ಪಕ್ಷಗಳಿಗೆ ಅನಾಮಧೇಯ ದೇಣಿಗೆ ಮಿತಿಯನ್ನು ಕೆಳಗಿಳಿಸಲು ಚು.ಆಯೋಗ ಮನವಿ

Update: 2018-10-17 16:20 GMT

ಹೊಸದಿಲ್ಲಿ, ಅ.17: ರಾಜಕೀಯ ಪಕ್ಷಗಳಿಗೆ ಅನಾಮಧೇಯ ದೇಣಿಗೆಗಳ ಮಿತಿಯನ್ನು ಸದ್ಯದ 20,000ರೂ.ನಿಂದ 2,000ರೂ.ಗೆ ಇಳಿಸಬೇಕೆಂದು ಚುನಾವಣಾ ಆಯೋಗ ಮನವಿ ಮಾಡಿದೆ.

ಕಳೆದ ವಾರ ಈ ಕುರಿತು ಕಾನೂನು ಸಚಿವಾಲಯದ ಶಾಸಕಾಂಗ ಇಲಾಖೆಗೆ ಬರೆದ ಪತ್ರದಲ್ಲಿ, ವ್ಯಕ್ತಿಯೊಬ್ಬ ಪಕ್ಷಕ್ಕೆ ನೀಡುವ ದೇಣಿಗೆಯನ್ನು 2,000ರೂ.ಗೆ ಇಳಿಸುವ ತನ್ನ ಸಲಹೆಯನ್ನು ಸ್ವೀಕರಿಸಲಾಗಿದ್ದು ವಿತ್ತೀಯ ಕಾಯ್ದೆಯ ಭಾಗವಾಗಿ ಮಾಡಲಾಗಿದೆ. ಆದರೆ ಅನಾಮಧೇಯ ದೇಣಿಗೆಯ ಮೇಲಿನ ಮಿತಿಯನ್ನೂ 2,000ರೂ.ಗೆ ಇಳಿಸಬೇಕು ಎಂಬ ಮನವಿ ಈಗಲೂ ಬಾಕಿಯುಳಿದಿದೆ ಎಂದು ಆಯೋಗ ತಿಳಿಸಿದೆ.

1951ರ ಜನ ಪ್ರತಿನಿಧಿಗಳ ಕಾಯ್ದೆಯ 29ಸಿ ವಿಧಿಗೆ ತಿದ್ದುಪಡಿ ತರುವಂತೆ ಚುನಾವಣಾ ಆಯೋಗ 2017ರಲ್ಲಿ ಆಗ್ರಹಿಸಿತ್ತು. ಕಳೆದ ವಾರ ಬರೆಯಲಾದ ಪತ್ರದಲ್ಲಿ ಆಯೋಗವು ಮತ್ತೆ ತನ್ನ ಆಗ್ರಹವನ್ನು ಸರಕಾರಕ್ಕೆ ನೆನಪಿಸಿದೆ. ಅನಾಮಧೇಯ ಮೂಲದಿಂದ 20,000ರೂ.ವರೆಗೆ ಪಡೆಯಲು ಅವಕಾಶ ನೀಡಿರುವ ಕಾರಣ ಅದನ್ನು ನಗದಿನ ರೂಪದಲ್ಲೂ ಪಡೆಯಬಹುದಾಗಿದೆ. ಇದು, 2,000ರೂ.ಗಿಂತ ಹೆಚ್ಚಿನ ದೇಣಿಗೆಯನ್ನು ನಗದು ರೂಪಾದಲ್ಲಿ ಪಡೆಯಲಾಗುವುದರ ಮೇಲೆ ಹೇರಲಾಗಿರುವ ನಿಷೇಧದ ವಿರುದ್ಧವಾಗಿದೆ ಎಂದು ಆಯೋಗ ಅಭಿಪ್ರಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News