ಹನೂರು: ಹುಬ್ಬೆಹುಣಸೆ, ಉಡುತೊರೆ, ಮಿನತ್ತಹಳ್ಳ ಜಲಾಶಯಕ್ಕೆ ಬಾಗಿನ ಅರ್ಪಣೆ

Update: 2018-10-17 15:34 GMT

ಹನೂರು,ಅ.17: ತಾಲೂಕಿನ ಹುಬ್ಬೆಹುಣಸೆ, ಅಜ್ಜೀಪುರ ಸಮೀಪದ ಉಡುತೊರೆ ಹಾಗೂ ಹೂಗ್ಯಂ ಬಳಿಯ ಮಿನತ್ತಹಳ್ಳ(ಯರಂಬಾಡಿ) ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಸಂಸದ ಆರ್. ಧ್ರುವನಾರಾಯಣ್ ಹಾಗೂ ಶಾಸಕ ಆರ್.ನರೇಂದ್ರರಾಜುಗೌಡ ಬುಧವಾರ ಬಾಗಿನ ಅರ್ಪಿಸಿದರು. 

ಬಾಗಿನ ಅರ್ಪಿಸಿದ ಬಳಿಕ ಸಂಸದ ಆರ್. ಧ್ರುವನಾರಾಯಣ್ ಮಾತನಾಡಿ, ದಿವಂಗತ ಜಿ.ವಿ ಗೌಡರು ಹಾಗೂ ಸಚಿವರಾಗಿದ್ದ ದಿ.ರಾಜುಗೌಡರು ಕ್ಷೇತ್ರದ ರೈತರಿಗೆ ನೀರಾವರಿ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ದೂರದೃಷ್ಠಿ ಇಟ್ಟುಕೊಂಡು ಗುಂಡಾಲ್ ಜಲಾಶಯ, ರಾಮನಗುಡ್ಡೆ, ಹುಬ್ಬೆಹುಣಸೆ, ಕೌಳಿಹಳ್ಳ, ಗೋಪಿನಾಥಂ, ಹೂಗ್ಯಂ, ಉಡುತೊರೆ ಜಲಾಶಯ ಸೇರಿದಂತೆ 8 ಡ್ಯಾಂಗಳನ್ನು ಅಂದಿನ ಕಾಲದಲ್ಲಿಯೇ ನಿರ್ಮಿಸಿದ್ದು, ಜಿಲ್ಲೆಯಲ್ಲಿಯೇ ಹನೂರು ಕ್ಷೇತ್ರವು ಹೆಚ್ಚು ಜಲಾಶಯವನ್ನು ಹೊಂದಿದೆ. ಆದರೆ ಕಳೆದ 8-10 ವರ್ಷದಿಂದ ಕ್ಷೇತ್ರದಲ್ಲಿ ಮಳೆಯಾಗದೆ ಈ ಭಾಗದ ಕೆರೆಕಟ್ಟೆಗಳು ಹಾಗೂ ಹಳ್ಳಕೊಳ್ಳಗಳು ನೀರಿಲ್ಲದೇ ಬತ್ತಿಹೋಗಿದ್ದವು. ಅಲ್ಲದೆ ಭಾಗದ ಬಹುತೇಕ ಡ್ಯಾಂಗಳಲ್ಲಿ ನೀರಿನ ಸಂಗ್ರಹಣೆ ಪ್ರಮಾಣ ಕಡಿಮೆಯಾಗಿತ್ತು. ಇದರಿಂದ ರೈತರು ಕೃಷಿಗೆ ನೀರಿಲ್ಲದೇ ತೊಂದರೆಯನ್ನು ಅನುಭವಿಸಿದ್ದರು ಎಂದು ಹೇಳಿದರು.

