ಆದಿವಾಸಿ ಕುಟುಂಬಗಳಿಗೆ ಮೂಲ ಸೌಲಭ್ಯ ನೀಡದ ಚಿಕ್ಕಮಗಳೂರು ಜಿಲ್ಲಾಡಳಿತ: ಆರೋಪ

Update: 2018-10-17 12:55 GMT
ವಿಶ್ವ ಹಾರಲಗದ್ದೆ

ಮೂಡಿಗೆರೆ, ಅ.17: ಕಳೆದ 18 ವರ್ಷದ ಹಿಂದೆ ಗುಡಿಸಲು ನಿರ್ಮಿಸಿಕೊಂಡು ವಾಸವಿರುವ ಆದಿವಾಸಿ 30 ಕುಟುಂಬದವರಿಗೆ ಹಕ್ಕುಪತ್ರ, ವಾಸದ ಮನೆ ಮತ್ತಿತರೆ ಮೂಲ ಸೌಲಭ್ಯ ನೀಡದೇ ಜಿಲ್ಲಾಡಳಿತ ವಂಚಿಸಿದೆ ಎಂದು ಆದಿವಾಸಿ ರಕ್ಷಣಾ ಪರಿಷತ್ ಜಿಲ್ಲಾ ಮುಖಂಡ ವಿಶ್ವ ಹಾರಲಗದ್ದೆ ದೂರಿದ್ದಾರೆ.

ಬುಧವಾರ ಹೇಳಿಕೆ ನೀಡಿರುವ ಅವರು, ಹಾಂದಿ ಗ್ರಾಮದ ಬಾಳೆಹಳ್ಳಿ ಕೃಷ್ಣಪ್ಪ ಬಡಾವಣೆಯ ಹಾಂದಿ ಗ್ರಾಮದ ಸರ್ವೆ ನಂ 424 ಮತ್ತು 448 ರಲ್ಲಿ 23 ಎಕರೆ ಬಂಜರು ಭೂಮಿ ಇದೆ. ಅದರ ಪೈಕಿ 1ಎಕರೆ ಜಾಗದಲ್ಲಿ ಆದಿವಾಸಿ 30 ಕುಟುಂಬಗಳು ಗುಡಿಸಲು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. 10 ವರ್ಷದ ಹಿಂದೆ ಚಿಕ್ಕಮಗಳೂರು ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳಿಗೆ ನಿವೇಶನ ಮಂಜೂರು ಮಾಡಿಕೊಡುವಂತೆ ಅರ್ಜಿ ಸಲ್ಲಿಸಲಾಗಿದೆ. ಆದರೂ ಆದಿವಾಸಿಗಳನ್ನು ನಿರ್ಲಕ್ಷಿಸುವ ಸಲುವಾಗಿ ನಿವೇಶನ ಮಂಜೂರುಗೊಳಿಸಲು ಹಿಂದೇಟು ಹಾಕುತ್ತಿದ್ದಾರೆಂದು ಆರೋಪಿಸಿದ್ದಾರೆ.

ಬಡಾವಣೆಯಲ್ಲಿ ವಾಸವಿರುವ 30 ಕುಟುಂಬದ ಆದಿವಾಸಿಗಳನ್ನು ಚುನಾವಣೆ ವೇಳೆ ಓಟಿಗಾಗಿ ಮಾತ್ರ ಬಳಸಿಕೊಳ್ಳುತ್ತಾರೆ. ಬಳಿಕ ತಿರುಗಿಯೇ ನೋಡುತ್ತಿಲ್ಲ. ಕೆಲ ಜನಪ್ರತಿನಿಧಿಗಳು ಹಾಗೂ ಐಟಿಡಿಪಿ ಅಧಿಕಾರಿಗಳು ಬಡಾವಣೆಗೆ ಭೇಟಿ ನೀಡಿ, ನಿವೇಶನ ಹಕ್ಕುಪತ್ರ, ವಾಸದ ಮನೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಮತ್ತು ಶೌಚಾಲಯ ಒದಗಿಸಿಕೊಡುವ ಭರವಸೆ ನೀಡಿ ಹೋಗಿದ್ದಾರೆ. ಮತ್ತೆ ಬಡಾವಣೆಯತ್ತ ತಿರುಗಿಯೂ ನೋಡಿಲ್ಲ ಎಂದು ದೂರಿದ್ದಾರೆ.

ಕೆಳಗೂರು ಗ್ರಾ.ಪಂ.ಯಲ್ಲೂ ಹಕ್ಕುಪತ್ರ ನೀಡುವಂತೆ ನಿರ್ಣಯ ಕೈಗೊಂಡು ಜಿಲ್ಲಾಡಳಿತಕ್ಕೆ ಶಿಫಾರಸ್ಸು ಮಾಡಲಾಗಿದೆ. ಬಡಾವಣೆ ನಿವಾಸಿಗಳ ಗುಡಿಸಲಿರುವ 1 ಎಕರೆ ಜಾಗವನ್ನು ಡೀಮ್ಡ್ ಫಾರೆಸ್ಟ್ ಗೆ ಸೇರಿದ್ದೆಂದು ತಿಳಿಸಿ, ಹಕ್ಕುಪತ್ರ ನೀಡಲು ಸಾಧ್ಯವಿಲ್ಲವೆಂದು ಅಧಿಕಾರಿಗಳು ಹೇಳುತ್ತಾರೆ. ಅದೇ ಸರ್ವೆ ನಂ.ನಲ್ಲಿ ಬಡಾವಣೆಯ 1 ಎಕರೆ ಹೊರತುಪಡಿಸಿ, ಉಳಿದ 22 ಎಕರೆ ಬಂಜರು ಭೂಮಿಯನ್ನು ಶ್ರೀಮಂತರು ಒತ್ತುವರಿ ಮಾಡಿಕೊಂಡು ಕಾಫಿ ತೋಟ ಮಾಡಿಕೊಂಡಿದ್ದಾರೆ. ಅವರು ಒತ್ತುವರಿ ಮಾಡಿಕೊಂಡಿರುವ ಜಾಗ ಡೀಮ್ಡ್‍ಗೆ ಸೇರುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. 

ಜಿಲ್ಲಾಡಳಿತ ಕೂಡಲೇ ಈ ಬಡಾವಣೆ ವಾಸಿಗಳಿಗೆ ಹಕ್ಕುಪತ್ರ, ಮನೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯ ಒದಗಿಸಬೇಕು. ಇಲ್ಲದ ಸಬೂಬು ಹೇಳಿ ಜಿಲ್ಲಾಡಳಿತ ನುಣಿಚಿಕೊಳ್ಳುವ ಪ್ರಯತ್ನ ಮಾಡಿದರೆ, ಆದಿವಾಸಿ ರಕ್ಷಣಾ ಪರಿಷತ್ತಿನಿಂದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News