ಕರ್ನಾಟಕದ 'ಸಕಾಲ ಯೋಜನೆ'ಗೆ ಪ್ರಧಾನ ಮಂತ್ರಿಗಳ ಪ್ರಶಸ್ತಿ

Update: 2018-10-17 14:47 GMT

ಬೆಂಗಳೂರು, ಅ.17: ಸಾರ್ವಜನಿಕ ಆಡಳಿತದಲ್ಲಿನ ಉತ್ಕೃಷ್ಟತೆಗಾಗಿ ಪ್ರಧಾನ ಮಂತ್ರಿಗಳ ಕಚೇರಿಯಿಂದ ಕರ್ನಾಟಕದ ಸಕಾಲ ಯೋಜನೆಗೆ ಏಪ್ರಿಲ್ 2015ರಲ್ಲಿ ಘೋಷಣೆಯಾಗಿದ್ದ ಪ್ರಶಸ್ತಿಯನ್ನು ಇಂದು ರಾಜ್ಯದ ಮುಖ್ಯ ಕಾರ್ಯದರ್ಶಿಗಳು ʼಸಕಾಲʼ ತಂಡದಲ್ಲಿದ್ದ ಅಧಿಕಾರಿಗಳಿಗೆ ನೀಡಿದರು. 

ಡಾ.ಶಾಲಿನಿ ರಜನೀಶ್ ಅವರು ನೇತೃತ್ವ ವಹಿಸಿದ್ದ ತಂಡದಲ್ಲಿ ಅಧಿಕಾರಿಗಳಾದ ಡಾ.ಬಿ.ಆರ್.ಮಮತಾ, ಶ್ರೀ ವರಪ್ರಸಾದ ರೆಡ್ಡಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಅಧ್ಯಕ್ಷರಾಗಿದ್ದ ಶ್ರೀ ಎಲ್.ಭೈರಪ್ಪ ಅವರು ಇದ್ದರು. 

ಅಧಿಕಾರಿಗಳ ತಮ್ಮ ತಂಡ ಮಾಡಿದ ಪ್ರಯತ್ನವನ್ನು ಗುರುತಿಸಿದ್ದಕ್ಕಾಗಿ ಮುಖ್ಯ ಕಾರ್ಯದರ್ಶಿಗಳಿಗೆ ಧನ್ಯವಾದ ಸಲ್ಲಿಸಿದ ಡಾ.ಶಾಲಿನಿ ರಜನೀಶ್ ಅವರ ನೇತೃತ್ವದ ತಂಡ, ಮುಖ್ಯ ಕಾರ್ಯದರ್ಶಿಗಳ ಈ ಉಪಕ್ರಮದಿಂದಾಗಿ ಅಧಿಕಾರಿಗಳಿಗೆ ಇನ್ನಷ್ಟು ಸಮರ್ಥವಾಗಿ ಕಾರ್ಯನಿರ್ವಹಿಸಲು ಸ್ಪೂರ್ತಿ ದೊರೆಯಲಿದೆ ಎಂದಿತು. 

'ಸಕಾಲʼ- ಇಂದು ನಾಳೆ ಇನ್ನಿಲ್ಲ, ಹೇಳಿದ ಸಮಯ ತಪ್ಪೊಲ್ಲ
ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ-2011 ಎಂದು ಕರೆಯಲ್ಪಡುವ ʼಸಕಾಲʼ ಯೋಜನೆ ಕರ್ನಾಟಕದ ಹೆಮ್ಮೆಯ ಯೋಜನೆಯಾಗಿದೆ. ನಾಗರೀಕ ಸೇವೆಗಳನ್ನು ಪಡೆಯುವುದು, ನಾಗರಿಕರ ಹಕ್ಕು ಎಂಬ ಅಂಶವನ್ನು ಪ್ರತಿಪಾದಿಸುವ ಈ ಯೋಜನೆ ಸಕಾಲದಲ್ಲಿ ಸರ್ಕಾರಿ ಸೇವೆಗಳನ್ನು ಯಾವುದೇ ತೊಂದರೆ ಇಲ್ಲದೆ ಜನರಿಗೆ ತಲುಪಿಸುವ ಆಶಯವನ್ನು ಪ್ರಮುಖವಾಗಿರಿಸಿಕೊಂಡಿದೆ. ಈ ಯೋಜನೆಗೆ ಬೆಂಬಲ ನೀಡುವಂತೆ ಇ-ಆಡಳಿತವನ್ನು ಜಾರಿಗೆ ತಂದ ಕರ್ನಾಟಕ ಸರ್ಕಾರ ಸರ್ಕಾರಿ ಸೇವೆಗಳಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಜನರಿಗೆ ಒದಗಿಸುವ ಅತ್ಯುತ್ತಮ ಜನಸ್ನೇಹಿ ಕಾಯ್ದೆಯನ್ನಾಗಿ ರೂಪಿಸಿತು. 

ಇಂದು ಸಕಾಲ ಕಾಯ್ದೆಯಡಿಯಲ್ಲಿ 729 ಸೇವೆಗಳನ್ನು ನಾಗರಿಕರಿಗೆ ಪೂರೈಸಲಾಗುತ್ತಿದೆ. ಇಡೀ ದೇಶದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯ ಸೇವೆಗಳನ್ನು ಕಾಯ್ದೆಯ ವ್ಯಾಪ್ತಿಯಡಿಗೆ ತಂದ ಹೆಗ್ಗಳಿಕೆ ಕರ್ನಾಟಕದ್ದಾಗಿದೆ. ಸರ್ಕಾರಿ ಕಚೇರಿಗಳಲ್ಲಿನ ಸೇವೆಗಳನ್ನು ಪಡೆದುಕೊಳ್ಳಲು ನಾಗರಿಕರು ಈವರೆಗೆ ಪಡುತ್ತಿದ್ದ ಅನಪೇಕ್ಷಿತ ಶ್ರಮ, ಉದ್ದ ಸಾಲುಗಳು ಮತ್ತು ಅನಗತ್ಯ ಸಮಯ ಹರಣವನ್ನು ಈ ಕಾಯ್ದೆಯ ಮೂಲಕ ತಪ್ಪಿಸಲಾಗಿದೆ. 

ಈ ಕಾಯ್ದೆಯ ಯಶಸ್ವಿ ಅನುಷ್ಠಾನದಲ್ಲಿ 2,20,000ದಷ್ಟಿರುವ ಸರ್ಕಾರಿ ನೌಕರರ ಪಾತ್ರವೂ ಗಮನಾರ್ಹ. ನಾಗರಿಕರ ಬಹುತೇಕ ಬೇಡಿಕೆಗಳ ಶೇ.98ರಷ್ಟನ್ನು ಕ್ಲಪ್ತ ಸಮಯದಲ್ಲಿ ನೀಡಿದ, ನೀಡುತ್ತಿರುವ ಹೆಗ್ಗಳಿಕೆ ಕರ್ನಾಟಕ ಸರ್ಕಾರಿ ನೌಕರರದ್ದಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News