ಗೋವಾ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲಿರುವ ಪಾರಿಕ್ಕರ್?

Update: 2018-10-17 16:32 GMT

ಪಣಜಿ,ಅ.17: ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅನಾರೋಗ್ಯದ ಕಾರಣದಿಂದ ಸರಕಾರಿ ಕಾರ್ಯಗಳಿಂದ ದೂರ ಉಳಿದಿರುವ ಕಾರಣ ಅವರ ಸ್ಥಾನಕ್ಕೆ ಇನ್ನೋರ್ವ ನಾಯಕನನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಬಿಜೆಪಿ ಚಾಲನೆ ನೀಡಿದೆ ಎಂದು ವರದಿಗಳು ತಿಳಿಸಿವೆ.

ಬುಧವಾರ ಸಂಜೆ ಬಿಜೆಪಿ ಮಿತ್ರಗಳಾದ ಮಹಾರಾಷ್ಟ್ರ ಗೋಮಂತಕ ಪಕ್ಷ (ಎಂಜಿಪಿ) ಮತ್ತು ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‌ಪಿ)ಯ ನಾಯಕರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜೊತೆ ಮಾತುಕತೆ ನಡೆಸಿರುವುದು ಈ ಮಾತಿಗೆ ಪುಷ್ಠಿ ನೀಡಿದೆ. ಕಾಂಗ್ರೆಸ್‌ನ ಇಬ್ಬರು ಶಾಸಕರು ಬಿಜೆಪಿ ಸೇರುವ ಮೂಲಕ ಕೇಸರಿ ಪಕ್ಷವು ತನ್ನ ಸ್ಥಾನವನ್ನು ಉತ್ತಮಪಡಿಸಿರುವ ಕಾರಣ ಮಿತ್ರಪಕ್ಷಗಳು ಸರಕಾರದ ಮೇಲಿನ ತಮ್ಮ ಹಿಡಿತವನ್ನು ಕಳೆದುಕೊಂಡಿದೆ. 40 ಸ್ಥಾನಗಳ ಗೋವಾ ವಿಧಾನಸಭೆಯಲ್ಲಿ ಬಿಜೆಪಿ 13 ಸ್ಥಾನಗಳನ್ನು ಹೊಂದಿದ್ದರೆ ಮಿತ್ರಪಕ್ಷಗಳಾದ ಎಂಜಿಪಿ ಮತ್ತು ಜಿಎಫ್‌ಪಿ ತಲಾ ಮೂರು ಸ್ಥಾನಗಳನ್ನು ಹೊಂದಿದೆ. ಇಬ್ಬರು ಸ್ವತಂತ್ರ ಶಾಸಕರ ಬೆಂಬಲದಿಂದ ಬಿಜೆಪಿ ಸದ್ಯ ಸರಕಾರ ನಡೆಸುತ್ತಿದೆ.

 ಪಾರಿಕ್ಕರ್ ಆರೋಗ್ಯ ಬಿಗಡಾಯಿಸಿರುವ ಕಾರಣ ತಮ್ಮ ಪಕ್ಷದ ನಾಯಕ ಸುದಿನ್ ಧವಲಿಕರ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಬೇಕು ಎಂದು ಎಂಜಿಪಿ ಈ ಹಿಂದೆ ಆಗ್ರಹಿಸಿತ್ತು. ಆದರೆ ಇದೀಗ ಕಾಂಗ್ರೆಸ್‌ನ ಇಬ್ಬರು ಶಾಸಕರು ಬಿಜೆಪಿ ಜೊತೆ ಕೈಜೋಡಿಸಿರುವುದರಿಂದ ಸರಕಾರದ ಮೇಲಿನ ಎಂಜಿಪಿ ಹಿಡಿತ ಕಡಿಮೆಯಾಗಿದೆ. ಹಾಗಾಗಿ ಪಕ್ಷವು ತನ್ನ ನಿಲುವನ್ನು ಸಡಿಲಗೊಳಿಸಿದೆ ಎಂದು ವರದಿ ತಿಳಿಸಿದೆ. ಸದ್ಯ ರಾಜ್ಯ ಆರೋಗ್ಯ ಸಚಿವರಾಗಿರುವ ವಿಶ್ವಜಿತ್ ರಾಣೆ ರಾಜ್ಯ ಮುಖ್ಯಮಂತ್ರಿ ಸ್ಥಾನದ ಪ್ರಮುಖ ಉಮೇದುದಾರರಾಗಿದ್ದಾರೆ. ಕಾಂಗ್ರೆಸ್‌ನ ಇಬ್ಬರು ಶಾಸಕರು ಬಿಜೆಪಿಗೆ ಹಾರುವಲ್ಲಿ ರಾಣೆ ಪ್ರಮುಖ ಪಾತ್ರ ವಹಿಸಿದ್ದರು ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News