ಮೂಡಿಗೆರೆಯಲ್ಲಿ ಭಾರೀ ಗಾಳಿ-ಮಳೆ: ಜನಜೀವನ ಅಸ್ತವ್ಯಸ್ತ

Update: 2018-10-17 12:51 GMT

ಮೂಡಿಗೆರೆ, ಅ.17: ಪಟ್ಟಣದಲ್ಲಿ ಮಂಗಳವಾರ ಸಂಜೆ ಭಾರಿ ಗಾಳಿ ಸಹಿತ ಮಳೆಯಾಗಿದ್ದರಿಂದ ಪಟ್ಟಣದ ಜನಜೀವನ ಬುಧವಾರವೂ ಅಸ್ತವ್ಯಸ್ತಗೊಂಡಿತ್ತು.

ದಿಢೀರ್ ಎಂಬಂತೆ ಸುಮಾರು ಅರ್ಧ ಗಂಟೆ ಸುರಿದ ಗಾಳಿ ಮಳೆಗೆ ಭಾರೀ ಪ್ರಮಾಣದಲ್ಲಿ ನೀರು ಚರಂಡಿ ತುಂಬಿಕೊಂಡು ರಸ್ತೆಯಲ್ಲಿಯೇ ಹರಿದಿದೆ. ರಸ್ತೆ ಬದಿಯಲ್ಲಿದ್ದ ಕಲ್ಲು ಮಣ್ಣುಗಳ ಸಹಿತ ಅಂಗಡಿಗಳ ಹೊರ ಭಾಗದಲ್ಲಿಟ್ಟಿದ್ದ ಕೆಲ ಸಾಮಾಗ್ರಿಗಳು ರಭಸದಿಂದ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗಿದೆ. ವಾಹನ ಸವಾರರಿಗೆ ದಾರಿ ಕಾಣದೇ ಅಲ್ಲಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ಮಳೆ ಬಿಡುವವರೆಗೂ ಕಾಯಬೇಕಾಯಿತು. ಪಟ್ಟಣದ ಸನ್ನಿಧಿ ಲೇಔಟ್‍ನ ಮುಖ್ಯರಸ್ತೆಯ ಡಾಂತಬಾರು ಮತ್ತು ಜೆಲ್ಲಿ ಭಾಗಶಃ ಕೊಚ್ಚಿಕೊಂಡು ಹೋಗಿದೆ. ಕೆ.ಎಂ.ರಸ್ತೆಯಲ್ಲಿ ದ್ವಿಚಕ್ರ ವಾಹನ ಮಾರಾಟ ಮೇಳ ನಡೆಸಲು ಹಾಕಿದ್ದ ಶಾಮಿಯಾನ ಗಾಳಿಯ ರಭಸಕ್ಕೆ ಕುಸಿದು ಬಿದ್ದಿದೆ. ಪಟ್ಟಣದ ಬಹುತೇಕ ಅಂಗಡಿಗಳ ನಾಮಪಲಕಗಳು ಗಾಳಿಯಲ್ಲಿ ಹಾರಿ ಹೋಗಿದ್ದು, ಅಂಗಡಿ ಮಾಲಕರು ತಮ್ಮ ತಮ್ಮ ನಾಮಪಲಕವನ್ನು ಹುಡುಕಲು ಹರಸಾಹಸಪಟ್ಟರು. 

ಕೆಲ ವಾಸದ ಮನೆ ಮೇಲ್ಚಾವಣೆಯ ಹಂಚುಗಳು ಹಾರಿ ಹೋಗಿವೆ. ಪಟ್ಟಣದ ಕೆ.ಎಂ.ರಸ್ತೆಯ ಕುರಿ ಮಾಂಸದ ಮಾರುಕಟ್ಟೆ ಕಟ್ಟಡದ ಮೇಲ್ಚಾವಣಿ ಹಾರಿ ಹೋಗಿದೆ. ಲೋಕವಳ್ಳಿ ಸಹಿತ ಅನೇಕ ಕಡೆಗಳಲ್ಲಿ ಮರಗಳ ರೆಂಬೆಗಳು ವಿದ್ಯುತ್ ತಂತಿ ಮೇಲೆ ಬಿದ್ದಿದ್ದರಿಂದ ಮಂಗಳವಾರ ರಾತ್ರಿ ಬಹುತೇಕ ಕಡೆ ವಿದ್ಯುತ್ ಕಡಿತಗೊಂಡಿತ್ತು. ಕಳೆದ 5 ತಿಂಗಳಿನಿಂದ ಈ ಭಾಗದಲ್ಲಿ ಬಾರಿ ಪ್ರಮಾಣದ ಮಳೆಯಾಗುತ್ತಿದ್ದರೂ ದೊಡ್ಡ ಪ್ರಮಾಣದಲ್ಲಿ ಅವಘಡಗಳು ಸಂಭವಿಸಿರಲಿಲ್ಲ. ಮಂಗಳವಾರ ದಿಢೀರ್ ಸುರಿದ ಗಾಳಿ ಮಳೆಗೆ ಪಟ್ಟಣದಲ್ಲಿ ಅನೇಕ ಕಡೆಯಲ್ಲಿ ಭಾರಿ ಪ್ರಮಾಣದ ಹಾನಿಯಾಗಿದೆ. 

ಲೋಕವಳ್ಳಿ ರಸ್ತೆಯಲ್ಲಿ ವಿದ್ಯುತ್ ತಂತಿ ಸೇರಿದಂತೆ ಬಿಳಗುಳ ಗ್ರಾಮದ ಯಾದವ ಎಂಬುವರ ಆಟೋ ರಿಕ್ಷಾದ ಮೇಲೆ ಮರದ ರೆಂಬೆ ಮುರಿದು ಬಿದ್ದ ಪರಿಣಾಮ ಆಟೋ ಸಂಪೂರ್ಣ ಜಖಂಗೊಂಡಿದೆ. ವಿದ್ಯುತ್ ತಂತಿ ತುಂಡಾಗಿದ್ದರಿಂದ ಲೋಕವಳ್ಳಿ ಗ್ರಾಮಕ್ಕೆ ಇದೂವರೆಗೂ ವಿದ್ಯುತ್ ಸಂಪರ್ಕ ಒದಗಿಸಿಲ್ಲ. ವಿದ್ಯುತ್ ಸಂಪರ್ಕ ಸರಿಪಡಿಸದಿದ್ದರೆ ಮೆಸ್ಕಾಂ ಇಲಾಖೆ ಎದುರು ಪ್ರತಿಭಟನೆ ನಡೆಸುವುದಾಗಿ ಲೋಕವಳ್ಳಿ ರಮೇಶ್ ಬುಧವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News