ಮಲೆನಾಡಿನ ಗಿರಿಜನರಿಗೆ ಮೂಲಸೌಕರ್ಯ ಕಲ್ಪಿಸಲು ಕ್ರಮ: ಶಾಸಕ ರಾಜೇಗೌಡ

Update: 2018-10-17 13:51 GMT

ಕೊಪ್ಪ, ಅ.17: ಶೇ.80ರಷ್ಟು ಭಾಗ ಗುಡ್ಡಗಾಡು ಪ್ರದೇಶ ಹೊಂದಿರುವ ಕೊಪ್ಪ ತಾಲೂಕಿನ ಗುಡ್ಡಗಾಡು ಪ್ರದೇಶಗಳ ಬಹುತೇಕ ಗ್ರಾಮಗಳು ಮೂಲಸೌಕರ್ಯಗಳಿಲ್ಲದೇ ಕಷ್ಟದ ಜೀವನ ನಡೆಸುತ್ತಿದ್ದಾರೆ ಎಂದು ಶಾಸಕ ಟಿ.ಡಿ. ರಾಜೇಗೌಡ ಅಭಿಪ್ರಾಯಪಟ್ಟರು.

ಇಲ್ಲಿನ ಗಿರಿಜನ ವಿವಿದೋದ್ದೇಶ ಸಹಕಾರಿ ಸಂಘ(ಲ್ಯಾಂಪ್ಸ್)ದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ಎಲ್ಲಾ ವರ್ಗದ ಜನರಿಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರಗಳ ಜವಾಬ್ದಾರಿ. ಎಲ್ಲರೂ ಸಮಾನಾಗಿ ಬದುಕಬೇಕೆಂಬ ಆಶಯ ಸರ್ಕಾರಗಳಿಗೆ ಇರಬೇಕು. ಅದನ್ನು ಕಡೆಗಣಿಸಿದಾಗ ಜನ ತಿರುಗಿ ಬೀಳುತ್ತಾರೆ. ಕೆಲವರು ಕಾನೂನುಬಾಹಿರ ಹೋರಾಟಕ್ಕೆ ಮುಂದಾಗುತ್ತಾರೆ. ಆದರೆ ಕಾನೂನಾತ್ಮಕ ಹೋರಾಟದಿಂದ ಮಾತ್ರ ನ್ಯಾಯ ಸಿಗುತ್ತದೆ ಎಂಬುದನ್ನು ಹೋರಾಟಗಾರರು ಅರಿತುಕೊಳ್ಳಬೇಕು. ಲ್ಯಾಂಪ್ಸ್ ಸಹಕಾರ ಸಂಘಗಳ ಸ್ಥಾಪನೆ, ವಸತಿ ಶಾಲೆಗಳ ನಿರ್ಮಾಣ ಮುಂತಾದ ಯೋಜನೆಗಳಿಂದ ಬುಡಕಟ್ಟು ವರ್ಗದ ಜನರ ಏಳಿಗೆಗೆ ಸಹಕಾರಿಯಾಗಿದೆ ಎಂದರು.

