ಮುಖ್ಯಮಂತ್ರಿ ಪರಿಹಾರ ನಿಧಿ ಕೊಡಗಿಗೆ ಮೀಸಲು: ಸಿಎಂ ಕುಮಾರಸ್ವಾಮಿ ಸ್ಪಷ್ಟನೆ

Update: 2018-10-17 13:40 GMT

ಮಡಿಕೇರಿ ಅ.17 : ಕೊಡಗಿನಲ್ಲಿ ಸಂಭವಿಸಿದ ಮಳೆಹಾನಿಯ ಪರಿಹಾರಕ್ಕಾಗಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ದಾನಿಗಳು ನೀಡಿರುವ ಹಣವನ್ನು ಯಾವುದೇ ಕಾರಣಕ್ಕೂ ಪರ್ಯಾಯ ವ್ಯವಸ್ಥೆಗಳಿಗೆ ಬಳಸಿಕೊಳ್ಳುವುದಿಲ್ಲವೆಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಕೊಡಗಿಗಾಗಿ ಬಂದಿರುವ ಎಲ್ಲಾ ಹಣವನ್ನು ಸಂತ್ರಸ್ತರ ಅಭ್ಯುದಯಕ್ಕಾಗಿ ಬಳಸಿಕೊಳ್ಳಲಾಗುವುದೆಂದು ಭರವಸೆ ನೀಡಿದರು.

ನಗರದಲ್ಲಿ ಸಂತ್ರಸ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿಗಳ ನಿಧಿಗೆ ಬಂದಿರುವ ಪರಿಹಾರದ ಹಣವನ್ನು ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸದಂತೆ ಅನೇಕರು ಮನವಿ ಮಾಡಿಕೊಂಡಿದ್ದಾರೆ. ಸರ್ಕಾರವು ಇದಕ್ಕೆ ಬದ್ಧವಾಗಿದ್ದು, ಒಂದು ಪೈಸೆಯೂ ದುರ್ಬಳಕೆಯಾಗದಂತೆ ನೋಡಿಕೊಳ್ಳಲಾಗುವುದು. ಈಗಾಗಲೆ ಮುಖ್ಯಂತ್ರಿಗಳ ಪರಿಹಾರ ನಿಧಿಗೆ 70-75 ಕೋಟಿ ಹಣ ಬಂದಿದ್ದು, ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತವನ್ನು ನೀಡುವುದಾಗಿ ಘೋಷಿಸಿದ್ದಾರೆ. ಈ ಮೊತ್ತ 102 ಕೋಟಿ ರೂ. ಆಗಲಿದ್ದು, ಸುಮಾರು 200 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದರು.

ಸಂತ್ರಸ್ತ ವಿದ್ಯಾರ್ಥಿಗಳ ಒಂದು ವರ್ಷದ ಶಿಕ್ಷಣದ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೆ ಭರಿಸಲಿದೆ. ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ತಮಗೆ ಶೈಕ್ಷಣಿಕ ಸಾಲದ ಅನಿವಾರ್ಯತೆ ಇದ್ದಲ್ಲಿ ಜಿಲ್ಲಾಧಿಕಾರಿಗಳಿಗೆ ದಾಖಲೆ ಸಲ್ಲಿಸಬಹುದೆಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News