ಕೋಲಾರ: ಪ್ರಧಾನಿ ಮೋದಿ ರಾಜೀನಾಮೆಗೆ ಒತ್ತಾಯಿಸಿ ಜಿಲ್ಲಾ ಯುವ ಕಾಂಗ್ರೆಸ್ ಪ್ರತಿಭಟನೆ

Update: 2018-10-17 14:22 GMT

ಕೋಲಾರ,ಅ.17: ರಫೆಲ್ ಹಗರಣದಲ್ಲಿ ಭಾಗಿಯಾಗಿರುವ ಪ್ರಧಾನಿ ನರೇಂದ್ರಮೋದಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಕಾಲೇಜು ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

'ದೇಶೀಯ ಎಚ್‍ಎಎಲ್ ಸಂಸ್ಥೆಯು ರಕ್ಷಣಾ ಇಲಾಖೆಗೆ ಯುದ್ದವಿಮಾನ ಪೂರೈಸುತ್ತಿತ್ತು. ಹಿಂದಿನ ಯುಪಿಎ ಸರ್ಕಾರದಲ್ಲಿ ಪ್ರತಿ ಯುದ್ದ ವಿಮಾನಕ್ಕೆ 570 ಕೋಟಿ ರೂ. ವೆಚ್ಚದಲ್ಲಿ 126 ಯುದ್ದವಿಮಾನ ಖರೀದಿಸಲು ಮಾಡಿಕೊಂಡಿದ್ದ ಒಪ್ಪಂದವನ್ನು ಬದಲಿಸಿ ಪ್ರಧಾನಿ ಮೋದಿ ಒಂದು ಯುದ್ದ ವಿಮಾನದ ಖರೀದಿ ವೆಚ್ಚವನ್ನು 1670 ಕೋಟಿ ರೂ. ಏರಿಸಿ ರಷ್ಯಾದಿಂದ ಕೇವಲ 36 ವಿಮಾನ ಖರೀದಿಸಲು ಮುಂದಾಗಿ ಉದ್ಯಮಿ ಅನಿಲ್ ಅಂಬಾನಿಗೆ ಸಹಾಯ ಮಾಡಿದ್ದಾರೆ. ಈ ಡೀಲ್‍ನಲ್ಲಿ ಬಹುಕೋಟಿ ಹಗರಣ ನಡೆದಿದೆ ಎಂದು ಆರೋಪಿಸಿದರು.

ರಫೆಲ್ ಹಗರಣದಲ್ಲಿ ಭಾಗಿಯಾಗಿರುವ ರಕ್ಷಣಾ ಸಚಿವೆ ನಿರ್ಮಲ ಸೀತರಾಮ್ ಹಗರಣ ಮುಚ್ಚಿ ಹಾಕುವ ಸಲುವಾಗಿ ವಿದೇಶದಲ್ಲಿ ಓಡಾಡಿಕೊಂಡಿದ್ದಾರೆ. ಡೀಲ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಭಾಗಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವೆ ನಿರ್ಮಲ ಸೀತಾರಾಂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಕೆ.ಶಿವಕುಮಾರ್, ಯುವ ಕಾಂಗ್ರೇಸ್ ರಾಜ್ಯ ಕಾರ್ಯದರ್ಶಿ ಲಿಯಾಕತ್, ಮುಖಂಡ ಜಬೀವುಲ್ಲಾ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್ ಪ್ರಾನ್ಸಿಸ್ ಬೆನಿಟೋ, ಪ್ರಧಾನ ಕಾರ್ಯದರ್ಶಿ ನಾಗಭೂಷಣ್ ರೆಡ್ಡಿ, ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News