ಚುನಾವಣಾ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

Update: 2018-10-17 13:36 GMT

ಬಾಗಲಕೋಟೆ, ಅ.17: ನನ್ನ ಸಾರ್ವಜನಿಕ ಜೀವನದಲ್ಲಿ 13 ಚುನಾವಣೆಗಳನ್ನು ಎದುರಿಸಿದ್ದೇನೆ. ಎಂಟು ಬಾರಿ ಗೆಲುವು ಸಾಧಿಸಿದ್ದೇನೆ. ಐದು ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ಪೂರೈಸಿದ್ದೇನೆ. ಇನ್ನು ಮುಂದೆ ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಬುಧವಾರ ಬಾದಾಮಿ ತಾಲೂಕಿನ ಗುಳೇದಗುಡ್ಡ ಪಟ್ಟಣದಲ್ಲಿ ನೂತನ ಪುರಸಭಾ ಸದಸ್ಯರಿಗೆ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾನು ಬಾದಾಮಿ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆದುದರಿಂದ, ನಾನು ಉತ್ತರ ಕರ್ನಾಟಕದವನೆ. ಈಗಾಗಲೇ ಆರು ತಿಂಗಳು ಕಳೆದಿದೆ. ಇನ್ನುಳಿದ ನಾಲ್ಕೂವರೆ ವರ್ಷ ಇಲ್ಲೇ ಇರುತ್ತೇನೆ. ಈ ಕ್ಷೇತ್ರದ ಅಭಿವೃದ್ಧಿ ಮಾಡುವುದು ನನ್ನ ಕರ್ತವ್ಯ. ಮತ್ತೆ ಯಾವುದೇ ಚುನಾವಣೆಯಲ್ಲಿ ನಿಲ್ಲುವುದಿಲ್ಲ. ಈಗ ನನಗೆ ವಯಸ್ಸು 71 ವರ್ಷ ಆಯಿತು ಎಂದು ಅವರು ಹೇಳಿದರು.

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯವಿಲ್ಲ. ಬಾದಾಮಿ ಕ್ಷೇತ್ರದ ಜನತೆಯ ಋಣವನ್ನು ತೀರಿಸುವ ಕೆಲಸ ಮಾಡುತ್ತೇನೆ. ಅಭಿವೃದ್ಧಿ ಕೆಲಸಗಳನ್ನು ಮಾಡಲು ಚುನಾವಣೆಗೆ ನಿಲ್ಲಲೇಬೇಕೆಂದಿಲ್ಲ ಎನ್ನುವ ಮೂಲಕ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿದ್ದರೂ, ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುವ ಸೂಚನೆ ನೀಡಿದರು.

ಟಿಪ್ಪು ಜಯಂತಿ ಆಚರಣೆ ವಿಚಾರವಾಗಿ ಮಾತನಾಡಿದ ಅವರು, ಎದುರಾಳಿ ಯಾರೇ ಆಗಿರಲಿ, ಯುದ್ಧ ಮಾಡುವುದು ಕಾಯಕ. ಈ ಹಿಂದೆ ಯುದ್ಧದಲ್ಲಿ ಗೆಲ್ಲೋದು ಮಾತ್ರ ರಾಜಧರ್ಮವಾಗಿತ್ತು. ಆದರೆ, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ನ್ಯಾಯ ಒದಗಿಸುವುದು ರಾಜಧರ್ಮ. ಬಹಳ ಜನ ಇತಿಹಾಸವನ್ನು ಸರಿಯಾಗಿ ಅಧ್ಯಯನ ಮಾಡಿಲ್ಲ. ಆದುದರಿಂದಲೇ ಅನಗತ್ಯವಾಗಿ ಗೊಂದಲಗಳನ್ನು ಸೃಷ್ಟಿಸುತ್ತಾರೆ ಎಂದು ಬಿಜೆಪಿ ನಾಯಕರನ್ನು ಪರೋಕ್ಷವಾಗಿ ಟೀಕಿಸಿದರು.

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ತಮ್ಮನ್ನು ಹಲ್ಲಿಲ್ಲದ ಹಾವು ಎಂದು ಟೀಕಿಸಿದ್ದ ಸಂಸದೆ ಶೋಭಾ ಕರಂದ್ಲಾಜೆಗೆ ತಮ್ಮದೇ ಧಾಟಿಯಲ್ಲಿ ತಿರುಗೇಟು ನೀಡಿದರು. ಸಂಸದೆ ಶೋಭಾ ಕರಂದ್ಲಾಜೆಗೆ ಸಾಮಾನ್ಯ ತಿಳುವಳಿಕೆಯೂ ಇಲ್ಲ. ನಾನಂತೂ ಹಾವಲ್ಲ. ನಾನೊಬ್ಬ ಮನುಷ್ಯ. ಶೋಭಾ ಹಾವಿನ ಕುಟುಂಬಕ್ಕೆ ಸೇರಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಹಾವಿಗೆ ಹಲ್ಲು ಇರಲಿ, ಇಲ್ಲದಿರಲಿ ಹಾಲೆರೆಯಲೇ ಬೇಕು. ಹಾಲಿಗೂ ಹಾವಿಗೂ ಏನು ಸಂಬಂಧ ಎಂದು ಅವರು ಪ್ರಶ್ನಿಸಿದರು.

ಹಾಲು ಕುಡಿಯೋಕೆ ಹಲ್ಲು ಬೇಕಾ? ಶೋಭಾ ಕರಂದ್ಲಾಜೆ ಮಾತನಾಡುವಾಗ ಜವಾಬ್ದಾರಿಯಿಂದ ವರ್ತಿಸಲಿ. ಇನ್ನು ಮುಂದೆ ಅವರು ಈ ರೀತಿ ಹಗುರವಾಗಿ ಮಾತನಾಡುವುದನ್ನು ಬಿಡಲಿ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸುಳ್ಳು ಹೇಳುವುದು ಹೊಸ ವಿಚಾರವಲ್ಲ. ಅವರಿಗೆ ಸತ್ಯ ಹೇಳಿ ಗೊತ್ತಿಲ್ಲ. ಯಾವಾಗಲೂ ಸುಳ್ಳು ಹೇಳುತ್ತಿರುತ್ತಾರೆ. ಮಾಧ್ಯಮದವರು ಅವರನ್ನು ನಂಬುತ್ತಾರಲ್ಲ? ಯಡಿಯೂರಪ್ಪ ಬಳಿ ಯಾವ ಬಾಂಬು ಇಲ್ಲ. ಇದ್ದರೂ ಅದು ಠುಸ್ ಬಾಂಬ್ ಅಷ್ಟೇ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು. ರಾಜ್ಯದ ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಜೊತೆಗೂಡಿ ಪ್ರಚಾರ ಮಾಡುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅ.20ರಂದು ಉಭಯ ಪಕ್ಷಗಳ ಮುಖಂಡರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಎಲ್ಲ ವಿವರಗಳನ್ನು ನೀಡುತ್ತೇವೆ ಎಂದರು.

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ನಾವು ಗೌರವಿಸಬೇಕು ಎಂದರು. ಅಭಿನಂದನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಎಸ್.ಆರ್.ಪಾಟೀಲ್, ಆರ್.ಬಿ.ತಿಮ್ಮಾಪುರ, ಎಚ್.ವೈ.ಮೇಟಿ, ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಸೇರಿದಂತೆ ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News