2017ರಲ್ಲಿ ಅಮೆರಿಕನ್ ಪೌರತ್ವ ಪಡೆದ 50,000ಕ್ಕೂ ಅಧಿಕ ಭಾರತೀಯರು

Update: 2018-10-19 08:32 GMT

ವಾಷಿಂಗ್ಟನ್, ಅ.19: ಕಳೆದ ವರ್ಷ 50,000ಕ್ಕೂ ಅಧಿಕ ಭಾರತೀಯರಿಗೆ ಅಮೆರಿಕದ ಪೌರತ್ವ ನೀಡಲಾಗಿದ್ದು, ಇದು ಹಿಂದಿನ ವರ್ಷಕ್ಕಿಂತ 4,000ದಷ್ಟು ಅಧಿಕವಾಗಿದೆ ಎಂದು ಹೋಮ್ ಲ್ಯಾಂಡ್ ಸೆಕ್ಯುರಿಟಿ ಇಲಾಖೆ ತನ್ನ ವಾರ್ಷಿಕ ಇಮಿಗ್ರೇಶನ್ ವರದಿಯಲ್ಲಿ  ತಿಳಿಸಿದೆ.

ಈ ವರದಿಯ ಪ್ರಕಾರ 2017ರಲ್ಲಿ  50,802 ಭಾರತೀಯರು ಅಮೆರಿಕಾದ ಪೌರತ್ವ ಪಡೆದಿದ್ದಾರೆ. 2016ರಲ್ಲಿ ಅಮೆರಿಕಾ ಪೌರತ್ವ ಪಡೆದ ಭಾರತೀಯರ ಸಂಖ್ಯೆ 46,188  ಆಗಿದ್ದರೆ, 2015ರಲ್ಲಿ ಈ ಸಂಖ್ಯೆ 42,213 ಆಗಿತ್ತು.

ಕಳೆದ ವರ್ಷ ಭಾರತೀಯರೂ ಸೇರಿದಂತೆ 7,07,265 ವಿದೇಶೀಯರು ಅಮೆರಿಕಾದ ಪೌರತ್ವ ಪಡೆದಿದ್ದಾರೆ. ಈ ಸಂಖ್ಯೆ 2016 ಹಾಗೂ 2015ರಲ್ಲಿ ಕ್ರಮವಾಗಿ 7,53,060 ಹಾಗೂ 7,30,259 ಆಗಿತ್ತು.

ಅಮೆರಿಕ ಪೌರತ್ವ ಪಡೆದ ವಿದೇಶೀಯರಲ್ಲಿ ಮೆಕ್ಸಿಕನ್ನರ ಸಂಖ್ಯೆ (1,18,559) ಆಗಿತ್ತು. ಎರಡನೇ ಸ್ಥಾನ ಭಾರತಕ್ಕೆ ಹೋಗಿದ್ದರೆ ನಂತರದ ಸ್ಥಾನಗಳು ಚೀನಾ (37,674), ಫಿಲಿಪ್ಪೀನ್ಸ್ (36,828), ಡೊಮಿನಿಕನ್ ರಿಪಬ್ಲಿಕ್ (29,734) ಹಾಗೂ ಕ್ಯುಬಾ (25,961) ದೇಶಗಳಿಗೆ ಹೋಗಿವೆ.

ಅಂಕಿಅಂಶಗಳಿಂದ ತಿಳಿದು ಬಂದಂತೆ ಅಮೆರಿಕಾ ಪೌರತ್ವ ಪಡೆದವರಲ್ಲಿ ಪುರುಷರಿಗಿಂತ (3,10,987) ಮಹಿಳೆಯರ (3,96,234) ಸಂಖ್ಯೆಯೇ ಅಧಿಕವಾಗಿತ್ತು. ಹೊಸದಾಗಿ ಅಮೆರಿಕಾ ಪೌರತ್ವ ಪಡೆದ ಭಾರತೀಯ ನಾಗರಿಕರಲ್ಲಿ 12,000 ಮಂದಿ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದರೆ, 5,900 ಮಂದಿ ನ್ಯೂಜೆರ್ಸಿ ಹಾಗೂ 3,700 ಮಂದಿ ಟೆಕ್ಸಾಸ್‍ನಲ್ಲಿ ನೆಲೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News