅದಕ್ಕೆ ಅವಕಾಶ ನೀಡಲು ಚಿಂತನೆ ನಡೆಸಿರುವುದಾಗಿ ಹೇಳಿದರು.

ಸಂಕಷ್ಟದಲ್ಲಿರುವ ಯಾವುದೇ ಕುಟುಂಬ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಜೀವನಕ್ಕೊಂದು ಭದ್ರತೆ ನೀಡಲು ಸರ್ಕಾರ ಬದ್ಧವಾಗಿದ್ದು, ಅತಿವೃಷ್ಟಿ ಹಾನಿ ಸಂದರ್ಭದ ಹಾನಿ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ ಎಂದರು.

ಸಾಲಮನ್ನಾದ ಮೂಲಕ ಸಹಕಾರ

ಮಳೆ ಹಾನಿಗೆ ಸಿಲುಕಿ ಜಿಲ್ಲೆಯ ಕಾಫಿ ಬೆಳೆಗಾರರು, ಕೃಷಿಕರು ಕೂಡ ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸಿದ್ದಾರೆ. ಎನ್‍ಡಿಆರ್‍ಎಫ್ ನಿಯಮದಡಿ 1 ಹೆಕ್ಟೇರ್ ಪ್ರದೇಶಕ್ಕೆ ಕೇವಲ 37 ಸಾವಿರ ರೂ. ಪರಿಹಾರ ನೀಡಲು ಅವಕಾಶವಿದೆ. ಇಷ್ಟು ಹಣದಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವೆ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ಈಗಾಗಲೇ ಘೋಷಣೆಯಾಗಿರುವ ಸಾಲಮನ್ನಾ ಸೌಲಭ್ಯದ ಮೂಲಕ ಬೆಳೆಗಾರರಿಗೆ ಹಾಗೂ ಕೃಷಿಕರಿಗೆ ನ್ಯಾಯ  ಒದಗಿಸುವುದಾಗಿ ಭರವಸೆ ನೀಡಿದರು.

ಬ್ಯಾಂಕ್‍ಗಳ ಅಸಹಕಾರ

ರಾಷ್ಟ್ರೀಕೃತ ಬ್ಯಾಂಕ್‍ಗಳ ಸಹಕಾರ ಇದ್ದಿದ್ದರೆ ತಾವು ಈಗಾಗಲೆ ಘೋಷಿಸಿರುವ ಸಾಲಮನ್ನಾ ಪ್ರಕ್ರಿಯೆ ಪೂರ್ಣಗೊಂಡು ರೈತರಿಗೆ ಅನುಕೂಲವಾಗುತ್ತಿತ್ತು. ಆದರೆ, ರೈತರು ಮಾಡಿರುವ ಸಾಲದ ಬಗ್ಗೆ ಮಾಹಿತಿ ನೀಡಿ ಎಂದು ರಾಷ್ಟ್ರೀಕೃತ ಬ್ಯಾಂಕ್‍ಗಳ ಮುಖ್ಯಸ್ಥರಿಗೆ ತಿಳಿಸಿ 2 ತಿಂಗಳು ಕಳೆದಿದ್ದರೂ ಇಲ್ಲಿಯವರೆಗೆ ಮಾಹಿತಿ ನೀಡಿಲ್ಲ. ಸಾಲಗಾರರಿಗೆ ಬ್ಯಾಂಕ್‍ಗಳು ತಿಳುವಳಿಕೆ ಪತ್ರ ನೀಡುವ ಕೆಲಸ ಮಾಡುತ್ತಿವೆಯಷ್ಟೆ. 2 ಲಕ್ಷ ರೂ.ಗಳವರೆಗಿನ ಸಾಲಮನ್ನಾಕ್ಕೆ ಕ್ಯಾಬಿನೆಟ್‍ನಲ್ಲಿ ಅನುಮೋದನೆ ಪಡೆಯಲಾಗಿದೆ. ಆದರೂ, ಬ್ಯಾಂಕ್ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದರು.

ಕೊಡಗಿನ ಜನ ಸಂಕಷ್ಟಕ್ಕೆ ಸಿಲುಕಿದ್ದರು, ಇತರ ಭಾಗಗಳಂತೆ ಇಲ್ಲಿನ ರೈತರು ಆತ್ಮಹತ್ಯೆಗೆ ಶರಣಾಗದಿರುವುದು ಸಮಾಧಾನ ತಂದಿದೆ ಎಂದು ಹೇಳಿದ ಮುಖ್ಯಮಂತ್ರಿಗಳು, ಪರಿಹಾರ ಕಾರ್ಯಗಳ ಪ್ರತಿಯೊಂದು ಹಂತವನ್ನು ಖುದ್ದು ಪರಿಶೀಲಿಸುವುದಾಗಿ ತಿಳಿಸಿದರು. ಪ್ರವಾಸೋದ್ಯಮದ ಚೇತರಿಕೆಗಾಗಿ ಸಹಕಾರ ನೀಡುವುದಾಗಿ ಭರವಸೆ ನೀಡಿದ ಕುಮಾರಸ್ವಾಮಿ, ಹೊಟೇಲ್ ಉದ್ಯಮ ಕೂಡ ಸಂಕಷ್ಟಕ್ಕೆ ಸಿಲುಕಿರುವುದರಿಂದ ಪ್ರವಾಸೋದ್ಯಮಕ್ಕೆ ಪೂರಕವಾದ ದಸರಾ ಆಚರಣೆ ಮಡಿಕೇರಿಯಲ್ಲಿ ನಡೆಯಲಿ. ಎಲ್ಲರೂ ಒಗ್ಗೂಡಿ ಹಬ್ಬ ಆಚರಿಸಿ ಎಂದು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News