ಬುಡಕಟ್ಟು ಸಮುದಾಯದವರು ಅರಣ್ಯ, ಪರಿಸರ ರಕ್ಷಣೆ ಮಾಡಿಕೊಂಡು ಬದುಕು ಕಟ್ಟಿಕೊಂಡವರು. ಅರಣ್ಯ ಹಕ್ಕು ಕಾಯಿದೆಯಡಿ ತಿದ್ದುಪಡಿ ತಂದು ಭೂಮಿ, ನಿವೇಶನ ನೀಡಿದ್ದು, ವೈಯಕ್ತಿಕ ಉದ್ಯೋಗ ನೀಡಿ ಬುಡಕಟ್ಟು ಜನರಿಗೆ ಬದುಕಲು ಅವಕಾಶ ಕಲ್ಪಿಸಿದ್ದು ಕಾಂಗ್ರೆಸ್. ಆರಣ್ಯ ಬಿಟ್ಟು ಹೋಗುವವರಿಗೆ ಸ್ಥಳಾಂತರಕ್ಕೆ ಅವಕಾಶ ನೀಡಿ ನಾಲ್ಕು ಪಟ್ಟು ಪರಿಹಾರ ನೀಡಿದ್ದು ಯುಪಿಎ ಸರ್ಕಾರ. ಈ ರೀತಿಯ ಚಿಂತಕರು ಅಧಿಕಾರಕ್ಕೆ ಬರಬೇಕು. ಗಿರಿಜನ ಪ್ರದೇಶದ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಶ್ರಮಿಸುತ್ತೇನೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಲ್ಯಾಂಪ್ಸ್ ಸಹಕಾರ ಸಂಘದ ನಿರ್ದೇಶಕ ಮರಿಯಪ್ಪ ಶಾಸಕರಿಗೆ ಮನವಿ ಮಾಡಿ, ಇತ್ತೀಚೆಗೆ ಅರಣ್ಯ ಉತ್ಪನ್ನಗಳ ಬೆಲೆ ಕುಸಿತ ಆಗಿದ್ದು ಸರ್ಕಾರ ಬೆಂಬಲ ಬೆಲೆ ಕೊಡಬೇಕು, ಶಾಲಾ ವಿದ್ಯಾರ್ಥಿಗಳ ವಸತಿನಿಲಯಗಳಿಗೆ ಆಹಾರ ಸಾಮಾಗ್ರಿ ಪೂರೈಕೆಯ ಅವಕಾಶವನ್ನು ಲ್ಯಾಂಪ್ಸ್‍ಗೆ ಕೊಡಿಸಬೇಕು, ಲ್ಯಾಂಪ್ಸ್ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಕೊರತೆ ಉಂಟಾಗಿರುವ ರೂ. 10 ಲಕ್ಷ ಅನುದಾನವನ್ನು ಸರ್ಕಾರದಿಂದ ಕೊಡಿಸಬೇಕು, ಫಲಾನುಭವಿಗಳಿಗೆ ಅರಣ್ಯ ಹಕ್ಕು ಪತ್ರ ಕೊಡಿಸಬೇಕು, ಪಹಣಿ ನೀಡಿ ಸಾಲ ಪಡೆಯಲು ಅವಕಾಶ ಕಲ್ಪಿಸಬೇಕು, ಗಿರಿಜನ ಪ್ರದೇಶಗಳಲ್ಲಿ ಕೆಲವು ಕಡೆ ಇನ್ನೂ ವಿದ್ಯುತ್ ಸಂಪರ್ಕ, ರಸ್ತೆ ಸಂಪರ್ಕ ಆಗಿಲ್ಲ. ಹರಳಾನೆ, ಎಡಗುಂದ ಭಾಗದಲ್ಲಿ ತಾಂತ್ರಿಕ ಕಾರಣ ನೀಡಿ ವಿದ್ಯುದ್ದೀಕರಣ ಮಾಡುತ್ತಿಲ್ಲ ಇದರ ಬಗ್ಗೆ ಸರ್ಕಾರದ ಗಮನಕ್ಕೆ ತರಬೇಕು ಎಂದರು. ಮನವಿ ಸ್ವೀಕರಿಸಿದ ಶಾಸಕರು ಎಲ್ಲಾ ಸಮಸ್ಯೆಗಳಿಗೂ ಆದ್ಯತೆ ಮೇಲೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಇದೇ ಸಂದರ್ಭ ಶಾಸಕರು 13 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ, ಅತಿವೃಷ್ಠಿ ಹಾನಿಗೀಡಾದ ಕುಟುಂಬ ಸದಸ್ಯರೊಬ್ಬರಿಗೆ ರೂ.5000ದ ಸಹಾಯಧನ ಚೆಕ್ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಮಾಡಿದರು. ಲ್ಯಾಂಪ್ಸ್ ಸಂಸ್ಥೆಯ ಉಪಾದ್ಯಕ್ಷೆ ಲಲಿತಾ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕರು, ಸಿಬ್ಬಂಧಿವರ್ಗವದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News