ಕಳೆದ ಮೂರು ವರ್ಷಗಳ ಹಿಂದೆ ಸರಿಯಾಗಿ ಮಳೆಯಾಗದೆ ಗ್ರಾಮಗಳ ಭೇಟಿ ಮಾಡುತ್ತಿದ್ದ ಸಂದರ್ಭದಲ್ಲಿ ಖಾಲಿ ಬಿಂದಿಗೆಗಳ ಮೂಲಕ ಜನರು ಪ್ರತಿಭಟಿಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು  ಜಲಾಶಯಗಳು ತುಂಬಿ ಅಂತರ್ಜಲ ಅಭಿವೃದ್ದಿ, ಜಾನುವಾರುಗಳಿಗೆ ಮೇವು ಸಿಗುತ್ತಿದೆ ಹಾಗು ರೈತರಿಗೆ ಕೃಷಿ ಮಾಡಲು ಅನುಕೂಲ ಆಗುತ್ತಿದೆ ಎಂದು ಹೇಳಿದರು. ಹನೂರು ತಾಲೂಕಿಗೆ ಶಾಶ್ವತ ಕುಡಿಯುವ ನೀರು ಮತ್ತು ಕೆರೆಗಳಿಗೆ ನೀರು ತುಂಬಿಸುವ ಯೊಜನೆ ಅನುಮೋದನೆಯಾಗಿದ್ದು, ಶೀಘ್ರದಲ್ಲಿಯೇ ಯೋಜನೆ ಪ್ರಾರಂಭಿಸಲಾಗುವುದು ಎಂದು ಹೇಳಿದರು.

26 ಕೋಟಿ ರೂ. ಗೆ ಪ್ರಸ್ತಾವನೆ: ಶಾಸಕ ಆರ್. ನರೇಂದ್ರ ಮಾತನಾಡಿ, ಜಿಲ್ಲೆಯಲ್ಲಿಯೇ ಕ್ಷೇತ್ರದಲ್ಲಿ ಹೆಚ್ಚು ಜಲಾಶಯಗಳಿದೆ. ಆದರೆ ಇದರಲ್ಲಿ ಕೆಲವು ದುರಸ್ತಿಗೊಂಡಿದೆ. ಪರಿಣಾಮ ರೈತರಿಗೆ ಸಮರ್ಪಕ ನೀರಾವರಿ ಸೌಕರ್ಯ ಒದಗಿಸಲು ತೊಡಕಾಗಿ ಪರಿಣಮಿಸಿದೆ. ಈ ದಿಸೆಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿನ ಜಲಾಶಯಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜಲ ಸಂಪನ್ಮೂಲ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, 26 ಕೋಟಿ ರೂ ಅನುದಾನದ ಅಗತ್ಯತೆಯ ಬಗ್ಗೆ ಸಚಿವರಾದ ಡಿ.ಕೆ ಶಿವಕುಮಾರ್ ರವರಿಗೆ ಮನವಿ ಮಾಡಲಾಗಿದೆ. ಹಂತಹಂತವಾಗಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಅಲ್ಲದೇ ಕಳೆದ ಅವಧಿಯಲ್ಲಿ ಕ್ಷೇತ್ರದ 291 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರನ್ನು ಒದಗಿಸುವ ಬಹುಗ್ರಾಮ ಕುಡಿಯುವ ಯೋಜನೆ ಮಂಜೂರಾಗಿದೆ. ಜೊತೆಗೆ ಕ್ಷೇತ್ರದ 3 ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸುವ ಯೋಜನೆ ಮಂಜೂರಾಗಿದ್ದು, ಸರ್ಕಾರದಿಂದ ಅನುದಾನವು ಬಿಡುಗಡೆಯಾಗಿದ್ದು, ಪ್ರಕ್ರಿಯೆ ಟೆಂಡರ್ ಹಂತದಲ್ಲಿದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಯೋಗೇಶ್, ಸದಸ್ಯ ಬಸವರಾಜು, ತಾಪಂ ಅಧ್ಯಕ್ಷ ಆರ್.ರಾಜು, ಉಪಾಧ್ಯಕ್ಷೆ ಲತಾ, ಸದಸ್ಯೆ  ಸ್ಥಾಯಿ ಸಮಿತಿ ಅಧ್ಯಕ್ಷ ಜವಾದ್ ಆಹಮದ್, ನಟರಾಜು, ಪಪಂ ಅಧ್ಯಕ್ಷೆ ಮಮತಾ, ಉಪಾಧ್ಯಕ್ಷ ಬಸವರಾಜು, ನೀರಾವರಿ ಇಲಾಖೆಯ ಇಇ ರಘು, ಎಇಇ ಪ್ರಶಾಂತ್, ಪ್ರತೀಖ್, ಮುಖಂಡರಾದ ಮಾದೇಶ್, ಸಿದ್ದರಾಜು, ರಘು, ಎನ್.ಆರ್.ಮಾದೇಶ್, ಹಾಗೂ ಇನ್ನಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News