ಚಂಡೀಗಢ: ಸಿಖ್ ಮಹಿಳೆಯರಿಗೆ ಹೆಲ್ಮೆಟ್ ಧಾರಣೆ ಐಚ್ಛಿಕಗೊಳಿಸಲು ಸಲಹೆ

Update: 2018-10-17 16:56 GMT

ಹೊಸದಿಲ್ಲಿ, ಅ.17: ದ್ವಿಚಕ್ರ ವಾಹನ ಚಲಾಯಿಸುವ ಅಥವಾ ವಾಹನಗಳ ಹಿಂಬದಿಯಲ್ಲಿ ಕುಳಿತು ಸವಾರಿ ಮಾಡುವ ಸಿಖ್ ಮಹಿಳೆಯರಿಗೆ ಹೆಲ್ಮೆಟ್ ಧಾರಣೆ ಐಚ್ಛಿಕಗೊಳಿಸುವಂತೆ ಗೃಹ ಸಚಿವಾಲಯ ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢ ಆಡಳಿತಕ್ಕೆ ಸಲಹೆ ನೀಡಿದೆ.

ಎಲ್ಲಾ ಮಹಿಳೆಯರಿಗೂ ಹೆಲ್ಮೆಟ್ ಧರಿಸುವುದರಿಂದ ವಿನಾಯಿತಿ ನೀಡಬೇಕೆಂದು ಸಿಖ್ ಸಂಘಟನೆಗಳು ಮನವಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಚಂಡೀಗಢದ ಆಡಳಿತವು ಗೃಹ ಸಚಿವಾಲಯದ ಸಲಹೆ ಕೇಳಿತ್ತು.

ಈ ಮೊದಲು ಚಂಡೀಗಢದ ಆಡಳಿತವು ಎಲ್ಲಾ ಮಹಿಳೆಯರಿಗೆ ಹೆಲ್ಮೆಟ್ ಧರಿಸುವುದರಿಂದ ವಿನಾಯಿತಿ ನೀಡಿತ್ತು. 2018ರ ಜುಲೈ 6ರಂದು ತನ್ನ ಆದೇಶವನ್ನು ತಿದ್ದುಪಡಿಗೊಳಿಸಿದ್ದ ಚಂಡೀಗಢ ಆಡಳಿತ, ಟರ್ಬನ್ ಧರಿಸಿರುವ ಸಿಖ್ ಮಹಿಳೆಯರಿಗೆ ಮಾತ್ರ ವಿನಾಯಿತಿ ಎಂದು ಸ್ಪಷ್ಟಪಡಿಸಿತ್ತು. ಇದನ್ನು ವಿರೋಧಿಸಿದ ಸಿಖ್ ಸಂಘಟನೆಗಳು ಎಲ್ಲಾ ಸಿಖ್ ಮಹಿಳೆಯರಿಗೂ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿದ್ದವು.

 ಬಳಿಕ ಶಿರೋಮಣಿ ಅಕಾಲಿದಳ ಮುಖಂಡ ಮತ್ತು ಮಾಜಿ ಉಪಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್ ನೇತೃತ್ವದಲ್ಲಿ ಸಿಖ್ ಸಂಘಟನೆಗಳು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‌ರನ್ನು ಭೇಟಿಯಾಗಿ ಎಲ್ಲಾ ಸಿಖ್ ಮಹಿಳೆಯರಿಗೂ ಹೆಲ್ಮೆಟ್ ಧರಿಸುವುದರಿಂದ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿದ್ದವು. ಇದೀಗ ಹೊಸ ನಿಯಮವು ಸಿಖ್ ಮಹಿಳೆಯರಿಗೆ ಹೆಲ್ಮೆಟ್ ಧಾರಣೆಯನ್ನು ಐಚ್ಛಿಕಗೊಳಿಸಲಿದೆ.

ಈ ಬಗ್ಗೆ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿರುವ ಪಂಜಾಬ್ ಮತ್ತು ಹರ್ಯಾನ ಹೈಕೋರ್ಟ್‌ನ ವಿಭಾಗೀಯ ಪೀಠವು, ಲಿಂಗ ಆಧಾರದಲ್ಲಿ ರಸ್ತೆ ಅಪಘಾತ ಸಂಭವಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಸಿಖ್ ಮಹಿಳೆಯರಿಗೆ ಯಾವ ಕಾರಣಕ್ಕೆ ನಿಯಮದಿಂದ ವಿನಾಯಿತಿ ನೀಡಲಾಗಿದೆ ಎಂದು ಚಂಡೀಗಢ ಆಡಳಿತವನ್ನು ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News