ಕಳಸ: 14ನೇ ಶತಮಾನದ ಎರಡು ಶಾಸನಗಳು ಪತ್ತೆ

Update: 2018-10-17 13:45 GMT

ಚಿಕ್ಕಮಗಳೂರು, ಅ.17: ಜಿಲ್ಲೆಯ ಮೂಡಿಗೆರೆ ತಾಲೂಕು ಕಳಸ ಪಟ್ಟಣದ ಚಂದ್ರನಾಥ ಬಸದಿಯಲ್ಲಿ ಸಂಸ್ಕೃತ ಶಾಸನ ಮತ್ತು ಹಳೆಗನ್ನಡದ ಒಟ್ಟು ಎರಡು ಶಾಸನಗಳನ್ನು ಹವ್ಯಾಸಿ ಇತಿಹಾಸ ಸಂಶೋಧಕ ಎಚ್.ಆರ್.ಪಾಂಡುರಂಗ ಕಳಸ ಪತ್ತೆ ಹಚ್ಚಿದ್ದಾರೆ.  

ಜೈನದೊರೆಗಳಾದ ಸಾಂತನ-ಭೈರವರಸರು ಆಳಿದ ಮೂಡಿಗೆರೆ ತಾಲೂಕಿನ ಕಳಸ ಪಟ್ಟಣದ ಚಂದ್ರನಾಥ ಬಸದಿ ಇತಿಹಾಸ ಪ್ರಸಿದ್ಧ. ಇಲ್ಲಿರುವ ಶ್ರೀಮಹಾವೀರರ ಲೋಹವಿಗ್ರಹದ ಪ್ರಭಾವಳಿ ಹಿಂಭಾಗದಲ್ಲಿ ಶಾಸನವಿರುವುದು ಬೆಳಕಿಗೆ ಬಂದಿದೆ. ಸಂಸ್ಕೃತ ಭಾಷೆಯ ನಾಗರಿ ಲಿಪಿಯಲ್ಲಿರುವ ಸುಮಾರು 14ನೆಯ ಶತಮಾನದ ಲಿಪಿ ಸಾದೃಶ್ಯದ ನಾಲ್ಕುಸಾಲಿನ ಶಾಸನ ಇದಾಗಿದೆ.  

ಶ್ರೀಚಂದ್ರನಾಥ ಮೂಲಶಿಲಾವಿಗ್ರಹದ ಹಿಂಭಾಗ ಪೀಠದಲ್ಲಿದ್ದ ಅಪೂರ್ಣ ಶಾಸನದ ಪೂರ್ಣ ಭಾಗವನ್ನು ಶೋಧಿಸಲಾಗಿದೆ. ಕ್ರಿ.ಶ.1946ರಲ್ಲಿ ಮೈಸೂರು ಆರ್ಕಾಲಜಿಕಲ್ ರಿಪೋರ್ಟ್‍ನಲ್ಲಿ ವಿಜಯನಗರ ಕಾಲದ ಲಿಪಿ ಹೋಲುವ ಹಳೆಗನ್ನಡದ ಅಪೂರ್ವಶಾಸನದ ಐದೂವರೆ ಸಾಲುಗಳು ಪ್ರಕಟವಾಗಿದ್ದವು.  ಬಸದಿಯ ಇಂದ್ರರಾದ ಅಜಿತಕುಮಾರ್ ನೆರವಿನೊಂದಿಗೆ ಭೂಮಿಯಲ್ಲಿ ಸೇರಿದ್ದ ಉಳಿದ ಒಂದೂವರೆ ಸಾಲನ್ನು ಪಾಂಡುರಂಗ ಶೋದಿಸಿದ್ದಾರೆ. ಈ ಒಂದೂವರೆ ಸಾಲುಗಳಲ್ಲಿ ಇಡೀ ಶಾಸನದ ರಹಸ್ಯ ಅಡಗಿದೆ. ಬಹುಮುಖ್ಯಭಾಗ ಕಾಲಮಾನ ಸೂಚಕವಾಗಿದೆ.  

ಎರಡು ಶಾಸನಗಳ ಸಂಶೋಧನೆಯಿಂದ ಜೈನಧರ್ಮದ ಆಡಂಬರವಾದ ಕಳಸಸೀಮೆ ಇತಿಹಾಸಕ್ಕೆ ಸಂಬಂಧಿಸಿದಂತೆ ಹೊಸ ಸಂಗತಿಗಳು ಸೇರ್ಪಡೆಯಾಗಲಿವೆ ಎಂದಿರುವ ಹವ್ಯಾಸಿ ಇತಿಹಾಸ ಸಂಶೋಧಕ ಕೃಷಿ ಅಧಿಕಾರಿ ಪಾಂಡುರಂಗ, ತಾವು ಕಳಸ ಸಮಗ್ರ ಇತಿಹಾಸ ಗ್ರಂಥ ರಚನೆಯಲ್ಲೂ ತೊಡಗಿರುವುದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News