ಕಬ್ಬಿನ ಬಾಕಿ ಹಣ ತಕ್ಷಣ ಪಾವತಿಗೆ ಸೂಚನೆ: ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಜೊತೆ ಬೆಳಗಾವಿ ಡಿಸಿ ಸಭೆ

Update: 2018-10-17 14:32 GMT

ಬೆಳಗಾವಿ, ಅ.17: ರೈತರ ಶ್ರಮದ ಫಲವಾಗಿ ಕಾರ್ಖಾನೆಗಳಿಗೆ ಸಾಕಷ್ಟು ಕಬ್ಬು ಪೂರೈಕೆ ಆಗುತ್ತಿದೆ. ಕಾರ್ಖಾನೆಗಳು ಇದನ್ನು ಮನಗಂಡು ಕಬ್ಬು ಪೂರೈಸಿದ ರೈತರಿಗೆ ತಕ್ಷಣ ಬಾಕಿ ಹಣ ಬಿಡುಗಡೆಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಸೂಚನೆ ನೀಡಿದ್ದಾರೆ.

ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಯ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೆಲವು ಕಾರ್ಖಾನೆಗಳು ಕಬ್ಬಿನ ಬಾಕಿ ಹಣ ಉಳಿಸಿಕೊಂಡಿರುವುದರಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಕಾರ್ಖಾನೆಗಳು ರೈತರ ನೋವಿಗೆ ಸ್ಪಂದಿಸಬೇಕು. ಬಾಕಿ ಪಾವತಿಗೆ ಕೋರಿ ಕಾರ್ಖಾನೆಗೆ ಬರುವ ರೈತರ ಜೊತೆ ಸೌಜನ್ಯದಿಂದ ವರ್ತಿಸಬೇಕು ಎಂದು ಅವರು ಹೇಳಿದರು.

ಸರಕಾರ ರೂಪಿಸಿರುವ ನಿಯಮಾವಳಿ ಮತ್ತು ನಿಗದಿಪಡಿಸಿದ ದರದ ಪ್ರಕಾರವೇ ಕಾರ್ಖಾನೆಗಳು ಬಾಕಿ ಪಾವತಿಸಬೇಕು. ಕಾರ್ಖಾನೆಗಳು ಪ್ರಸಕ್ತ ಹಂಗಾಮಿಗೆ ಕಬ್ಬು ನುರಿಸುವುದನ್ನು ತಕ್ಷಣ ಆರಂಭಿಸಬೇಕು ಮತ್ತು ಇದೇ ವೇಳೆಗೆ ಹಳೆಯ ಬಾಕಿ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಮಲಪ್ರಭಾ, ಘಟಪ್ರಭಾ ಹಾಗೂ ಸೋಮೇಶ್ವರ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿ, ಯಾವುದೇ ಕಾರಣಕ್ಕೂ ಹಣ ಪಾವತಿಸಲು ವಿಳಂಬ ಮಾಡಬಾರದು ಎಂದು ಹೇಳಿದರು. ಇದಕ್ಕೆ ಸ್ಪಂದಿಸಿದ ಸದರಿ ಕಾರ್ಖಾನೆಗಳ ಪ್ರತಿನಿಧಿಗಳು, ಅ.25ರೊಳಗೆ ಬಿಲ್ ಪಾವತಿಸುವುದಾಗಿ ತಿಳಿಸಿದರು. ಸಕ್ಕರೆ ದರ ಇಳಿಕೆಗೊಂಡಿದ್ದರಿಂದ ಪೂರ್ಣ ಬಿಲ್ ಪಾವತಿ ಸಾಧ್ಯವಾಗಿರಲಿಲ್ಲ ಎಂದು ಅವರು ವಿವರಿಸಿದರು.

ಸಕ್ಕರೆ ಕಾರ್ಖಾನೆಗಳು ತಾವು ಉತ್ಪಾದಿಸುವ ಪ್ರತಿ ಟನ್ ಸಕ್ಕರೆಗೆ ಒಂದು ರೂಪಾಯಿಯಂತೆ ನಿಜಲಿಂಗಪ್ಪಸಕ್ಕರೆ ಸಂಸ್ಥೆಗೆ ಪಾವತಿಸಬೇಕು. ಕೆಲ ಕಾರ್ಖಾನೆಗಳು ಈ ಹಣವನ್ನೂ ಬಾಕಿ ಉಳಿಸಿಕೊಂಡಿದ್ದು, ಅದನ್ನು ಕೂಡ ತಕ್ಷಣ ಪಾವತಿಸಬೇಕು ಎಂದು ಡಾ.ಬೊಮ್ಮನಹಳ್ಳಿ ತಿಳಿಸಿದರು.

ಪೂರ್ತಿ ಹಣ ಪಾವತಿಸಿರುವ ಬಗ್ಗೆ ಪ್ರಮಾಣಪತ್ರ ನೀಡಿದ ಬಳಿಕವೇ ಲೈಸೆನ್ಸ್ ನವೀಕರಣಕ್ಕೆ ಅವಕಾಶ ಇರುವುದರಿಂದ ಮುಂಬರುವ ದಿನಗಳಲ್ಲಿ ಕಾರ್ಖಾನೆಗಳು ತಮ್ಮ ಉತ್ಪಾದನೆಗೆ ತಕ್ಕಂತೆ ಸಕ್ಕರೆ ಸಂಸ್ಥೆಗೆ ಹಣ ಪಾವತಿಸಿದ ಬಳಿಕವೇ ಪ್ರಮಾಣಪತ್ರ ನೀಡಬೇಕು ಎಂದು ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಅಧಿಕಾರಿಗೆ ಅವರು ಸೂಚನೆ ನೀಡಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಡಾ.ಪ್ರವೀಣ್ ಬಾಗೇವಾಡಿ ಉಪಸ್ಥಿತರಿದ್ದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಸೈಯದ್ ಬಾನು ಆಫ್ರಿನ್ ಬಳ್ಳಾರಿ ಸಭೆಯನ್ನು ನಿರ್ವಹಿಸಿದರು. ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಯ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News